ಬೆಂಗಳೂರು: ಅತ್ಯುತ್ತಮ ಕೈಗಾರಿಕಾ ನೀತಿ, ಮೂಲ ಸೌಕರ್ಯ, ಮಾನವ ಸಂವನ್ಮೂಲ, ಪರಿಸರದಿಂದಾಗಿ ಕರ್ನಾಟಕ ರಾಜ್ಯ ಭಾರತದಲ್ಲೇ ಬಂಡವಾಳ ಹೂಡಿಕೆದಾರರ ನೆಚ್ಚಿನ ತಾಣವಾಗಿದೆ. ಕರ್ನಾಟಕ ಎಂದರೆ ಕೇವಲ ಬೆಂಗಳೂರು ಮಾತ್ರವಲ್ಲ, ಮೈಸೂರು, ಹುಬ್ಭಳ್ಳಿ, ಮಂಗಳೂರು, ಬೆಳಗಾವಿ ನಗರಗಳಲ್ಲಿ ಬಂಡವಾಳ ಹೂಡಿಕೆಗೆ ಅಗತ್ಯ ನೆರವು ನೀಡಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ನೆದರ್ಲೆಂಡ್ ಪ್ರಧಾನ ಮಂತ್ರಿ ಮಾರ್ಕ್ ರುಟ್ಟೆ ಹಾಗೂ ಆ ದೇಶದ ಕಂಪನಿಗಳ ಪ್ರಮುಖರ ಜೊತೆ ಸಭೆ ನಡೆಸಿದ ನಂತರ ಮಾತನಾಡಿದ ಡಿಕೆಶಿ, ಕರ್ನಾಟಕ ರಾಜ್ಯ ನೆದರ್ಲೆಂಡ್ ಜತೆಗೆ ಉತ್ತಮ ಬಾಂಧವ್ಯ ಹೊಂದಿದ್ದು, ಸಂಬಂಧವನ್ನು ಇನ್ನಷ್ಟು ವೃದ್ಧಿಗೊಳಿಸಲು ನಾವು ಬಯಸುತ್ತೇವೆ. ಕರ್ನಾಟಕ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡುತ್ತಿರುವವರ ಪೈಕಿ ಡಚ್ ಉದ್ಯಮಿಗಳು ಪ್ರಮುಖರಾಗಿದ್ದಾರೆ. ಭಾರತದಲ್ಲಿ ನೆದರ್ಲೆಂಡ್ ಉದ್ಯಮಿಗಳ ಬಂಡವಾಳ ಹೂಡಿಕೆಯಲ್ಲಿ ಕರ್ನಾಟ ರಾಜ್ಯ ಶೇ.9ರಷ್ಟು ಬಂಡವಾಳವನ್ನು ಪಡೆದಿದೆ. ರಾಜ್ಯದಲ್ಲಿ 25ಕ್ಕೂ ಹೆಚ್ಚು ಡಚ್ ಕಂಪನಿಗಳು ಹೂಡಿಕೆ ಮಾಡಿವೆ. ಶೆಲ್ ಹಾಗೂ ಫಿಲಿಪ್ಸ್ ಕಂಪನಿಗಳ ಜಾಗತಿಕ ಕೇಂದ್ರಗಳು ಕರ್ನಾಟಕದಲ್ಲಿವೆ ಎಂದರು.
