ಬೆಂಗಳೂರು : ರಾಜ್ಯ ಕಾಂಗ್ರೆಸ್ ನಾಯಕರು ಇಂದು ರಾಜ್ಯಪಾಲ ವಜುಭಾಯಿ ವಾಲಾರನ್ನು ಭೇಟಿ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ರಾಷ್ಟ್ರಪತಿಗಳಿಗೆ ದೂರು ಸಲ್ಲಿಸಿದರು.
ರಾಜಭವನಕ್ಕೆ ತೆರಳಿದ ಕಾಂಗ್ರೆಸ್ನ ನಾಲ್ವರು ನಾಯಕರು ಕೇಂದ್ರ ಸರ್ಕಾರದ ಇಂಧನ ಬೆಲೆ ಏರಿಕೆ ಖಂಡಿಸಿ ರಾಷ್ಟ್ರಪತಿಗಳಿಗೆ ದೂರು ನೀಡಿದ್ದಾರೆ. ಇದನ್ನ ರಾಜ್ಯಪಾಲರಿಗೆ ತಲುಪಿಸಿ ರಾಷ್ಟ್ರಪತಿಗಳಿಗೆ ಕಳುಹಿಸಿ ಕೊಡುವಂತೆ ಮನವಿ ಮಾಡಿದರು.
ನಿಯೋಗದಲ್ಲಿ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹಾಗೂ ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಇದ್ದರು. ಭೇಟಿ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾತನಾಡಿ, ರಾಜ್ಯಪಾಲರ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದ್ದೇವೆ. ಯುಪಿಎ ಸರ್ಕಾರದಲ್ಲಿ ಇಂಧನ ಉತ್ಪನ್ನಗಳಿಗೆ ಸಬ್ಸಿಡಿ ನೀಡಲಾಗುತ್ತಿತ್ತು. ಈಗ ಕೇಂದ್ರ ಸರ್ಕಾರ ಪೆಟ್ರೋಲ್ ಮೇಲೆ ಎಷ್ಟು ತೆರಿಗೆ ಹಾಕಿದೆ ಎಂಬುದರ ಅಂಕಿ-ಅಂಶ ನೀಡಿದ್ದೇವೆ. ಜನವಿರೋಧಿ ನೀತಿಯನ್ನು ಕೇಂದ್ರ ಸರ್ಕಾರ ಅನುಸರಿಸುತ್ತಿದೆ ಎಂದರು.
ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಅಮಾನವೀಯವಾಗಿ ಕೇಂದ್ರ ಸರ್ಕಾರ ನಡೆದುಕೊಂಡಿದೆ. ರಾಕ್ಷಸಿ ಗುಣ ಇರುವ ಕೇಂದ್ರ ಸರ್ಕಾರ, ಬಡವರ ರಕ್ತ ಹೀರುವ ಕೆಲಸ ಮಾಡ್ತಿದೆ. ಬಡವರ ಜೀವನದ ಜೊತೆ ಸರ್ಕಾರ ಚೆಲ್ಲಾಟ ಆಡುತ್ತಿದೆ ಎಂದರು. ಕೊರೊನಾ ಸಮಯದಲ್ಲಿ ಬೆಲೆ ಏರಿಕೆ ಮಾಡಿ ಸುಲಿಗೆ ಮಾಡುತ್ತಿರುವ ಅವರಿಗೆ ಮಾನ -ಮರ್ಯಾದೆ ಇದೆಯಾ? ಎಂದು ಪ್ರಶ್ನಿಸಿದರು.
