ಬೆಂಗಳೂರು : ಅಧಿಕಾರದಲ್ಲಿದ್ದುಕೊಂಡು ಮತ್ತೆ ಗೆದ್ದು ಅಧಿಕಾರಕ್ಕೆ ಬರುವುದೇ ಮುಖ್ಯ ಎಂದು ಸಿಎಂ ಬಸವರಾಜ ಬೊಮ್ಮಾಯಿ ವಿಧಾನಸಭೆಯಲ್ಲಿ ಹೇಳಿದ್ದಾರೆ.
ಬಜೆಟ್ ಮೇಲಿನ ಚರ್ಚೆ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಸಿಎಂ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಏನು ಹೇಳುತ್ತಾರೋ ಅದಕ್ಕೆ ವಿರುದ್ಧವಾಗುತ್ತದೆ.
2018ರ ಚುನಾವಣೆ ಸಂದರ್ಭದಲ್ಲಿ ನಮ್ಮಪ್ಪನಾಣೆ ಯಡಿಯೂರಪ್ಪ, ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದಿಲ್ಲ ಎಂದಿದ್ದರು. ಅವರಿಬ್ಬರೂ ಮುಖ್ಯಮಂತ್ರಿಯಾದರು. ನಾವು ಅಧಿಕಾರಕ್ಕೆ ಬರುತ್ತೇವೆ ಎಂದಿದ್ದರು. ಕಾಂಗ್ರೆಸ್ ಅಧಿಕಾರಕ್ಕೆ ಬರಲಿಲ್ಲ ಎಂದು ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದರು.
ಪಂಚರಾಜ್ಯ ಚುನಾವಣೆಯಲ್ಲಿ ಅಧಿಕಾರದಲ್ಲಿದ್ದ 4 ರಾಜ್ಯಗಳಲ್ಲಿ ಗೆದ್ದಿದ್ದೀರಿ ಎಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅಧಿಕಾರವಿದ್ದ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತಿರುವುದು ಬಿಜೆಪಿ ಮಾತ್ರ. ಪಂಜಾಬ್‍ನಲ್ಲಿ ಅಧಿಕಾರದಲ್ಲಿದ್ದೀರಲ್ಲ ಅಲ್ಲೂ ನೀವೇ ಗೆಲ್ಲಬೇಕಿತ್ತು. ಜನರ ನಾಡಿಮಿಡಿತ ಇವರೊಬ್ಬರಿಗೆ ಗೊತ್ತಿರುವುದೇ ಎಂದು ಪ್ರಶ್ನಿಸಿದರು.
ಚುನಾವಣೆಯಲ್ಲಿ ಗೆದ್ದೆವು ಎಂದು ಹೇಳಿದವರು ಸೋತಿದ್ದಾರೆ. ನಮ್ಮ ಬಜೆಟ್ನ ಇಟ್ಟುಕೊಂಡು ಜನರ ಬಳಿಗೆ ಹೋಗಿ ಜನರ ವಿಶ್ವಾಸಗಳಿಸಿ ಅಧಿಕಾರಕ್ಕೆ ಬರುತ್ತೇವೆ ಎಂದು ನಮ್ಮ ನಾಯಕರಾದ ಯಡಿಯೂರಪ್ಪ ಹೇಳಿದ್ದಾರೆ.
ಇದನ್ನೂ ಓದಿ: ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಪ್ರಶ್ನೆಯೇ ಇಲ್ಲ: ಯಡಿಯೂರಪ್ಪ ಅಚಲ
ಯಡಿಯೂರಪ್ಪ ಅವರಿಗೆ ಅಧಿಕಾರವಿರಲಿ, ಇಲ್ಲದಿರಲಿ ಜನರ ಹೃದಯದಲ್ಲಿ ವಿಶಿಷ್ಟವಾದ ಸ್ಥಾನವಿದೆ. ಸಮಚಿತ್ತದಿಂದ ತೆಗೆದುಕೊಳ್ಳುವ ಶಕ್ತಿಯಿದೆ. ಎಷ್ಟೇ ನೋವಿದ್ದರೂ ಎಲ್ಲರಿಗಾಗಿ ಒಪ್ಪಿಕೊಂಡಿದ್ದಾರೆ. ಅಂತಹ ನಿದರ್ಶನಗಳನ್ನು ನೋಡಿದ್ದೇನೆ ಎಂದರು.
ಕಾಂಗ್ರೆಸ್ ಭ್ರಮೆ : ರಾಜಕೀಯ ಪಕ್ಷಗಳು ಇರುವುದೇ ರಾಜಕಾರಣ ಮಾಡಲು, ಚುನಾವಣೆಯಲ್ಲಿ ಗೆಲ್ಲುವುದಾಗಿಯೇ ಹೇಳುತ್ತೇವೆ. ಆದರೆ, ಫಲಿತಾಂಶ ಬಂದಾಗ ಸತ್ಯ ಗೊತ್ತಾಗುತ್ತದೆ. ನಾವೇ ಗೆಲ್ಲುತ್ತೇವೆ ಎಂಬ ಭ್ರಮೆಯಲ್ಲಿ ಕಾಂಗ್ರೆಸ್ ಇದೆ. ಎಲ್ಲ ರಾಜಕೀಯ ಪಕ್ಷವನ್ನು ಜನರು ನೋಡಿದ್ದಾರೆ.
ಯಾರು ಮಾತನಾಡುತ್ತಾರೆ ಎಂಬುದು ಮುಖ್ಯ. ಸಿದ್ದರಾಮಯ್ಯ ಅವರು ಹಲವು ಏಳು ಬೀಳುಗಳನ್ನು ಕಂಡಿದ್ದಾರೆ, ಅವರಿಗೆ ಸತ್ಯ ಗೊತ್ತಿದ್ದರೂ ಸತ್ಯದ ವಿರುದ್ಧ ಜೋರಾಗಿ ಹೇಳುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಬಜೆಟ್ ಕಾರ್ಯಕ್ರಮ ಹಾಗೂ ನಮ್ಮ ಕಾರ್ಯಕ್ರಮಗಳ ಮೇಲೆ ಜನರ ವಿಶ್ವಾಸಗಳಿಸಿ ಯಡಿಯೂರಪ್ಪ ನಾಯಕತ್ವದಲ್ಲಿ 2023ರ ಚುನಾವಣೆಯಲ್ಲಿ ನಾವು ಗೆಲುವು ಸಾಧಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.