ಬೆಂಗಳೂರು: ಕಾಂಗ್ರೆಸ್ ಶಾಸಕರು ನಗರದ ತಾಜ್ ವಿವಾಂತ ಹೋಟೆಲ್ನಲ್ಲಿ ಮೊಕ್ಕಾಂ ಹೂಡಿದ್ದು, ಹತ್ತಕ್ಕೂ ಹೆಚ್ಚು ಮಂದಿ ಹೋಟೆಲ್ನಿಂದ ತಮ್ಮ ಕ್ಷೇತ್ರಗಳತ್ತ ಮುಖ ಮಾಡುತ್ತಿದ್ದಾರೆ.
ಶನಿವಾರ, ಭಾನುವಾರ ಎರಡು ದಿನ ರಜೆಯಾದ ಕಾರಣ ತಮ್ಮ ಕುಟುಂಬಸ್ಥರ ಜೊತೆ ಇರಲು ಅನುಮತಿ ಪಡೆದು ಕ್ಷೇತ್ರಗಳತ್ತ ತೆರಳುತ್ತಿದ್ದಾರೆ. ಈಗಾಗಲೇ ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ, ಜಮಖಂಡಿ ಶಾಸಕ ಆನಂದ್ ನ್ಯಾಮಗೌಡ ಸೇರಿದಂತೆ ಹಲವರು ತವರಿನತ್ತ ತೆರಳಿದ್ದಾರೆ.
ಸೋಮವಾರ ಕಡ್ಡಾಯವಾಗಿ ಅಧಿವೇಶನದಲ್ಲಿ ಭಾಗಿಯಾಗಬೇಕು, ಇಲ್ಲ ಅಗತ್ಯ ಕ್ರಮ ಕೈಗೊಳ್ಳುವ ಎಷ್ಚರಿಕೆಯೊಂದಿಗೆ ಹೋಟೆಲ್ನಿಂದ ತೆರಳಲು ಅನುಮತಿ ನೀಡಲಾಗಿದೆ.
ಬೆಳಗ್ಗೆ ಕೆ ಜೆ ಜಾರ್ಜ್, ದಿನೇಶ್ ಗುಂಡೂರಾವ್ ಜತೆ ಶಾಸಕರು ಉಪಹಾರ ಸೇವಿಸಿದ್ದು, ಬಳಿಕ ಜಾರ್ಜ್ ಸೇರಿದಂತೆ ಹಲವು ಶಾಸಕರು ಹೊರಬಂದರು. ಇನ್ನು ಕೆಲವೇ ಸಮಯದಲ್ಲಿ ಸಿದ್ಧರಾಮಯ್ಯ, ಡಾ. ಜಿ ಪರಮೇಶ್ವರ್, ಡಿ ಕೆ ಶಿವಕುಮಾರ್, ಆರ್ ವಿ ದೇಶಪಾಂಡೆ, ಈಶ್ವರ್ ಖಂಡ್ರೆ ಸೇರಿದಂತೆ ನಾಯಕರು ಸರಣಿ ಸಭೆಗಳನ್ನು ನಡೆಸಲಿದ್ದಾರೆ. ಸೋಮವಾರ ನಡೆಯಲಿರುವ ಅಧಿವೇಶನದ ಕುರಿತು ಸಭೆಯಲ್ಲಿ ಚರ್ಚೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ಅಲ್ಲದೆ ಸರ್ಕಾರದ ಮುಂದಿನ ನಡೆಗಳ ಬಗ್ಗೆಯೂ ತೀರ್ಮಾನ ತೆಗೆದುಕೊಳ್ಳಲಾಗುವುದು.