ಬೆಂಗಳೂರು : ಉತ್ತರಪ್ರದೇಶದಲ್ಲಿ ದಲಿತ ಯುವತಿಯ ಮೇಲಿನ ಅತ್ಯಾಚಾರ ಹಾಗೂ ಹತ್ಯೆಯನ್ನ ರಾಜ್ಯ ಕಾಂಗ್ರೆಸ್ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ.
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅತ್ಯಾಚಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉಳಿದಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಡಿಸಿಎಂ ಜಿ ಪರಮೇಶ್ವರ್, ಹಿರಿಯ ಕಾಂಗ್ರೆಸ್ ನಾಯಕಿ ಮಾರ್ಗರೇಟ್ ಆಳ್ವ ಸೇರಿದಂತೆ ಹಲವು ನಾಯಕರು ಉತ್ತರಪ್ರದೇಶದ ಕೃತ್ಯವನ್ನು ಖಂಡಿಸಿ ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜೀನಾಮೆಗೆ ಆಗ್ರಹಿಸಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ತಮ್ಮ ಟ್ವೀಟ್ನಲ್ಲಿ, ಉತ್ತರಪ್ರದೇಶದ ಹಥ್ರಸ್ ಜಿಲ್ಲೆಯಲ್ಲಿ ಹಾಡಹಗಲೇ 19 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆದಿರುವುದು ನಾಗರಿಕ ಸಮಾಜವೇ ತಲೆ ತಗ್ಗಿಸುವಂಥದ್ದು. ಆಸ್ಪತ್ರೆಯಲ್ಲಿ ಮೃತಪಟ್ಟ ಬಾಲಕಿಯ ಪಾಲಕರ ಅನುಮತಿ ಪಡೆಯದೇ ಪೊಲೀಸರೇ ಗೌಪ್ಯವಾಗಿ ಅನುಮಾನಕ್ಕೆಡೆ ಮಾಡಿಕೊಡುವಂತೆ ಅಂತ್ಯಸಂಸ್ಕಾರ ನಡೆಸಿರುವುದರ ಹಿಂದಿನ ಉದ್ದೇಶವೇನು? ಇದು ನಿಜಕ್ಕೂ ಘೋರ, ಅಮಾನವೀಯ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಇಂಥ ಬೇಜವಾಬ್ದಾರಿತನ ಉದ್ಧಟತನ ತೋರಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಮತ್ತು ತ್ವರಿತವಾಗಿ ಪ್ರಕರಣದ ವಿಚಾರಣೆ ನಡೆಸಿ ಅತ್ಯಾಚಾರಿಗಳಿಗೆ ಕಠಿಣಾತಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸುತ್ತೇನೆ ಎಂದಿದ್ದಾರೆ.
ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಮ್ಮ ಟ್ವೀಟ್ನಲ್ಲಿ, ಸಂಸ್ಕೃತಿಯ ರಕ್ಷಕರ ಮುಖವಾಡ ಹಾಕಿಕೊಂಡಿರುವ ಬಿಜೆಪಿ ನಾಯಕರಿಗೆ ದಲಿತ ಹುಡುಗಿಯ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಕಣ್ಣಿಗೆ ಕಾಣಿಸುವುದಿಲ್ಲವೇ? ಇದೇನಾ ನೀವು ಜನರ ಮುಂದೆ ಪ್ರತಿಪಾದಿಸುತ್ತಿರುವ ಯೋಗಿ ಆದಿತ್ಯನಾಥ್ ಅವರ ಮಾದರಿ ರಾಜ್ಯ? ಅತ್ಯಾಚಾರಿಗಳ ರಾಜ್ಯ ಉತ್ತರ ಪ್ರದೇಶದಲ್ಲಿ ಹೆಣ್ಣು ಮಕ್ಕಳನ್ನು ಕಾಪಾಡುವರ್ಯಾರು? ಎಂದು ಪ್ರಶ್ನಿಸಿದ್ದಾರೆ.