ಹೂಡಿಕೆದಾರರ ಸ್ನೇಹಿ ವಾತಾವರಣ ನಿರ್ಮಾಣ: ರಾಜ್ಯದಲ್ಲಿ ಬಂಡವಾಳ ಹೂಡಿಕೆದಾರರ ಸ್ನೇಹಿ ವಾತಾವರಣ ನಿರ್ಮಾಣಕ್ಕೆ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದ್ದು, 2022-23ನೇ ಆರ್ಥಿಕ ವರ್ಷದಲ್ಲಿ ಕರ್ನಾಟಕ ದೇಶದಲ್ಲೇ 2ನೇ ಅತಿದೊಡ್ಡ ವಿದೇಶಿ ಬಂಡವಾಳ ಹೂಡಿಕೆ ಆಕರ್ಷಿಸಿದೆ. ಆಮೂಲಕ ದೇಶದಲ್ಲಿನ ಹೂಡಿಕೆಯಲ್ಲಿ ಶೇ.25ರಷ್ಟು ಹೂಡಿಕೆ ಕರ್ನಾಟಕ ರಾಜ್ಯದಲ್ಲಿ ಆಗಿದೆ. ರಾಜ್ಯದಲ್ಲಿ 200ಕ್ಕೂ ಹೆಚ್ಚು ನೆದರ್ಲೆಂಡ್ ಕಂಪನಿಗಳು 1 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತ ಹೂಡಿಕೆ ಮಾಡಿ ಕಾರ್ಯನಿರ್ವಹಣೆ ಮಾಡುತ್ತಿವೆ. ಡಚ್ ಕಂಪನಿಗಳ ಜತೆಗಿನ ಈ ಬಾಂಧವ್ಯವನ್ನು ಮತ್ತಷ್ಟು ಸಧೃಡಗೊಳಿಸಲು ನಾವು ಉತ್ಸುಕರಾಗಿದ್ದೇವೆ. ಕರ್ನಾಟಕ ಹಾಗೂ ನೆದರ್ಲೆಂಡ್ ದೇಶ ಆಹಾರ ಉತ್ಪನ್ನ, ಜೈವಿಕ ತಂತ್ರಜ್ಞಾನ, ಫಾರ್ಮಾ, ಇನ್ನೋವೇಷನ್ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ಸೇರಿದಂತೆ ಅನೇಕ ವಿಚಾರಗಳಲ್ಲಿ ಸಾಮ್ಯತೆಗಳನ್ನು ಹೊಂದಿವೆ ಎಂದು ಹೇಳಿದರು.
ಭಾರತದಲ್ಲಿ ಕರ್ನಾಟಕ ರಾಜ್ಯ ಬಂಡವಾಳ ಹೂಡಿಕೆಯಲ್ಲಿ ಮುಂಚೂಣಿಯಲ್ಲಿದ್ದು, 2016ರಿಂದಲೂ ಬಂಡವಾಳ ಆಕರ್ಷಿಸುವಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದೇವೆ. ದೇಶದಲ್ಲಿ ಅತಿ ಹೆಚ್ಚು ಕಾಫಿ ಬೆಳೆಯುವ ರಾಜ್ಯ ಕರ್ನಾಟಕ. ಜೈವಿಕ ತಂತ್ರಜ್ಞಾನ ಉತ್ಪನ್ನ ಹಾಗೂ ರಫ್ತಿನಲ್ಲಿ ನಾವು ಮುಂಚೂಣಿಯಲ್ಲಿದ್ದೇವೆ. ಭಾರತದ ಅನ್ವೇಷಣೆ ಸೂಚ್ಯಂಕದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ತಂತ್ರಜ್ಞಾನ ಮತ್ತು ಆವಿಷ್ಕಾರದಲ್ಲಿ ಬೆಂಗಳೂರು ವಿಶ್ವದಲ್ಲೇ ನಾಲ್ಕನೇ ಸ್ಥಾನ ಪಡೆದಿದೆ. ನಾವು ಶೇ.63ರಷ್ಟು ನವೀಕರಿಸಬಹುದಾದ ಇಂಧನದ ಮೇಲೆ ಅವಲಂಬಿತವಾಗಿದ್ದು, ವಿದ್ಯುತ್ ವಾಹನ, ಆವಿಷ್ಕಾರ, ವಸತಿ, 7 ಓಇಎಂ, 50ಕ್ಕೂ ಹೆಚ್ಚು ಕಾಪೋನೆಂಟ್ ಉತ್ಪಾದಕ ಹಾಗೂ 45ಕ್ಕೂ ಹೆಚ್ಚು ವಿದ್ಯುತ್ ವಾಹನಗಳ ಸ್ಟಾರ್ಟ್ ಅಪ್ಗಳನ್ನು ಹೊಂದಿದ್ದೇವೆ.