ಪ್ರತಿಭಟನೆಗೆ ಅನುಮತಿ ಬೇಕಿಲ್ಲ, ಪ್ರತಿಭಟನೆ ಮಾಡಲು ಯಾವುದೇ ಅನುಮತಿ ಬೇಕಿಲ್ಲ. ದೇಶದಲ್ಲಿ ಪೆಟ್ರೋಲ್ ಬೆಲೆ ಯದ್ವಾತದ್ವಾ ಏರಿಕೆ ಆಗಿದೆ. ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದ್ದೇವೆ. ರೈತರಿಗೆ, ಜನ ಸಾಮಾನ್ಯರಿಗೆ ದೊಡ್ಡ ಅನ್ಯಾಯ ಆಗುತ್ತಿದೆ. ಎಲ್ಲ ವರ್ಗದ ಜನರಿಗೆ ಹೊರೆ ಆಗುತ್ತದೆ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಹೀಗೆ ಮಾಡಲಿಲ್ಲ. ಒಂದು ಬ್ಯಾರೆಲ್‌ಗೆ 130ಡಾಲರ್‌ವರೆಗೂ ಹೋಗಿತ್ತು. ಆದರೆ, ಈಗ ಒಂದು ಬ್ಯಾರೆಲ್ ಬೆಲೆ 20-30 ಡಾಲರ್ ಇದೆ. ಕಚ್ಚಾತೈಲ ಬೆಲೆ ಕಡಿಮೆ ಇದ್ದರೂ ಈಗ ಬೆಲೆ ಹೆಚ್ಚು ಮಾಡಿದ್ದಾರೆ. ಕೇಂದ್ರ ಸರ್ಕಾರದ ಜನವಿರೋಧಿ ನೀತಿಯ ವಿರುದ್ಧ ರಾಜ್ಯಪಾಲರಿಗೆ ಮನವಿ ಮಾಡಿದ್ದೇವೆ ಎಂದರು.
ಸರ್ಕಾರ ತಪ್ಪು ಮಾಡಿಲ್ಲವೇ, ಇಂದಿನ ಪ್ರತಿಭಟನೆ ವಿರುದ್ಧ ಸರ್ಕಾರ ಗರಂ ಆಗಿರುವ ಕುರಿತು ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್, ಇಂದು ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆಗೆ ಪೊಲೀಸ್ ಇಲಾಖೆಯಿಂದ ಅನುಮತಿ ಸಿಕ್ಕಿರಲಿಲ್ಲ. ಇದರ ವಿರುದ್ಧ ಸರ್ಕಾರ ತನಿಖೆ ನಡೆಸಲು ಮುಂದಾದರೆ ಆಗಲಿ. ನಾವು ಇದಕ್ಕೆಲ್ಲ ಹೆದರುವುದಿಲ್ಲ. ಬೆಳಗಾವಿಗೆ ಸಿಎಂ ಹೋಗಿದ್ರು, ಮಹಾತೇಶ್ ಕವಟಗಿಮಠ ಮಗಳ ಮದುವೆಯಲ್ಲಿ ಭಾಗಿಯಾಗಿದ್ರು, ಅಂದು ಅಲ್ಲಿ ಜನದಟ್ಟಣೆ ಆಗಿರಲಿಲ್ಲವೇ ಎಂದರು.
ಸಚಿವ ಶ್ರೀರಾಮಲು ಚಿತ್ರದುರ್ಗದಲ್ಲಿ ಭಾಗಿಯಾದ ಕಾರ್ಯಕ್ರಮದಲ್ಲೂ ಸಾಮಾಜಿಕ ಅಂತರ ಪಾಲನೆಯಾಗಿಲ್ಲ. ಶಿವಮೊಗ್ಗದಲ್ಲಿ ಸಾಕಷ್ಟು ಜನರನ್ನು ಸೇರಿಸಿ ಈಶ್ವರಪ್ಪ ಕಾರ್ಯಕ್ರಮ ಮಾಡಿದ್ದರು. ಸಚಿವರು ಸ್ವಿಮ್ಮಿಂಗ್ ಪೂಲ್ನಲ್ಲಿದ್ದರು, ಸಚಿವರೇ ಕಾನೂನು ಉಲ್ಲಂಘಿಸಿದ್ದಾರೆ. ಈ ಬಗ್ಗೆ ಏನು ಕ್ರಮ ತೆಗೆದುಕೊಳ್ಳಲಿದೆ? ಕೇಸ್ ಮೂಲಕ ನಮ್ಮನ್ನ ಹೆದರಿಸಲು ಸಾಧ್ಯವಿಲ್ಲ. ಯಾವ ಕೇಸ್ಗೂ ನಾವು ಬಗ್ಗಲ್ಲ. ನಾವು ಜನರ ಪರವಾಗಿ ಹೋರಾಟ ಮಾಡ್ತೀವಿ. ಅವರ ಪಕ್ಷದವರೇ ಉಲ್ಲಂಘನೆ ಮಾಡಿದ್ದಾರೆ, ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ನಂತರ ನಮ್ಮ ಮೇಲೆ ಕ್ರಮ ಕೈಗೊಳ್ಳಲಿ ಎಂದರು.