ಬೆಂಗಳೂರು: ಗುಜರಾತ್ ಅಮೂಲ್ ಜತೆ ರಾಜ್ಯದ ಕೆಎಂಎಫ್ ವಿಲೀನಗೊಳಿಸುವ ಕುರಿತಾಗಿ ಯಾವುದೇ ಚರ್ಚೆ ಆಗಿಲ್ಲ. ಹೇಳಿಲ್ಲವೆಂದ್ರೆ ಅದನ್ನೂ ವಿಲೀನಗೊಳಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಅಮಿತ್ ಶಾ ಹೇಳಿಕೆ ತಿರುಚಿ ಚುನಾವಣೆ ಗಿಮಿಕ್ ಗಾಗಿ ಕಾಂಗ್ರೆಸ್ ಜೆಡಿಎಸ್ ನಾಯಕರು ಆರೋಪಿಸುತ್ತಿದ್ದಾರೆ ಎಂದು ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಸ್ಪಷ್ಟಪಡಿಸಿದ್ದಾರೆ.
ಅಮೂಲ್ ಕೆಎಂಎಫ್ ವಿಲೀನ ವಿಚಾರ ಹೇಳಿಲ್ಲ: ಮಲ್ಲೇಶ್ವರದ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಅಮಿತ್ ಶಾ ಅವರು ಮೂರು ಸಹಕಾರ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಮಂಡ್ಯದ ಗೆಜ್ಜಲಗೆರೆ ಮೆಗಾ ಡೈರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಅಮೂಲ್ ಮತ್ತು ಕೆಎಂಎಫ್ ವಿಲೀನಗೊಳಿಸುವ ಬಗ್ಗೆ ಅಮಿತ್ ಶಾ ಎಲ್ಲಿಯೂ ಕೂಡ ಹೇಳಿಲ್ಲ. ಕೆಎಂಎಫ್ ಬಲಿಷ್ಠ ಸಂಸ್ಥೆ ಆಗಿದೆ ಎಂದರು.
ಕೆಎಂಎಫ್ ಬಲಿಷ್ಠ: 15 ಮಿಲ್ಕ್ ಯೂನಿಯನ್, 9 ಲಕ್ಷ ಮಹಿಳೆಯರು ಸೇರಿ 26 ಲಕ್ಷ ಜನರು ಇದರಡಿ ಬರುತ್ತಾರೆ. ಸಾವಿರಾರು ಕೋಟಿ ವ್ಯವಹಾರ ನಡೆಯುತ್ತಿದೆ. ರಾಜ್ಯದ ಕೆಎಂಎಫ್ ಮಿಲ್ಕ್ ಯೂನಿಯನ್ ಮತ್ತು ಫೆಡರೇಶನ್ ಗುಜರಾತ್‍ನಷ್ಟೇ ಪ್ರಬಲವಾಗಿ ಬೆಳೆದಿದೆ. ಅಮೂಲ್ ಕೆಎಂಎಫ್ ವಿಲೀನ ಮಾಡುವ ವಿಚಾರವೇ ಇಲ್ಲ. ವಿಲೀನದ ಬಗ್ಗೆ ಚರ್ಚೆಯೇ ಇಲ್ಲ. ಸಿಎಂ ಬೊಮ್ಮಾಯಿ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ ಎಂದು ತಿಳಿಸಿದರು.
ಹಾಲಿನ ಸೊಸೈಟಿಗಳು ಶಕ್ತಿಶಾಲಿ: ಕರ್ನಾಟಕದ ಪ್ರತಿ ಗ್ರಾಮಗಳಲ್ಲೂ ಮಿಲ್ಕ್ ಡೈರಿ ಮಾಡಬೇಕು. ಪತ್ತಿನ ಸಹಕಾರ ಸಂಘಕ್ಕೆ ಹೊಸ ನಿಯಮಾವಳಿ ಮಾಡಬೇಕು. 3 ವರ್ಷಗಳೊಳಗೆ ಒಂದೇ ಸಾಫ್ಟ್ವೇರ್ ಅಳವಡಿಸಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದ್ದು, ಹೊಸ ಸಾಫ್ಟ್ವೇರ್ ಅಳವಡಿಸಲು ಶೇ 60ರಷ್ಟು ಹಣವನ್ನು ಕೇಂದ್ರ ಸರ್ಕಾರ ಕೊಡಲಿದೆ. ಒಂದೇ ನಿಯಮಾವಳಿ, ಒಂದೇ ಸಾಫ್ಟ್ವೇರ್ ಅಳವಡಿಕೆ ಆಗಲಿದೆ.
ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ರೇಷನ್ ಡಿಪೊ, ಪೆಟ್ರೋಲ್ ಬಂಕ್ ನಿರ್ವಹಣೆ ಇನ್ನಿತರ ಅವಕಾಶಗಳಿದ್ದರೆ ಅನುಮತಿ ಕೊಡಲು ಯೋಜಿಸಿದೆ. ಇಂಥ ಸಹಕಾರ ಸಂಘಗಳು ಮತ್ತು ಹಾಲಿನ ಸೊಸೈಟಿಗಳು ಶಕ್ತಿಶಾಲಿಯಾಗಿ ಕಾರ್ಯ ನಿರ್ವಹಿಸಬೇಕೆಂಬ ಚಿಂತನೆ ಮಾಡಿ, ಅದರ ಅನುಷ್ಠಾನ ಆಗುತ್ತಿದೆ. ಈ ಕುರಿತಂತೆ ಸಚಿವ ಸಂಪುಟದಲ್ಲಿ ಚರ್ಚಿಸಿ ಮಾದರಿ ನಿಯಮಾವಳಿ ಜಾರಿಗೊಳಿಸುವ ಉದ್ದೇಶವಿದೆ ಎಂದು ಅಭಿಪ್ರಾಯ ತಿಳಿಸಿದರು.