AI ಗೆ ಪ್ರತ್ಯೇಕ ನೀತಿ: ನಾವು ಕೃತಕ ಬುದ್ಧಿಮತ್ತೆ(AI), ಉತ್ಪಾದನೆ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿಯಂತಹ ಕ್ಷೇತ್ರಗಳಿಗೆ ಪ್ರತ್ಯೇಕ ಕೈಗಾರಿಕ ನೀತಿ ಹೊಂದಿದ್ದೇವೆ. ಈ ನೀತಿಯಲ್ಲಿ 6-10 ವರ್ಷಗಳವರೆಗೆ ವಾರ್ಷಿಕ ವಹಿವಾಟಿನಲ್ಲಿ 2.25% ಬಂಡವಾಳ ಉತ್ತೇಜನ ಸಬ್ಸಿಡಿ ನೀಡಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ವಿವರಿಸಿದರು.
ಸಚಿವ ಎಂ ಬಿ ಪಾಟೀಲ ಮಾತನಾಡಿ, ರಾಜ್ಯದಲ್ಲಿ ಪ್ರವಾಸೋದ್ಯಮ ಬೆಳವಣಿಗೆಗೆ ಮತ್ತು ಜೈವಿಕ ಇಂಧನಗಳ ಉತ್ಪಾದನೆಗೆ ಹೇರಳ ಅವಕಾಶಗಳಿವೆ. ಡಚ್ ಕಂಪನಿಗಳು ಇದರತ್ತ ಗಮನ ಹರಿಸಬೇಕು. ಹಂಪಿ, ಬಾದಾಮಿ, ವಿಜಯಪುರದಂಥ ಐತಿಹಾಸಿಕ ಸ್ಥಳಗಳು ನಮ್ಮಲ್ಲಿವೆ. ಜೊತೆಗೆ ಅಪಾರ ಸಂಖ್ಯೆಯ ಸಕ್ಕರೆ ಕಾರ್ಖಾನೆಗಳಿವೆ. ಇಲ್ಲಿರುವ ಹೂಡಿಕೆ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು.
ಜತೆಗೆ ಆಹಾರ ಸಂಸ್ಕರಣೆ, ಬಯೋಟೆಕ್, ಫಾರ್ಮಾ, ನಾವೀನ್ಯತೆ, ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರಗಳಲ್ಲಿ ಹೂಡಿಕೆಯನ್ನು ವೃದ್ಧಿಸಬೇಕು ಎಂದು ಅವರು ಸೂಚಿಸಿದರು. ಸರಕಾರವು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ 1,000 ಎಕರೆ ಪ್ರದೇಶದಲ್ಲಿ ಜ್ಞಾನ, ಆರೋಗ್ಯ, ನಾವೀನ್ಯತೆ ಮತ್ತು ಸಂಶೋಧನಾ ನಗರಿಯನ್ನು ನಿರ್ಮಿಸಲಿರುವ ವಿಚಾರವನ್ನು ಡಚ್ ನಿಯೋಗದ ಗಮನಕ್ಕೆ ತಂದರು. ಇದಕ್ಕೆ ಸ್ಪಂದಿಸಿದ ಪ್ರಧಾನಿ ಮಾರ್ಕ್ ರುಟೆ, ಭಾರತದಲ್ಲಿ ತಮ್ಮ ದೇಶದ ಒಟ್ಟು 25 ಕಂಪನಿಗಳು ವಹಿವಾಟು ನಡೆಸುತ್ತಿವೆ. ಇವು ಭಾರತದಲ್ಲಿ ಹೂಡಿಕೆ ಮಾಡಿರುವ ಒಟ್ಟು ಮೊತ್ತದಲ್ಲಿ ಶೇಕಡ 9ರಷ್ಟನ್ನು ಕರ್ನಾಟಕದಲ್ಲೇ ತೊಡಗಿಸಿವೆ ಎಂದರು.
ಇದನ್ನೂ ಓದಿ: ಮೈಸೂರು ಜಿಲ್ಲಾಸ್ಪತ್ರೆಯಲ್ಲಿ ಸ್ಮಾರ್ಟ್ ಟೋಕನ್ ವ್ಯವಸ್ಥೆ.. ರೋಗಿಗಳಿಗೆ ತಪ್ಪಿತು ಕ್ಯೂನಲ್ಲಿ ನಿಲ್ಲುವ ಕಿರಿ ಕಿರಿ