ಬೆಂಗಳೂರು : ಕೊರೊನಾಗೆ ಬಲಿಯಾದ ರಾಜ್ಯಸಭೆ ಸದಸ್ಯ ಆಹ್ಮದ್ ಪಟೇಲ್ಗೆ ನಗರದಲ್ಲಿ ಕಾಂಗ್ರೆಸ್ ನಾಯಕರು ಸಭೆ ಸೇರಿ ಸಂತಾಪ ಸೂಚಿಸಿದರು.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಂತಾಪ ಸಭೆಯಲ್ಲಿ ಪಾಲ್ಗೊಂಡಿದ್ದ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಎಐಸಿಸಿ ಕಾರ್ಯಕಾರಿ ಸಮಿತಿ ಸದಸ್ಯರಾದ ಮಲ್ಲಿಕಾರ್ಜುನ ಖರ್ಗೆ, ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್, ಮಾಜಿ ಉಪಮುಖ್ಯಮಂತ್ರಿ ಪರಮೇಶ್ವರ್, ಕೇಂದ್ರದ ಮಾಜಿ ಸಚಿವ ಕೆ ಹೆಚ್ ಮುನಿಯಪ್ಪ, ರೆಹಮಾನ್ ಖಾನ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ ಹಾಗೂ ಮತ್ತಿತರ ನಾಯಕರು ಅಹ್ಮದ್ ಪಟೇಲ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಇದನ್ನೂ ಓದಿ: ಅಹ್ಮದ್ ಪಟೇಲ್ ನಿಧನದಿಂದ ಆಘಾತಕ್ಕೀಡಾಗಿದ್ದೇನೆ: ಸಿದ್ದರಾಮಯ್ಯ
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾತನಾಡಿ, ಅಹ್ಮದ್ ಪಟೇಲ್ ಅವರು ರಾಷ್ಟ್ರದ ಕಾಂಗ್ರೆಸ್ ನಿಷ್ಠಾವಂತ ಕಾರ್ಯಕರ್ತರಾಗಿದ್ದರು. ಯಾವತ್ತೂ ನಾಯಕ ಎಂದು ಗುರುತಿಸಿಕೊಳ್ಳಲಿಲ್ಲ. ಯುಪಿಎ ಒನ್, ಟು ಸಂದರ್ಭದಲ್ಲಿ ಮಂತ್ರಿಯಾಗುವ ಅವಕಾಶ ಇತ್ತು. ಆದ್ರೆ, ಪಕ್ಷಕ್ಕೆ ಸೇವೆ ಮಾಡಿದ್ರು. ರಾಷ್ಟ್ರದ ಉದ್ದಗಲಕ್ಕೂ ನಾಯಕರನ್ನು ಬೆಳೆಸಿದ್ದಾರೆ.
ಸೋನಿಯಾ ಗಾಂಧಿ ಅಧ್ಯಕ್ಷೆ ಆದ ಮೇಲೆ ಅವರ ರಾಜಕೀಯ ಸಲಹೆಗಾರರಾಗಿ ಕೆಲಸ ಮಾಡಿದ್ರು. ಎಷ್ಟೇ ರಾಜಕೀಯ ವಿರೋಧ ಇದ್ರು ಎಲ್ಲಾ ಪಕ್ಷವನ್ನು ಒಟ್ಟುಗೂಡಿಸುತ್ತಿದ್ರು. ಒಂಬತ್ತು ದಿನಗಳ ಹಿಂದೆ ಫೋನ್ ಮಾಡಿದ್ರು. ನಾನು ಅವರನ್ನು ಮಾತಾಡಿಸಲು ಹುಡುಕಿಕೊಂಡು ಹೋಗಿದ್ದೆ. ಹೆಚ್ಚು ಮಾತಾಡಲು ಆಗಿಲ್ಲ, ಸ್ವಲ್ಪ ಸಮಯದಲ್ಲಿ ಮಾತಾಡಿದೆ ಎಂದು ವಿವರಿಸಿದರು.