ಕೆಎಂಎಫ್ ಬಲಪಡಿಸಲು ಕೇಂದ್ರ ಆದ್ಯತೆ: ಕರ್ನಾಟಕದಲ್ಲಿ ಡೈರಿ ಉದ್ದಿಮೆ ಬಲಪಡಿಸಲು ಬೇಕಾಗಿರುವ ಸಹಕಾರವನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ಡೈರಿಯನ್ನು ಆರ್ಥಿಕ ಸ್ವಾವಲಂಬಿ ಮಾಡುವ ಕೆಲಸ ಮಾಡುತ್ತಿದ್ದಾರೆ. ವಿಲೀನ ಮಾಡುವ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಆದರೆ ಕಾಂಗ್ರೆಸ್, ಜೆಡಿಎಸ್ ಸುಮ್ಮನೆ ಆರೋಪಿಸುತ್ತಿವೆ. ಮಿಲ್ಕ್ ಫೆಡರೇಶನ್ ಗಟ್ಟಿಗೊಳಿಸುವ ಬಗ್ಗೆ ಅಮಿತ್ ಶಾ ಸಲಹೆ ನೀಡಿದ್ದಾರೆಯೇ ಹೊರತು, ಯಾವುದೇ ವಿಲೀನ ಮಾಡುವ ಚರ್ಚೆಯೇ ನಡೆದಿಲ್ಲ. ಆದರೆ ಕಾಂಗ್ರೆಸ್ ಜೆಡಿಎಸ್ಗೆ ಈ ಪ್ರಶ್ನೆ ಹುಟ್ಟಿಕೊಳ್ತೋ ಗೊತ್ತಿಲ್ಲ. ಚುನಾವಣೆ ಗಿಮಿಕ್ಗಾಗಿ ಪ್ರತಿತಿಪಕ್ಷಗಳ ನಾಯಕರು ಈ ರೀತಿ ಹೇಳುತ್ತಿದ್ದರಬಹುದು ಅಷ್ಟೇ ಎಂದು ತಿಳಿಸಿದರು.
ಪಕ್ಷ ಸಂಘಟನೆ ಗುರಿ: ಅನ್ಯ ಪಕ್ಷದವರ ಸೇರ್ಪಡೆ ಬಗ್ಗೆ ಒಂದು ಚರ್ಚೆ ಆಗಿದೆ. ಪಕ್ಷ ಬಲಪಡಿಸಲು ಏನೇನು ಮಾಡಬೇಕೆಂಬುದರ ಸಲಹೆ ನೀಡಿದ್ದು, ಮಂಡ್ಯ ಭಾಗದಲ್ಲಿ ಇನ್ನೂ ಕೆಲವು ಕಾರ್ಯಕ್ರಮಗಳನ್ನು ಮಾಡಲಿದ್ದೇವೆ. ಮೈಸೂರಿಗೆ ಪ್ರಧಾನ ಮಂತ್ರಿಗಳು ಬರಲಿದ್ದಾರೆ. ಮತ್ತೊಮ್ಮೆ ಮಂಡ್ಯಕ್ಕೂ ಬರುತ್ತೇನೆ ಎಂದು ಅಮಿತ್ ಶಾ ಕೂಡ ಹೇಳಿದ್ದಾರೆ. ನಾಳೆಯಿಂದ ಅವರು ಹಾಕಿಕೊಟ್ಟ ಕಾರ್ಯಕ್ರಮ, ಸೂಚನೆಗಳ ಮೂಲಕ ಹಳೆ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ ಕೆಲಸವನ್ನು ಗಟ್ಟಿಯಾಗಿ ಮಾಡಲಿದ್ದೇವೆ ಎಂದು ಹೇಳಿದರು.
ಸಚಿವ ಸಂಪುಟ ವಿಸ್ತರಣೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಚಿವ ಸೋಮಶೇಖರ್, ರಾಂಗ್ ಈ ಪ್ರಶ್ನೆ ಕೇಳುತ್ತಿದ್ದೀರಿ, ಅದು ಮುಖ್ಯಮಂತ್ರಿಗಳ ಪರಮಾಧಿಕಾರ, ಹೈಕಮಾಂಡ್ ಹೇಳಿದಂತೆ ಸಿಎಂ ಯಾಕೆ ಕೇಳಬೇಕು ಎಂದು ಸಿಎಂ ಬಗ್ಗೆ ಅಸಹಾಯಕತೆ ವ್ಯಕ್ತಪಡಿಸಿದರು.
ಇದನ್ನೂಓದಿ:ಅಮುಲ್ ಜೊತೆ ನಂದಿನಿ ವಿಲೀನವಿಲ್ಲ, 100 ವರ್ಷವಾದರೂ ನಂದಿನಿ ಅಸ್ತಿತ್ವ ಇರಲಿದೆ: ಸಿಎಂ ಬೊಮ್ಮಾಯಿ