ಬೆಂಗಳೂರು: ಕಾಂಗ್ರೆಸ್ ಒಂದು ಕೋಟಿ ರೂ ಮೊತ್ತದ ಚೆಕ್ ನೀಡುತ್ತಿದ್ದಂತೆ ಎಚ್ಚೆತ್ತ ರಾಜ್ಯ ಸರ್ಕಾರ ಕಾರ್ಮಿಕರ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿದೆ ಎಂಬ ಮಾತು ಕೈ ಪಕ್ಷದ ನಾಯಕರಿಂದ ಕೇಳಿ ಬರುತ್ತಿದೆ.
ಕಾರ್ಮಿಕರಿಂದ ಡಬಲ್ ಚಾರ್ಜ್ ಕಲೆಕ್ಟ್ ಮಾಡಿ ತೀವ್ರ ಮುಜುಗರಕ್ಕೆ ಒಳಗಾಗಿದ್ದ ರಾಜ್ಯ ಸರ್ಕಾರ, ಇದನ್ನು ಒಂದು ಹಂತದಲ್ಲಿ ಸರಿಪಡಿಸಿಕೊಂಡಿತ್ತು. ಹೀಗಾಗಿ ನಿನ್ನೆಯೇ ಕೇವಲ ಒಂದು ಮಾರ್ಗದ ಚಾರ್ಜ್ ಮಾತ್ರ ಸ್ವೀಕರಿಸುವಂತೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ತಿಳಿಸಿತ್ತು.
ಆದರೆ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿದ್ದ ಕಾಂಗ್ರೆಸ್ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡಬೇಕೆಂದು ಆಗ್ರಹಿಸಿತ್ತು. ಖುದ್ದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಿನ್ನೆ ಸಂಜೆ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ತೆರಳಿ ಅಲ್ಲಿ ಊರಿಗೆ ತೆರಳಲು ಆಗದೆ ಪರದಾಡುತ್ತಿದ್ದ ನಾಗರಿಕರ ಅಹವಾಲು ಸ್ವೀಕರಿಸಿದ್ದರು. ಇಷ್ಟೇ ಸಾಲದು ಎಂಬಂತೆ ಇವರ ಉಚಿತ ಪ್ರಯಾಣಕ್ಕೆ ಅಗತ್ಯ ಮೊತ್ತವನ್ನು ಕಾಂಗ್ರೆಸ್ ಪಕ್ಷವೇ ಭರಿಸಲಿದೆ. ದಯವಿಟ್ಟು ಊರಿಗೆ ತೆರಳುವ ಕಾರ್ಮಿಕರಿಂದ ಹಣ ಪಡೆಯಬೇಡಿ ಎಂದು ಆಗ್ರಹಿಸಿದ್ದರು.
ಇದಕ್ಕೆ ಡಿ.ಕೆ. ಶಿವಕುಮಾರ್ ನಿನ್ನೆ ಮಾತನಾಡಿ, ಅಗತ್ಯ ಮೊತ್ತವನ್ನು ತಾವೇ ಭರಿಸುವುದಾಗಿ ತಿಳಿಸಿದ್ದರು. ಅದೇ ಪ್ರಕಾರ, ಇಂದು ಪಕ್ಷ ಒಂದು ಕೋಟಿ ರೂಪಾಯಿ ಮೊತ್ತದ ಚೆಕ್ಕನ್ನು ಕೆಎಸ್ಆರ್ಟಿಸಿ ಎಂಡಿಗೆ ಹಸ್ತಾಂತರಿಸಿದ್ದಾರೆ. ಇದರಿಂದ ತೀವ್ರ ಮುಜುಗರ ಆಗುತ್ತಿದ್ದಂತೆ ಸರ್ಕಾರ ನಿರ್ಧಾರ ಬದಲಿಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಕಾಂಗ್ರೆಸ್ ಪಕ್ಷವು ತಾವು ಹಣ ನೀಡುವುದಾಗಿ ತಿಳಿಸುವುದರ ಜೊತೆಗೆ ದೇಶದ ವಿವಿಧ ರಾಜ್ಯಗಳ ಸರ್ಕಾರಗಳು ಅಲ್ಲಿಂದ ಕಾರ್ಮಿಕರನ್ನು ಉಚಿತವಾಗಿ ಅವರ ತವರು ರಾಜ್ಯಕ್ಕೆ ಕಳಿಸಿಕೊಡುತ್ತಿವೆ. ಕೆಲ ರಾಜ್ಯಗಳು ಉಚಿತ ರೈಲು ಸಂಚಾರ ಕೂಡ ಕಲ್ಪಿಸಿವೆ. ಕೇಂದ್ರ ರೈಲ್ವೆ ಸಚಿವರನ್ನು ಹೊಂದಿರುವ ನಾವು ಈ ಒಂದು ವ್ಯವಸ್ಥೆಯನ್ನು ಉಚಿತವಾಗಿ ಕಲ್ಪಿಸದಿರುವುದು ದುರ್ದೈವ ಎಂದಿದ್ದರು. ಉಚಿತ ಬಸ್ ಸಂಚಾರಕ್ಕೆ ಅವಕಾಶ ನೀಡಬೇಕು ಎಂದು ಮುಖ್ಯಮಂತ್ರಿಗಳನ್ನು ಕಾಂಗ್ರೆಸ್ ಆಗ್ರಹಿಸಿತ್ತು.