ನಮ್ಮ ಹಿರಿಯ ನಾಯಕ ಇವತ್ತು ಕಾಲವಾಗಿದ್ದಾರೆ. ಅವರು ಯಾವತ್ತೂ ನಾಯಕನಾಗಿ ಬೆಳೆಯಲಿಲ್ಲ. ಪಕ್ಷಕ್ಕಾಗಿ ಅಧಿಕಾರವನ್ನು ತ್ಯಾಗ ಮಾಡಿದರು. ಎರಡು ಬಾರಿ ಕೇಂದ್ರದಲ್ಲಿ ನಮ್ಮ ಸರ್ಕಾರ ಇತ್ತು. ಅದ್ರೂ ಕೂಡ ಅವರು ಸಚಿವರಾಗಲಿಲ್ಲ. ಪಕ್ಷ ಸಂಘಟನೆಗೆ ಅವರನ್ನು ತೊಡಗಿಸಿಕೊಂಡಿದ್ರು. ಅವರು ನಿಧನರಾದ ಸುದ್ದಿ ಬೆಳೆಗ್ಗೆ 4ಗಂಟೆಗೆ ಗೊತ್ತಾಯಿತು. ಒಬ್ಬ ಕಾಂಗ್ರೆಸ್ ಕಾಟ್ಟಾಳುವನ್ನು ಕಳೆದುಕೊಂಡಿದ್ದೇವೆ ಎಂದರು.
ಮಾಜಿ ಡಿಸಿಎಂ ಪರಮೇಶ್ವರ್ ಮಾತನಾಡಿ, ಅನೇಕ ನಾಯಕರು ದೆಹಲಿಯಲ್ಲಿ ನೊಡಿದ್ದೇವೆ. ಆದ್ರೆ, ಕಾಂಗ್ರೆಸ್ ಪಕ್ಷಕ್ಕೆ ನಿಷ್ಠಾವಂತರು ಕಡಿಮೆ. ಆದರೆ, ಅಹ್ಮದ್ ಪಟೇಲ್ ಪಕ್ಷದ ಶಿಸ್ತಿನ ಸಿಪಾಯಿ ಆಗಿದ್ದವರು. ಕಾಂಗ್ರೆಸ್ನ ಖಜಾಂಚಿಯಾಗಿ ಸುದೀರ್ಘವಾಗಿ ದುಡಿದಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಅವರು ಆಧಾರ ಸ್ತಂಭವಾಗಿದ್ದರು.
ನಮ್ಮ ರಾಷ್ಟ್ರೀಯ ಅಧ್ಯಕ್ಷರ ಕಷ್ಟದ ಸಮಯದಲ್ಲಿ ಬೆನ್ನೆಲುಬಾಗಿದ್ದರು. ಅನೇಕ ಮುಖಂಡರನ್ನು ತಯಾರು ಮಾಡಿದ ಕೀರ್ತಿ ಪಟೇಲ್ರದು. ಮುಖಂಡರ ಸಾಮರ್ಥ್ಯಕ್ಕೆ ಮತ್ತಷ್ಟು ಒತ್ತು ಕೊಟ್ಟು ಬೆಳೆಸಿದ್ರು. ಇಂತಹ ಮಹಾನ್ ನಾಯಕರನ್ನು ಕಳೆದುಕೊಂಡಿದ್ದೇವೆ. ಇದು ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟ ಎಂದರು.
ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಅಹ್ಮದ್ ಪಟೇಲ್ರಲ್ಲಿ ಮೆಚ್ಚಿಕೊಳ್ಳುವಂತ ಬಹಳಷ್ಟು ಗುಣಗಳಿದ್ದವು. ಅವರೊಬ್ಬ ಅತ್ಯುತ್ತಮ ಕೇಳುಗರಾಗಿದ್ದು, ತಾವು ಏನು ಹೇಳಬೇಕೋ ಅದನ್ನು ಕೊನೆಗೆ ಹೇಳ್ತಿದ್ರು.
ಧಾರ್ಮಿಕತೆ, ಸೆಕ್ಯೂಲರ್ ತತ್ವ ಎರಡನ್ನೂ ತೂಗಿಸಿಕೊಂಡು ಹೋಗ್ತಿದ್ರು. ಬೇರೆ ಬೇರೆ ಪಕ್ಷಗಳ ನಾಯಕರನ್ನು ಹೊಂದಾಣಿಸುವ ಕೆಲಸ ಮಾಡ್ತಿದ್ರು. ಪಾರ್ಟಿಯಲ್ಲಿ ಏನೇ ಬಂದ್ರೂ ಎಲ್ಲವನ್ನೂ ಸಹಿಸಿಕೊಂಡು ಒಗ್ಗಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸ ಮಾಡಿದ್ದಾರೆ. ಅಹ್ಮದ್ ಪಟೇಲ್ ಪಕ್ಷದ ಸ್ತಂಭ ಇದ್ದಂತೆ ಎಂದರು.
