ಬೆಂಗಳೂರು: ಮಾಜಿ ಶಾಸಕರಾದ ಕೆ.ಎಸ್ ಕಿರಣ್ ಕುಮಾರ್ ಹಾಗೂ ಸಂದೇಶ್ ನಾಗರಾಜ್ ಇಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರ್ಪಡೆ ಆದರು. ಕೆಪಿಸಿಸಿ ಕಚೇರಿಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಮ್ಮುಖದಲ್ಲಿ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಬಿಜೆಪಿಯ ಮಾಜಿ ಶಾಸಕ ಕೆ.ಎಸ್ ಕಿರಣ್ ಕುಮಾರ್ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಸಂದೇಶ್ ನಾಗರಾಜ್, ತುಮಕೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹೆಚ್.ನಿಂಗಪ್ಪ ಕಾಂಗ್ರೆಸ್ ಸೇರ್ಪಡೆ ಆದರು.
ಕಾರ್ಯಕ್ರಮದಲ್ಲಿ ಡಾ.ಜಿ ಪರಮೇಶ್ವರ್, ಕೆ.ಎಚ್ ಮುನಿಯಪ್ಪ, ಜಮೀರ್ ಅಹ್ಮದ್, ಕೆ ಎನ್ ರಾಜಣ್ಣ, ಶಾಸಕ ಡಾ.ರಂಗನಾಥ್, ಸಲೀಂ ಅಹ್ಮದ್ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು. ಪೂರ್ವ ನಿಯೋಜಿತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಿದ್ದ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕಾರ್ಯಕ್ರಮಕ್ಕೆ ಅನುಪಸ್ಥಿತರಾಗಿದ್ದರು. ಪಕ್ಷದ ಧ್ವಜ ಕೊಟ್ಟು ಸ್ವಾಗತಿಸಿದ ಸಿದ್ದರಾಮಯ್ಯ, ಸುರ್ಜೇವಾಲಾ ಅಧಿಕೃತವಾಗಿ ಕಾಂಗ್ರೆಸ್ ಗೆ ಬರಮಾಡಿಕೊಂಡರು.
ಬಾಂಬ್ ಸಿಡಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ: ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮಾತನಾಡಿ, ಮಾಜಿ ಶಾಸಕರು ಕಾಂಗ್ರೆಸ್ ಸೇರುತ್ತಿದ್ದಾರೆ. ಇನ್ನಷ್ಟು ಹಾಲಿ ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ ಎಂದು ತಿಳಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಗೆ ಒಳ್ಳೆಯ ವಾತಾವರಣ ಇದೆ. ಹಾಗಾಗಿ ಹಲವರು ಕಾಂಗ್ರೆಸ್ ಕಡೆ ಮುಖ ಮಾಡುತ್ತಿದ್ದಾರೆ. ಬೇರೆ ಪಕ್ಷಗಳ ಬಹಳ ಜನ ಶಾಸಕರು ಕಾಂಗ್ರೆಸ್ ಗೆ ಸೇರಲಿದ್ದಾರೆ. ಜೊತೆಗೆ ಮಂತ್ರಿಯಾಗಿದ್ದ ಕೆಲವರು ಸೇರುವ ಸಂಭವ ಇದೆ ಎಂದರು.
ಮುಂದುವರೆದು, ನಾವು ಬಿಜೆಪಿ ರೀತಿ ಒಳಗೊಂದು ಹೊರಗೊಂದು ಹೇಳೋದಿಲ್ಲ. ಅವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಧರ್ಮ, ಧರ್ಮಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಅವನು ಅಧ್ಯಕ್ಷನಾಗಲು ಲಾಯಕ್ಕಲ್ಲ. ಅಭಿವೃದ್ಧಿ ಚರ್ಚೆ ಬಿಟ್ಟು ಲವ್ ಜಿಹಾದ್ ಬಗ್ಗೆ ಮಾತಾಡಿ ಅಂತಾರೆ. ಇವರೆಲ್ಲಾ ರಾಜಕೀಯಕ್ಕೆ ನಾಲಾಯಕ್. ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡಿದ್ದಾಗ ಟಿಪ್ಪು ವರ್ಸಸ್ ಅಬ್ಬಕ್ಕ ಅಂತಾ ಹೇಳಿದ್ದಾರೆ. ಇವರೆಲ್ಲಾ ಸಮಾಜದ ಸಾಮರಸ್ಯ ಕೆಡಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಮಾಜಿ ಡಿಸಿಎಂ ಜಿ.ಪರಮೇಶ್ವರ್ ಮಾತನಾಡಿ, ಸಮಾಜದ ಶಾಂತಿ ಕದಡಲಾಗುತ್ತಿದೆ. ಮೊದಲಿನಿಂದಲೂ ಬಿಜೆಪಿ ಧರ್ಮಗಳ ನಡುವೆ ಒಡಕು ಮೂಡಿಸುತ್ತಿದೆ. ಇದರಿಂದ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದೆ. ಅವರು ಎಲ್ಲಾ ವರ್ಗಗಳ ವಿರೋಧಿಗಳು. ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬರಲಿದೆ. ನಮ್ಮ ನಾಯಕರು ಪ್ರಜಾಧ್ವನಿ ಯಾತ್ರೆ ಮಾಡುತ್ತಿದ್ದಾರೆ. ಅಲ್ಲಿ ನಿರೀಕ್ಷೆ ಮೀರಿ ಜನರಿಂದ ಪ್ರತಿಕ್ರಿಯೆ ಸಿಗುತ್ತಿದೆ ಎಂದರು.
