ಬೆಂಗಳೂರು: ಮುಂಬರುವ ಬಿಬಿಎಂಪಿ ಚುನಾವಣೆ ಸೇರಿದಂತೆ ಹಲವು ವಿಚಾರಗಳ ಚರ್ಚೆಗೆ ಬೆಂಗಳೂರು ನಗರ ಜಿಲ್ಲೆಯ ಮುಖಂಡರು ಹಾಗೂ ಕಾರ್ಯಕರ್ತರ ಜೊತೆ ಕಾಂಗ್ರೆಸ್ ಪಕ್ಷದ ಮಹತ್ವದ ಸಭೆ ಆರಂಭವಾಗಿದೆ.
ಮಾಜಿ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ರಾಜ್ಯಸಭೆ ಸದಸ್ಯ ಜಿ.ಸಿ.ಚಂದ್ರಶೇಖರ್, ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್, ವಿಧಾನ ಪರಿಷತ್ ಸದಸ್ಯರಾದ ಪಿ.ಆರ್.ರಮೇಶ್, ಬಿ.ಕೆ.ಹರಿಪ್ರಸಾದ್, ಮಾಜಿ ಸಂಸದ ವಿ.ಎಸ್.ಉಗ್ರಪ್ಪ ವಿಧಾನ ಪರಿಷತ್ ಮುಖ್ಯ ಸಚೇತಕ ನಾರಾಯಣಸ್ವಾಮಿ, ಮಾಜಿ ಸಚಿವ ಕೃಷ್ಣ ಬೈರೇಗೌಡ, ಶಾಸಕಿ ಸೌಮ್ಯ ರಾಮಲಿಂಗಾರೆಡ್ಡಿ, ಕಾರ್ಪೊರೇಟರ್‌ಗಳು ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದಾರೆ.
ಓದಿ: ಪ್ರಧಾನಿ ನರೇಂದ್ರ ಮೋದಿ ಆಧುನಿಕ ಭಸ್ಮಾಸುರ: ವಿ.ಎಸ್.ಉಗ್ರಪ್ಪ
ಯಾವುದೇ ಸಂದರ್ಭದಲ್ಲೂ ಬಿಬಿಎಂಪಿ ಚುನಾವಣೆ ಎದುರಾಗುವ ಸಾಧ್ಯತೆ ಹಿನ್ನೆಲೆ ಸಭೆ ನಡೆಯುತ್ತಿದೆ. ಚುನಾವಣೆ ಎದುರಾದ ತಕ್ಷಣ ಸಮರೋಪಾದಿಯಲ್ಲಿ ಕೈಗೊಳ್ಳಬೇಕಾದ ಕ್ರಮಗಳು ಹಾಗೂ ಕಾರ್ಯಗಳ ಕುರಿತು ಮುಖಂಡರು ಕಾರ್ಯಕರ್ತರಿಗೆ ಮಾಹಿತಿ ನೀಡುವ ಸಲುವಾಗಿ ಸಭೆ ನಡೆಸುತ್ತಿದ್ದಾರೆ.
ಸಭೆಯಲ್ಲಿ ಭಾಗವಹಿಸಿರುವ ಕಾರ್ಯಕರ್ತರು ಪಕ್ಷಕ್ಕೆ ಬಲ ತುಂಬುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಸಲಹೆ ನೀಡಿದ್ದು, ಪಕ್ಷದ ಮುಖಂಡರು ನೀಡಿರುವ ಸೂಚನೆಯನ್ನು ಪಾಲಿಸುವ ಭರವಸೆ ಇತ್ತಿದ್ದಾರೆ.
ಎಸ್.ಬಿ.ಎಂ. ವಿರುದ್ಧ ಆಕ್ರೋಶ:
ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗಿರುವ ಎಸ್.ಟಿ.ಸೋಮಶೇಖರ್, ಭೈರತಿ ಬಸವರಾಜು ಹಾಗೂ ಮುನಿರತ್ನ ವಿರುದ್ಧ ಕಾರ್ಯಕರ್ತರು ಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಹಾಗೂ ನಂತರ ಮೈತ್ರಿ ಸರ್ಕಾರದ ಸಂದರ್ಭದಲ್ಲಿ ಬಿಡುಗಡೆಯಾದ ಅನುದಾನವನ್ನು ಸದ್ಬಳಕೆ ಮಾಡಿಕೊಂಡು, ಪಕ್ಷನಿಷ್ಠೆ ಪ್ರದರ್ಶಿಸದೆ ರಾಜೀನಾಮೆ ನೀಡಿ ತೆರಳಿದ್ದಾರೆ.
ಇವರ ನಿಜ ಬಣ್ಣ ಬಯಲು ಮಾಡಿ ಮುಂದಿನ ಚುನಾವಣೆಯಲ್ಲಿ ಇವರನ್ನು ಸೋಲಿಸುವ ಜೊತೆಗೆ ಸದ್ಯವೇ ನಡೆಯುವ ಬಿಬಿಎಂಪಿ ಚುನಾವಣೆಯಲ್ಲಿ ಕೂಡ ಅವರ ಬೆಂಬಲಿಗರನ್ನು ಸೋಲಿಸಿ ನಮ್ಮ ಶಕ್ತಿ ಪ್ರದರ್ಶನ ಮಾಡಬೇಕು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ಮುಂಬರುವ ಬಿಬಿಎಂಪಿ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಆರಂಭಿಸಿರುವ ಕಾಂಗ್ರೆಸ್ ನಾಯಕರು, ಪಕ್ಷದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆದು ಮುಂದುವರೆಯಲು ತೀರ್ಮಾನಿಸಿದ್ದಾರೆ. ಹೆಚ್ಚು ವಾರ್ಡ್ಗಳನ್ನು ಗೆಲ್ಲಲು ತಂತ್ರ ರೂಪಿಸುತ್ತಿರುವ ನಾಯಕರು, ಸುದೀರ್ಘ ಚರ್ಚೆಯಲ್ಲಿ ತೊಡಗಿದ್ದಾರೆ.