ನನ್ನನ್ನು ಕಾಂಗ್ರೆಸ್‌ಗೆ ಕರೆತಂದರು : ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಅಹ್ಮದ್ ಪಟೇಲ್ ನಿಧನ ಅಕಾಲಿಕ. ಅವರಿಗೆ ಕೇವಲ 71 ವರ್ಷ ತುಂಬಿತ್ತು. ನಾನು ಅವರ ಸಂಬಂಧಿಗಳ ಜೊತೆ ಮೊನ್ನೆ ಮಾತನಾಡಿದ್ದೆ. ಆದರೆ, ಇವತ್ತು ಕಾಲವಾಗಿದ್ದಾರೆ. ದಿರ್ಘ ಕಾಲ ಸೋನಿಯಾ ಗಾಂಧಿಯವರಿಗೆ ಸಹಾಯಕರಾಗಿದ್ದರು.
ಯಾವುದೇ ಸಮಸ್ಯೆ ಇದ್ದರು ಅದನ್ನ ಬೇಗ ಬಗೆಹರಿಸುತ್ತಿದ್ದರು. ಪಟೇಲ್ ಒಬ್ಬ ಚತುರ ರಾಜಕಾರಣಿ. ಮುಖಂಡರನ್ನು ಹುಟ್ಟು ಹಾಕುವ ಕೆಲಸ ಮಾಡಿದ್ರು. ನನಗೂ ಅವರಿಗೂ ಆತ್ಮೀಯ ಸಂಬಂಧ ಇತ್ತು. ನಾನು ಕಾಂಗ್ರೆಸ್‌ಗೆ ಸೇರಲು ಪಟೇಲ್ ಪ್ರಮುಖ ಕಾರಣ. ನನ್ನ ಬಗ್ಗೆ ಸಾಕಷ್ಟು ವಾಚ್ ಮಾಡಿದ್ದರು.
ಇದನ್ನೂ ಓದಿ: ಅಹ್ಮದ್ ಪಟೇಲ್ ಸಾವು ಆಘಾತ ತಂದಿದೆ: ಮಲ್ಲಿಕಾರ್ಜುನ ಖರ್ಗೆ
ಅಹಿಂದವನ್ನು ಹೆಚ್ಚು ಗಮಿನಿಸುತ್ತಾ ಇದ್ದರು. ಸ್ನೇಹಿತರನ್ನು ಕಳುಹಿಸಿ ನನ್ನನ್ನು ಭೇಟಿ ಮಾಡಿದ್ರು. ಜಾತ್ಯಾತೀತವಾದಿಯಾಗಿ ಕಾಂಗ್ರೆಸ್ ಸೇರಲು ಆಹ್ವಾನ ನೀಡಿದ್ರು. ಆಗ ಬಿಜೆಪಿ ದೇಶದಲ್ಲಿ ಬೆಳೀತಾ ಇತ್ತು. ಹೀಗಾಗಿ, ನನ್ನನ್ನು ಒಟ್ಟಾಗಿ ಸೇರಿಸಿ ಕಾಂಗ್ರೆಸ್‌ಗೆ ಕರೆದರು.
ಸೋನಿಯಾ ಗಾಂಧಿ ಭೇಟಿ ಮಾಡಿಸಿದರು. ಬಳಿಕ ನಾನು ಕಾಂಗ್ರೆಸ್ ಸೇರಿದೆ. ಕಾಂಗ್ರೆಸ್ ಸೇರಿದ್ದಕ್ಕೆ ನಾನು ಸಿಎಂ ಆಗಿದ್ದು. ಇಲ್ಲ ಅಂದ್ರೆ ನಾನು ಸಿಎಂ ಆಗ್ತಿರಲಿಲ್ಲ. ಪಟೇಲ್ ಒಬ್ಬ ಚಾಣಕ್ಯ, ಪಕ್ಷಕ್ಕೆ ನಿಷ್ಠಾವಂತ. ಅವರ ಸ್ಥಾನ ತುಂಬುವರು ಸದ್ಯಕ್ಕೆ ಯಾರೂ ಇಲ್ಲ. ಅವರ ಕುಟುಂಬದ ಸದಸ್ಯರಿಗೆ ನೋವು ಭರಿಸುವ ಶಕ್ತಿ ಭಗವಂತ ನೀಡಲಿ ಎಂದರು.