ಬೆಂಗಳೂರು: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ ಸರ್ಕಾರಕ್ಕೆ ಯಾವುದೇ ಆತಂಕ ಇಲ್ಲವೆಂದು ಸಚಿವ ಡಿ ಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ನಾವು ಕೈಗೊಂಡಿರುವ ನಿರ್ಧಾರವನ್ನು ನಮ್ಮ ಎಐಸಿಸಿ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಆಗಿರುವ ಕೆ ಸಿ ವೇಣುಗೋಪಾಲ್ ನೀಡಲಿದ್ದಾರೆ ಎಂದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಂದರ್ಭದಲ್ಲಿ ಈ ವಿಷಯ ತಿಳಿಸಿದರು.
ಪಕ್ಷದ ಎಲ್ಲಾ ಸಚಿವರು ಇಲ್ಲೇ ಇರುವ ಕಾರಣದಿಂದ ರಾಜಭವನಕ್ಕೆ ತೆರಳುವ ಅಥವಾ ಅಲ್ಲಿ ಭೇಟಿ ಕೊಟ್ಟು ವಿವರಣೆ ನೀಡುವ ಯಾವುದೇ ಅಗತ್ಯ ಇಲ್ಲ ಎಂದರು.
ನಿವಾಸದಿಂದ ತೆರಳಿದ ಡಿಸಿಎಂ
ಡಿಸಿಎಂ ಜಿ ಪರಮೇಶ್ವರ್ ಹಾಗೂ ಸಚಿವರಾದ ಎಂ ಬಿ ಪಾಟೀಲ್ ಮತ್ತು ಕೃಷ್ಣ ಬೈರೇಗೌಡ ನಿವಾಸದಿಂದ ತೆರಳಿದ್ದಾರೆ. ಸಿಎಂ ಈಗಲೂ ಕೂಡ ಡಿಸಿಎಂ ನಿವಾಸದಲ್ಲಿಯೇ ಇದ್ದು ಸಮಾಲೋಚನೆ ಮುಂದುವರಿಸಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ ಸಿ ವೇಣುಗೋಪಾಲ್ ಹಾಗೂ ಇತರೆ ನಾಯಕರು ಡಿಸಿಎಂ ನಿವಾಸದಲ್ಲಿಯೇ ಇದ್ದು ಅವರೊಂದಿಗೆ ಸಿಎಂ ಮಾತುಕತೆ ಮುಂದುವರಿಸಿದ್ದಾರೆ.
ಆದರೆ ಡಿಸಿಎಂ ಹಾಗೂ ಇಬ್ಬರು ಸಚಿವರು ಒಂದೇ ಕಾರಿನಲ್ಲಿ ತೆರಳಿದ್ದು, ಕುತೂಹಲಕ್ಕೆ ಕಾರಣವಾಗಿದೆ. ಯಾವ ಕಡೆ ತೆರಳಿದ್ದಾರೆ ಎಂಬುದು ಇನ್ನೇನು ತಿಳಿದುಬರಬೇಕಿದೆ. ಸಚಿವರಾದ ಕೆ.ಜೆ. ಜಾರ್ಜ್, ರಹೀಂಖಾನ್, ಆರ್. ಶಂಕರ್, ರಾಜಶೇಖರ್ ಪಾಟೀಲ್ ಕೂಡ ನಿರ್ಗಮಿಸಿದ್ದಾರೆ.
ಸದ್ಯ ಡಿಸಿಎಂ ನಿವಾಸದಲ್ಲಿ ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ ಸಿ ವೇಣುಗೋಪಾಲ್ ಮತ್ತಿತರ ಬೆರಳೆಣಿಕೆಯಷ್ಟು ನಾಯಕರು ಉಳಿದುಕೊಂಡಿದ್ದು, ಮುಂದಿನ ಚರ್ಚೆ ನಡೆಸಿದ್ದಾರೆ.