ಚಿಕ್ಕನಾಯಕನಹಳ್ಳಿ ಬಿಜೆಪಿಯ ಮಾಜಿ ಶಾಸಕ ಕಿರಣ್ ಕುಮಾರ್ ಕಾಂಗ್ರೆಸ್ ಸೇರ್ಪಡೆ ಆಗಿದ್ದು, ಕೆ. ಎಸ್. ಕಿರಣ್ ಕುಮಾರ್ ಮೊದಲು ಕಳ್ಳಂಬೆಳ್ಳ ಕ್ಷೇತ್ರದಿಂದ ಶಾಸಕರಾಗಿದ್ದರು. 2008 ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಯ ನಂತರ ಕಳ್ಳಂಬೆಳ್ಳ ವಿಧಾನಸಭಾ ಕ್ಷೇತ್ರ ಚಿಕ್ಕನಾಯಕನಹಳ್ಳಿಗೆ ಸೇರ್ಪಡೆಯಾಯ್ತು. ಅವರು ಸದ್ಯ ಚಿಕ್ಕನಾಯಕನಹಳ್ಳಿಯಿಂದ ಟಿಕೆಟ್ ನಿರೀಕ್ಷಿಸುತ್ತಿದ್ದರು. ತುಮಕೂರು ಗ್ರಾಮೀಣ ಮಾಜಿ ಶಾಸಕ ಎಚ್ ನಿಂಗಪ್ಪ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
2006 ರಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಶಾಸಕರಾಗಿದ್ದ ನಿಂಗಪ್ಪ, 2013ರಲ್ಲಿ ಜೆಡಿಎಸ್ ಟಿಕೆಟ್ ಸಿಗದಿದ್ದಕ್ಕೆ ಕೆಜೆಪಿಯಿಂದ ಸ್ಪರ್ಧಿಸಿದ್ದರು. ಬಳಿಕ ಕಾಂಗ್ರೆಸ್ ಸೇರಿದ್ದ ನಿಂಗಪ್ಪ ಮತ್ತೆ 2018ರಲ್ಲಿ ಜೆಡಿಎಸ್ಗೆ ಮರಳಿದ್ದರು. ಇದೀಗ ಜೆಡಿಎಸ್ ಪಕ್ಷಕ್ಕೆ ನಿಂಗಪ್ಪ ಅವರು ರಾಜೀನಾಮೆ ನೀಡಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ವಿಧಾನ ಪರಿಷತ್ ಜೆಡಿಎಸ್ ಸದಸ್ಯರಾಗಿದ್ದ ಸಂದೇಶ್ ನಾಗರಾಜ್ ಟಿಕೆಟ್ ನಿರಾಕರಣೆ ಹಿನ್ನೆಲೆ ಬಿಜೆಪಿಗೆ ಸೇರಿದ್ದರು. ಇದೀಗ ಅಲ್ಲಿಯೂ ಸರಿಬಾರದೇ ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ.
ಐಎಎಸ್ ಮತ್ತು ಐಪಿಎಸ್ ಅಧಿಕಾರಗಳ ಪೈಟ್ ವಿಚಾರ ಮಾತನಾಡಿದ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ, ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳು ಮಾತ್ರವಲ್ಲ ಬಿಜೆಪಿಯವರೇ ಕಿತ್ತಾಡುತ್ತಿದ್ದಾರೆ. ಒಬ್ಬರಿಗೊಬ್ಬರು ಹೊಡೆದಾಡಿಕೊಳ್ಳುತ್ತಿದ್ದಾರೆ. ಸಿಎಂ ಮಂಡಿಸಿದ ಬಜೆಟ್ ಬಗ್ಗೆ ಕೆಲವರಿಗೆ ಬೇಸರವಿದೆ. ಸಿಎಂ ಮೇಲೆ ಕೆಲವರು ಮುಗಿಬಿದ್ದಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಮಂಗಳೂರು: ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ಗೆ ಎದೆನೋವು - ತಪಾಸಣೆ ಬಳಿಕ ಆತಂಕ ನಿವಾರಣೆ