ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ರವರು 2021ನೇ ವರ್ಷವನ್ನು ಪಕ್ಷ ಸಂಘಟನೆ ಹಾಗೂ ಹೋರಾಟದ ವರ್ಷವಾಗಿ ಸಂಕಲ್ಪ ಮಾಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಇಂದು ಪೂರ್ವಭಾವಿ ಸಭೆ ನಡೆಸಿ ಚರ್ಚಿಸಿದರು.
ಬೆಂಗಳೂರಿನ ಆನಂದರಾವ್ ವೃತ್ತ ಸಮೀಪದ ಮೌರ್ಯ ಹೋಟೆಲ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾಜಿ ಸಚಿವ ರಾಮಲಿಂಗಾರೆಡ್ಡಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಮಾಜಿ ಮೇಯರ್ ರಾಮಚಂದ್ರಪ್ಪ, ಯುವ ಕಾಂಗ್ರೆಸ್ ನಾಯಕ ಮನೋಹರ್ ಮತ್ತಿತರರು ಪಾಲ್ಗೊಂಡಿದ್ದರು.
ಬೆಂಗಳೂರು ಮಹಾನಗರ ಕಾಂಗ್ರೆಸ್ ಪ್ರಚಾರ ಸಮಿತಿ ಈ ಸಭೆಯನ್ನು ಆಯೋಜಿಸಿತ್ತು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಹೋರಾಟಕ್ಕೆ ಸಿದ್ಧತೆ ಕೈಗೊಳ್ಳುವ ಹಾಗೂ ಹೋರಾಟದ ರೂಪುರೇಷೆ ಹೆಣೆಯುವ ಮಹತ್ವದ ಚರ್ಚೆ ಇಲ್ಲಿ ನಡೆಯಿತು. ಭೂಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ, ಗೋಹತ್ಯೆ ನಿಷೇಧ ಕಾಯ್ದೆ ವಿರುದ್ಧ ಹೋರಾಟಕ್ಕೆ ಕಾಂಗ್ರೆಸ್ ಪಕ್ಷ ಕರೆ ಕೊಟ್ಟಿದ್ದು ಈ ಸಂಬಂಧ ಚರ್ಚೆ ನಡೆಯಿತು.
ಮಾಜಿ ಗೃಹ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, "ಇವತ್ತು ಬಿಜೆಪಿಗೆ ಹೇಳುವವರು ಕೇಳುವವರು ಯಾರೂ ಇಲ್ಲ. ಅವರು ನಡೆದಿದ್ದೇ ದಾರಿ ಅಂದುಕೊಂಡಿದ್ದಾರೆ. ಪ್ರತಿಪಕ್ಷಗಳನ್ನು ಮಟ್ಟ ಹಾಕಲು ಹೊರಟಿದ್ದಾರೆ. ಎಲ್ಲರನ್ನೂ ಆಮಿಷ ಒಡ್ಡಿ ಬಿಜೆಪಿಗೆ ಸೆಳಿತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಆಡಳಿತ-ಪ್ರತಿಪಕ್ಷ ಎರಡೂ ಇರಬೇಕು. ಆದ್ರೆ ತಮ್ಮ ಲೋಪ ಮುಚ್ಚಿಕೊಳ್ಳಲು ಆಮಿಷ ಒಡ್ಡುತ್ತಿದ್ದಾರೆ. ಭ್ರಷ್ಟಾಚಾರ ಇವತ್ತು ವಿಪರೀತವಾಗಿದೆ. ಎಲ್ಲಿ ನೋಡಿದ್ರು ಭ್ರಷ್ಟಾಚಾರ ತಾಂಡವವಾಡುತ್ತಿದೆ. ಬಿಜೆಪಿಯಲ್ಲಿ ಅನೇಕ ಗುಂಪುಗಳಿವೆ. ಈ ಹಿಂದೆ ಅವರು ಮನುವಾದ ಅನುಸರಣೆ ಮಾಡುತ್ತಿದ್ದರು. ಈಗ ಬಿಜೆಪಿದ್ದು ಮನಿ ವಾದ." ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಮಾತನಾಡಿ, "ನಮ್ಮ ಪಕ್ಷಕ್ಕೆ 135 ವರ್ಷಗಳ ಇತಿಹಾಸ ಇದೆ. ಹಲವಾರು ಜನರ ತ್ಯಾಗ ಈ ಪಕ್ಷಕ್ಕಿದೆ. ನಾವು ಹೋರಾಟದ ಮೂಲಕ ಪಕ್ಷದ ಅಸ್ತಿತ್ವ ಉಳಿಸಬೇಕು. ಒಂದು ಪಕ್ಷ ಒಂದು ಸಂಕಲ್ಪ. ನಮ್ಮ ಅಧ್ಯಕ್ಷರು ಹೋರಾಟಕ್ಕೆ ಕರೆ ಕೊಟ್ಟಿದ್ದಾರೆ. ನಾವು ಅಧಿಕಾರಕ್ಕಾಗಿ ಹೋರಾಟ ಮಾಡುತ್ತಿಲ್ಲ. ಬಿಜೆಪಿ ಸರ್ಕಾರ ಮಾಡಿರುವ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತೇವೆ." ಎಂದರು.
ಮಾಜಿ ಮೇಯರ್ ರಾಮಚಂದ್ರಪ್ಪ ಮಾತನಾಡಿ, "ಆರ್ಎಸ್ಎಸ್ ಈ ದೇಶದ ಶನಿಸಂತಾನ. ಒಂದು ಹಳ್ಳಿಯಲ್ಲಿ ಒಬ್ಬ ಆರ್ಎಸ್ಎಸ್ ನಾಯಕ ಇದ್ದರೆ ಇಡೀ ಹಳ್ಳಿ ಹಾಳು ಮಾಡಿಬಿಡ್ತಾನೆ. ಈ ದೇಶ ಹಾಳು ಮಾಡಿದವರೂ ಆರ್ಎಸ್ಎಸ್ನವರು, ಮುಂದೆ ದೇಶ ಹಾಳು ಮಾಡುವವರೂ ಅವರೇ. ಆರ್ಎಸ್ಎಸ್ ಎಂದರೆ ಅದು ಸುಳ್ಳುಗಳ ಸೃಷ್ಟಿಸುವ ಕಾರ್ಖಾನೆ. ಬೆಂಗಳೂರಲ್ಲಿ ಆರ್ಎಸ್ಎಸ್ಗೆ ಕಚೇರಿಯೇ ಇಲ್ಲ. ಕಚೇರಿಯೇ ಇಲ್ಲದೇ, ಮಾಧ್ಯಮಗಳ ಮುಂದೆ ಬಾರದೇ, ಎಲ್ಲೂ ಕಾಣಿಸಿಕೊಳ್ಳದೇ ಆರ್ಎಸ್ಎಸ್ ನಾಯಕರು ಇಷ್ಟೆಲ್ಲ ಮಾಡ್ತಿದ್ದಾರೆ" ಎಂದು ವಾಗ್ದಾಳಿ ನಡೆಸಿದರು.