ಬೆಂಗಳೂರು: "ಸಚಿವ ಸ್ಥಾನಕ್ಕೆ ಚಾತಕ ಪಕ್ಷಿ ತರ ಕಾಯುತ್ತಿದ್ದೇನೆ. ಸಚಿವ ಸ್ಥಾನ ಸಿಗುವ ಬಗ್ಗೆ ನೂರಕ್ಕೆ ನೂರು ಭರವಸೆ ಇದೆ" ಎಂದು ಆಡಳಿತ ಪಕ್ಷದ ಮುಖ್ಯ ಸಚೇತಕ ಅಶೋಕ್ ಪಟ್ಟಣ್ ತಿಳಿಸಿದರು. ವಿಧಾನಸೌಧದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ನಮಗೂ ಶೀಘ್ರದಲ್ಲೇ ಅವಕಾಶ ಸಿಗುತ್ತೆ. ಮತ್ತೆ ಯಾವುದೇ ವಿಚಾರವನ್ನು ನಾನು ಮಾತನಾಡಲ್ಲ. ಶಾಸಕರು ಈ ಬಗ್ಗೆ ಹೇಳಿ ಹೇಳಿಯೇ ಪಕ್ಷಕ್ಕೆ ಸ್ವಲ್ಪ ಹಿನ್ನಡೆ ಆಗ್ತಿದೆ. ಡಿಸಿಎಂ ಡಿ.ಕೆ.ಶಿವಕುಮಾರ್ ಸಹ ಮಾತನಾಡಬೇಡಿ ಅಂತ ಹೇಳಿದ್ದಾರೆ. ನಾನು ಪಕ್ಷದ ಶಿಸ್ತಿನ ಸಿಪಾಯಿ. ಟೈಮ್ ಬಂದಾಗ ಮಂತ್ರಿ ಆಗುತ್ತೇನೆ" ಎಂದರು.
"ನಮ್ಮ ಹಣೆಬರಹ ನೋಡಿಕೊಂಡು ಕಾಯುತ್ತಿದ್ದೇವೆ. ಜಾತಕ ಪಕ್ಷದ ರೀತಿಯಲ್ಲಿ ಸಚಿವ ಸ್ಥಾನ ಸಿಗಬಹುದು ಎಂದು ಕಾಯುತ್ತಿದ್ದೇನೆ. ನನ್ನ ಸೇರಿ 135 ಜನರಿಗೂ ಸಚಿವ ಸ್ಥಾನದ ಮೇಲೆ ಆಸೆ ಇದೆ" ಎಂದು ತಿಳಿಸಿದರು.
ಸಚಿವ ಸಂಪುಟ ಪುನಾರಚನೆ ವಿಚಾರವಾಗಿ ಪ್ರತಿಕ್ರಿಯಿಸಿ, "ಅವಕಾಶ ಕೊಡುತ್ತೇವೆ ಎಂದು ಹೈಕಮಾಂಡ್ ತಿಳಿಸಿದೆ. ಯಾವುದೇ ಹೇಳಿಕೆ ನೀಡಬಾರದು ಎಂದು ಡಿಕೆಶಿ ತಿಳಿಸಿದ್ದಾರೆ. ಹಾಗಾಗಿ ಈ ವಿಚಾರವಾಗಿ ಜಾಸ್ತಿ ಮಾತನಾಡಲ್ಲ. ಮಂತ್ರಿ ಆಗಿಯೇ ಆಗಬೇಕು ಎಂದು ನನಗೂ ಆಸೆ ಇದೆ. ಯಾವಾಗ ಟೈಂ ಬರುತ್ತದೆ ಎಂದು ಕಾಯುತ್ತಿದ್ದೇವೆ" ಎಂದು ಹೇಳಿದರು.
"ಮಂತ್ರಿ ಮಂಡಲ ವಿಸ್ತರಣೆ ಆಗಲಿ, ಆಗದಿರಲಿ. ನಾನು ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ. ನಾನು ಹಿರಿಯನಾಗಿರುವುದರಿಂದ ಮಂತ್ರಿಯಾಗುವ ದೊಡ್ಡ ಆಸೆ ಇದೆ" ಎಂದು ತಿಳಿಸಿದರು.
ಇದನ್ನೂ ಓದಿ: ಜಾತಿಗಣತಿ ವರದಿ ಬಹಿರಂಗಪಡಿಸಲು ಮನವಿ ಮಾಡಿದ್ದೇವೆ: ಬಿ.ಕೆ.ಹರಿಪ್ರಸಾದ್
ಮಂತ್ರಿ ಸ್ಥಾನ ನಮ್ಮಂತಹ ಸಾಮಾನ್ಯರಿಗೂ ಕೊಡಿ-ಗೋಪಾಲಕೃಷ್ಣ ಬೇಳೂರು: ಮತ್ತೊಂದೆಡೆ, "ಕೇವಲ ಮಾಜಿ ಮುಖ್ಯಮಂತ್ರಿ ಮಕ್ಕಳಿಗೆ ಅಧಿಕಾರ ಕೊಟ್ಬಿಟ್ಟರೆ ನಾವೇನು ಮಾಡಬೇಕು" ಎಂದು ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅಸಮಾಧಾನ ಹೊರಹಾಕಿದ್ದಾರೆ. ಶಿವಮೊಗ್ಗದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, "ಕೇವಲ ಮಾಜಿ ಮುಖ್ಯಮಂತ್ರಿ ಮಕ್ಕಳಿಗೆ, ಮಂತ್ರಿ ಮಕ್ಕಳಿಗೆ ಯಾಕೆ ಅಧಿಕಾರ ಕೊಡಬೇಕು ಎಂದು ಪ್ರಶ್ನಿಸಿದ ಅವರು, ನಮ್ಮಂತಹ ಸಾಮಾನ್ಯರಿಗೂ ಅಧಿಕಾರ ಕೊಡಿ. ನಾನು ಮೂರು ಸಲ ಶಾಸಕನಾಗಿದ್ದೇನೆ. ಕೇವಲ ಮುಖ್ಯಮಂತ್ರಿಗಳ ಮಕ್ಕಳಿಗೆ ಯಾಕೆ ಅಧಿಕಾರ ಕೊಡಬೇಕು?" ಎಂದರು.
"ನನಗೆ ಲೋಕಸಭೆ ಚುನಾವಣೆಗೆ ಟಿಕೆಟ್ ಕೊಡಬೇಕು. ನಾನು ಸಂಸತ್ ಚುನಾವಣೆಗೆ ಆಕಾಂಕ್ಷಿಯಾಗಿದ್ದೇನೆ. ನಾನ್ಯಾಕೆ ಎಂಪಿ ಆಗಬಾರದು?. ಯಡಿಯೂರಪ್ಪ ಅವರ ಮಗ ರಾಘವೇಂದ್ರ ಅವರನ್ನು ಎದುರಿಸುವ ಶಕ್ತಿ ನನಗೆ ಇದೆ" ಎಂದು ಹೇಳಿದ್ದಾರೆ.