ಬೆಂಗಳೂರು: ಚುನಾವಣಾ ಪ್ರಣಾಳಿಕೆಯನ್ನು ಸಿಎಂ ಬಜೆಟ್ ಭಾಷಣದ ರೀತಿ ಓದಿದ್ದಾರೆ ಎಂದು ಮೇಲ್ಮನೆ ಪ್ರತಿಪಕ್ಷ ನಾಯಕ ಹರಿಪ್ರಸಾದ್ ವ್ಯಂಗ್ಯವಾಡಿದ್ದಾರೆ.
ಬಜೆಟ್ ಮಂಡನೆ ನಂತರ ಸುದ್ದಿಗಾರರ ಜೊತೆ ವಿಧಾನಸೌಧದಲ್ಲಿ ಮಾತನಾಡಿ, ಎಲ್ಲರನ್ನೂ ಸಂತುಷ್ಠಿ ಮಾಡುವ ಕೆಲಸಕ್ಕೆ ಕೈಹಾಕಿದ್ದಾರೆ. ಇದರಿಂದ ಯಾರಿಗೂ ಸಮಾಧಾನವಿಲ್ಲ. 67 ಸಾವಿರ ಕೋಟಿ ಸಾಲ ಮಾಡಬಹುದು ಎಂದಿದ್ದರು. ಈಗ 73 ಸಾವಿರ ಕೋಟಿ ಸಾಲಕ್ಕೆ ಹೊರಟಿದ್ದಾರೆ. ಇದೊಂದು ಬಿಜೆಪಿ ಚುನಾವಣೆ ಪ್ರಣಾಳಿಕೆಯಾಗಿದೆ. ಕೇಂದ್ರದಿಂದ ಜಿಎಸ್ಟಿ ಹಣ ಬಂದಿಲ್ಲ. ರಾಜ್ಯದ ಜನರಿಗೆ ಸಾಲದ ಹೊರೆ ಹೊರಿಸಿದ್ದಾರೆ. 1 200 ಕೋಟಿಯನ್ನು ಹಿಂದೆ ಕ್ರಿಶ್ಚಿಯನ್,ಬೌಧ್ಧರಿಗೆ ನೀಡಿದ್ದರು. ಈ ಬಾರಿ 50 ಕೋಟಿ ಕೊಟ್ಟಿದ್ದಾರೆ. ಬೆಂಗಳೂರು ನಗರಕ್ಕೆ 6,000ಕೋಟಿ ಘೋಷಿಸಿದ್ದಾರೆ. 193 ಸಣ್ಣ ಜಾತಿಗಳಿಗೆ 2 ಕೋಟಿಯಷ್ಟೂ ಕೊಟ್ಟಿಲ್ಲ. ಇವರ ಬಜೆಟ್ನಿಂದ ಹಿಂದುಳಿದವರ್ಗಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿದರು.
ಇದನ್ನೂ ಓದಿ: ಬಜೆಟ್ನಲ್ಲಿ ರಾಜಸ್ವ, ವಿತ್ತೀಯ ಕೊರತೆ ಎಷ್ಟು?
ಸರ್ವರಿಗೆ ಸಮಪಾಲು, ಸಮಬಾಳು ಕಾಣ್ತಿಲ್ಲ. ಖಾಸಗೀಕರಣದಂತ ದುಸ್ಸಾಹಸಕ್ಕೆ ಕೈಹಾಕಿದ್ದಾರೆ. ಈ ಬಜೆಟ್ ಬಡವರ ವಿರುದ್ಧದ ಬಜೆಟ್. ಮೂಗಿಗೆ ತುಪ್ಪ ಸವರಿ ಜನರನ್ನು ಯಾಮಾರಿಸ್ತಿದ್ದಾರೆ. ಮೇಕೆದಾಟು ಯೋಜನೆಗೆ 1,000 ಕೋಟಿ ಇಟ್ಟಿದ್ದಾರೆ. ಇದು ಕಾಂಗ್ರೆಸ್ ಹೋರಾಟಕ್ಕೆ ಸಂದ ಜಯ. 1,000 ಕೋಟಿ ಇಟ್ಟಿರೋದು ಸಮಾಧಾನವಿಲ್ಲ. ಆದರೆ ನಮ್ಮ ಹೋರಾಟ ಒಪ್ಪಿಕೊಂಡಿದ್ದಾರೆ. ಕೃಷಿ, ಬಡವರು, ಕಾರ್ಮಿಕರಿಗೆ ಯಾವುದೇ ಸೌಲಭ್ಯವಿಲ್ಲ ಎಂದರು.
ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಸಿಎಂ ರಾಜ್ಯ ಬಜೆಟ್ ಮಂಡಿಸಿದ್ದಾರೆ. ಆರ್ಥಿಕತೆ ಸುಧಾರಣೆ ಮಾಡಬೇಕು ಅಂತಾರೆ. ಅಂಗೈನಲ್ಲಿ ಆಕಾಶವನ್ನ ತೋರಿಸ್ತಾರೆ. ಕೇಂದ್ರದಿಂದ ಜಿಎಸ್ ಟಿ ಹಣ ಬಾಕಿ ಬಂದಿಲ್ಲ. ಸಾಲ ಕೊಟ್ಟಿದ್ದಕ್ಕೆ ಕೇಂದ್ರಕ್ಕೆ ಅಭಿನಂದಿಸ್ತಾರೆ. 90 ಸಾವಿರ ಕೋಟಿ ಸಾಲ ರಾಜ್ಯದ ಜನರ ಮೇಲಿದೆ. ಆರ್ಥಿಕ ಪರಿಸ್ಥಿತಿ ಗಂಭೀರವಾಗಿದೆ. ಉದ್ಯೋಗ ಸೃಷ್ಠಿ,ಬಂಡವಾಳ ಹೂಡಿಕೆ ಎಲ್ಲಿದೆ ಎಂದು ಪ್ರಶ್ನಿಸಿದರು.
ಎಲೆಕ್ಷನ್ ಗೆ ಏನು ಬೇಕು ಅದನ್ನ ಮಾಡ್ತಿದ್ದಾರೆ. ನವಕರ್ನಾಟಕ ನಿರ್ಮಾಣ ಮಾಡ್ತೇವೆ ಅಂತಾರೆ. ಹಳೆಯ ಕರ್ನಾಟಕವನ್ನ ಉಳಿಸಿದರೆ ಸಾಕು. ಬಿಜೆಪಿ ಬಂದ ಮೇಲೆ ಕೆಟ್ಟ ಸಂಪ್ರದಾಯ ನಡೆದಿದೆ. ಮುಂದೆ ಇಲಾಖೆವಾರು ಹಣದ ಮೀಸಲು ಇಡಲಾಗ್ತಿತ್ತು. ಆದರೆ ಈಗ ಸೆಕ್ಟರ್ ವೈಸ್ ಮಾಡ್ತಿದ್ದಾರೆ. ಇದರಲ್ಲಿ ಯಾವ ಯೋಜನೆ ಹಾಕ್ತಾರೆ ಗೊತ್ತಿಲ್ಲ. ಏನು ಮಾಡ್ತಾರೆ ಅದು ಗೊತ್ತಾಗೋಲ್ಲ. ಅಂತಹ ಬಜೆಟ್ ಇದಾಗಿದೆ. ಇದರಲ್ಲಿ ಯಾವುದೇ ಬೆಳವಣಿಗೆ ಕಾರ್ಯಕ್ರಮಗಳಿಲ್ಲ ಎಂದು ಆರೋಪಿಸಿದರು.
ಕೋವಿಡ್ನಿಂದ ಜನ ಸಂಕಷ್ಟದಲ್ಲಿದ್ದಾರೆ. ಅವರನ್ನ ಮೇಲೆತ್ತುವ ಕಾರ್ಯಕ್ರಮಗಳನ್ನ ಮಾಡಿಲ್ಲ. ಈ ಬಜೆಟ್ ಯಾವುದಕ್ಕೂ ಸಮಾಧಾನವಿಲ್ಲ. ಜನಪರವಿಲ್ಲದ ಬಜೆಟ್ ಇದಾಗಿದೆ. ಕಲ್ಯಾಣ ಕರ್ನಾಟಕಕ್ಕೆ 3,000 ಕೋಟಿ ಹೇಳಿದ್ದಾರೆ. ಆದರೆ ಇದು ಮೊದಲಿನಿಂದಲೂ ಇತ್ತು. ರೂಟಿನ್ ವೈಸ್ ನಮಗೆ ಅನುದಾನ ಬರುತ್ತದೆ. ಇವರು ಕಲ್ಯಾಣ ಕರ್ನಾಟಕ ಅಭಿವೃದ್ಧಿ ನಿಗಮಕ್ಕೆ ಕೊಡಲಿ. ಇದರ ಬಗ್ಗೆ ಸ್ಪಷ್ಟತೆಯಿಲ್ಲ. ಮೇಕೆದಾಟು ಯೋಜನೆಗೆ 1,000 ಕೋಟಿ ಇಟ್ಟಿದ್ದಾರೆ. ಅವರು 10 ಸಾವಿರ ಕೋಟಿ ಕೊಟ್ರೂ ಆಗಲ್ಲ. ಪರಿಸರ ಇಲಾಖೆ ಅನುಮತಿ ಸಿಗದ ಹೊರತು ಯೋಜನೆಯಿಲ್ಲ ಎಂದರು.