ಈ ಎಲ್ಲ ಬೆಳವಣಿಗೆಗಳ ಬಳಿಕ ಸಿಎಂ ಬಿ.ಎಸ್.ಯಡಿಯೂರಪ್ಪ ಸಂಪುಟದ ಕೆಲ ಸಚಿವರ ಜೊತೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ಆ ಬಳಿಕವೇ ಇಂಥದ್ದೊಂದು ನಿರ್ಧಾರ ಕೈಗೊಂಡಿದ್ದಾರೆ. ಕಾರ್ಮಿಕರ ಪರವಾಗಿ ಕಾಂಗ್ರೆಸ್ ನಡೆಸಿದ ಹೋರಾಟ ಕೊನೆಗೂ ಫಲಕೊಟ್ಟಿದೆ. ಇಂತಹ ಹೋರಾಟಗಳನ್ನು ಸರ್ಕಾರದ ವಿರುದ್ಧ ನಿರಂತರವಾಗಿ ಮಾಡಿದಾಗ ಮಾತ್ರ ನಮ್ಮ ಮೇಲೆ ಜನರಿಗೆ ವಿಶ್ವಾಸ ಮೂಡಲಿದೆ. ಆ ಕಾರ್ಯವನ್ನು ಮುಂದುವರೆಸಿಕೊಂಡು ಹೋಗೋಣ ಎಂದು ಕಾಂಗ್ರೆಸ್ ನಾಯಕರು ಮಾತನಾಡಿಕೊಂಡಿದ್ದಾರೆ.
ಕಾಂಗ್ರೆಸ್ ಪಕ್ಷ ಒಂದು ಕೋಟಿ ನೀಡಿದೆ. ಕಾರ್ಮಿಕರಿಗೆ ಸರ್ಕಾರ ಏನ್ ಮಾಡಿಲ್ಲ ಎಂಬ ಅಪವಾದ ಬರುತ್ತೆ. ಹೀಗಾಗಿ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡಿ ಎಂದು ಕೆಲ ಸಚಿವರು ನಿನ್ನೆಯ ಸಭೆಯಲ್ಲಿ ಸಿಎಂಗೆ ಒತ್ತಡ ಹೇರಿದ್ದರು. ತೀವ್ರ ಮುಜುಗರದಿಂದ ತಪ್ಪಿಸಿಕೊಳ್ಳಲು ಬಳಿಕ ಎಚ್ಚೆತ್ತ ರಾಜ್ಯ ಸರ್ಕಾರ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿದೆ ಎಂದು ಕಾಂಗ್ರೆಸ್ ವಲಯದಲ್ಲಿ ಮಾತುಗಳು ಕೇಳಿಬರುತ್ತಿವೆ.
ಒಟ್ಟಾರೆ ಕಳೆದ ಕೆಲ ದಿನಗಳಲ್ಲಿ ಕಾಂಗ್ರೆಸ್ನ ಅತ್ಯಂತ ಮಹತ್ವದ ಹೋರಾಟ ಹಾಗೂ ಸರ್ಕಾರದ ವಿರುದ್ಧ ಗಳಿಸಿದ ಪರಿಪೂರ್ಣ ಯಶಸ್ಸು ಎಂದು ಬಿಂಬಿಸಲಾಗುತ್ತಿದೆ. ಇದೇ ಸ್ಪೂರ್ತಿಯ ಮೇಲೆ ಮುಂದಿನ ದಿನಗಳಲ್ಲಿ ಇನ್ನಷ್ಟು ಹೋರಾಟದ ರೂಪುರೇಷೆ ಹಣೆಯಲು ಕಾಂಗ್ರೆಸ್ ನಿರ್ಧರಿಸಿದೆ.
ಹೋರಾಟದ ಮುಂದುವರಿದ ಭಾಗವಾಗಿ ಕಾಂಗ್ರೆಸ್ ನಾಯಕರು ಇಂದು ಕೆಂಪೇಗೌಡ ಬಸ್ ನಿಲ್ದಾಣಕ್ಕೆ ತೆರಳಿ ಕಾರ್ಮಿಕರ ಜೊತೆ ಸಮಾಲೋಚನೆ ನಡೆಸಿದ್ದಾರೆ. ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್, ಮಾಜಿ ಡಿಸಿಎಂ ಡಾ ಜಿ ಪರಮೇಶ್ವರ್, ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಚಿವ ಎಚ್ಕೆ ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹಮದ್ ಮತ್ತಿತರರು ತೆರಳಿ ಕಾರ್ಮಿಕರ ಸಮಾಲೋಚಿಸಿದ್ದಾರೆ.