ಬೆಂಗಳೂರು: ಕಾಂಗ್ರೆಸ್ ಪಕ್ಷವು ಮೊದಲಿಗೆ ತನ್ನ ಮನೆಯನ್ನು ಸರಿಯಾಗಿಟ್ಟುಕೊಳ್ಳಲಿ ಎಂದು ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಹೇಳಿದ್ದಾರೆ. ಮುಂದಿನ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳ ಮೈತ್ರಿಯ ಸಾಧ್ಯತೆಗಳ ಬಗ್ಗೆ ಕೇಳಲಾದ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು. ಕಾಂಗ್ರೆಸ್ ಪಕ್ಷವೊಂದೇ ದೇಶದ ಏಕೈಕ ವಿರೋಧ ಪಕ್ಷವಲ್ಲ ಎಂದು ಅವರು ತಿಳಿಸಿದರು. ಮಾಧ್ಯಮ ಸಂಸ್ಥೆಯೊಂದು ನಡೆಸಿದ ಸಂವಾದದಲ್ಲಿ ದೇವೇಗೌಡರು ಹಲವಾರು ಪ್ರಶ್ನೆಗಳಿಗೆ ಲಿಖಿತ ರೂಪದಲ್ಲಿ ಉತ್ತರಿಸಿದ್ದಾರೆ. ಪ್ರಶ್ನೋತ್ತರದ ಸಂಪೂರ್ಣ ಮಾಹಿತಿ ಇಲ್ಲಿದೆ.
ಪ್ರ: ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನ ಭವಿಷ್ಯವನ್ನು ನೀವು ಹೇಗೆ ನೋಡುತ್ತೀರಿ? ಜೆಡಿಎಸ್ ತಂತ್ರ ಮತ್ತು ಪ್ರಚಾರದ ಕೇಂದ್ರಬಿಂದು ಏನಾಗಲಿದೆ?
ಉ: ಕರ್ನಾಟಕದಾದ್ಯಂತ ನನ್ನ ಪಕ್ಷ ಉತ್ತಮ ಸಾಧನೆ ಮಾಡಲಿದೆ. ಎರಡು ರಾಷ್ಟ್ರೀಯ ಪಕ್ಷಗಳತ್ತ ಮಾತ್ರ ನೋಡುತ್ತಿರುವ ಬಹಳಷ್ಟು ಜನರಿಗೆ ಆಶ್ಚರ್ಯವಾಗಲಿದೆ. ನಾವು ವಿಭಜಕ ಅಜೆಂಡಾಕ್ಕಾಗಿ ಮತ ಕೇಳುತ್ತಿಲ್ಲ. ಎಲ್ಲರನ್ನೂ ಒಳಗೊಳ್ಳುವ ಸಾಮಾಜಿಕ ಮತ್ತು ಅಭಿವೃದ್ಧಿ ದೃಷ್ಟಿಯ ಪಂಚರತ್ನ ಕಾರ್ಯಕ್ರಮದ ಹೆಸರಿನಲ್ಲಿ ನಾವು ಮತ ಕೇಳುತ್ತಿದ್ದೇವೆ. ನನ್ನ ಪಕ್ಷ ಅಧಿಕಾರಕ್ಕೆ ಬರಲಿದ್ದು, ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುತ್ತೇವೆ. ಈ ಕಾರ್ಯಕ್ರಮದ ಪ್ರಚಾರಕ್ಕಾಗಿ ನಮ್ಮ ನಾಯಕ ಎಚ್ ಡಿ ಕುಮಾರಸ್ವಾಮಿ ರಾಜ್ಯಾದ್ಯಂತ ಪ್ರವಾಸವನ್ನು ಮುಗಿಸಿದ್ದಾರೆ. ಅವರಿಗೆ ಸಿಕ್ಕಿರುವ ಪ್ರತಿಕ್ರಿಯೆ ಅಗಾಧವಾಗಿದೆ. ನಮ್ಮ ಪಕ್ಷದ ಕಾರ್ಯತಂತ್ರವು ತುಂಬಾ ಸರಳವಾಗಿದೆ. ಅದೇನೆಂದರೆ- ಕಠಿಣ ಪರಿಶ್ರಮ ಮಾಡಿ ಮತ್ತು ಜನರೊಂದಿಗೆ ಪ್ರಾಮಾಣಿಕವಾಗಿರಿ, ಅವರನ್ನು ದೂಷಿಸಬೇಡಿ ಮತ್ತು ಅವರನ್ನು ವಿಭಜಿಸಬೇಡಿ.
ಪ್ರ: ಹಳೇ ಮೈಸೂರಿನಿಂದ ಆಚೆಗೆ ಜೆಡಿಎಸ್ ತನ್ನ ನೆಲೆಯನ್ನು ಗಣನೀಯವಾಗಿ ವಿಸ್ತರಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂಬ ಅಭಿಪ್ರಾಯ ಕೆಲವೆಡೆ ಇದೆ, ಆ ನಿಟ್ಟಿನಲ್ಲಿ ಏನು ಮಾಡಲಾಗುತ್ತಿದೆ?
ಉ: ನಾವು ಒಂದೇ ಪ್ರದೇಶಕ್ಕೆ ಸೀಮಿತವಾಗಿದ್ದೇವೆ ಎಂಬುದು ರಾಷ್ಟ್ರೀಯ ಪಕ್ಷಗಳ ಕುತಂತ್ರದ ಪ್ರಚಾರವಾಗಿದೆ. ನಾವು ಯಾವಾಗಲೂ ರಾಜ್ಯಾದ್ಯಂತ ಮತ್ತು ಸಮುದಾಯಗಳಿಂದ ಶಾಸಕರನ್ನು ಹೊಂದಿದ್ದೇವೆ. ನಾನು ಏನು ಹೇಳುತ್ತಿದ್ದೇನೆ ಎಂಬುದನ್ನು ಅರ್ಥಮಾಡಿಕೊಳ್ಳಲು ಯಾರಾದರೂ 1999 ರಿಂದ ಶಾಸಕರು ಮತ್ತು ಕ್ಷೇತ್ರಗಳ ಪಟ್ಟಿಯನ್ನು ಪರಿಶೀಲಿಸಬೇಕು. ಹೌದು, ಮೈಸೂರು ಭಾಗವು ನಮಗೆ ಗರಿಷ್ಠ ಬೆಂಬಲ ನೀಡಿದೆ ಮತ್ತು ಅದಕ್ಕಾಗಿ ನಾವು ಕೃತಜ್ಞರಾಗಿರುತ್ತೇವೆ. ಈ ಬಾರಿ ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಹೆಚ್ಚು ಯಶಸ್ವಿಯಾಗಲಿದ್ದೇವೆ. ಸಚಿವ, ಮುಖ್ಯಮಂತ್ರಿ ಮತ್ತು ಪ್ರಧಾನ ಮಂತ್ರಿ ಹುದ್ದೆಗಳಲ್ಲಿದ್ದು, ನಾನು ಎಲ್ಲರ ಏಳಿಗೆಗಾಗಿ ಕೆಲಸ ಮಾಡಿದ್ದೇನೆ. ನಾನು ಎಂದಿಗೂ ಪ್ರದೇಶಗಳ ನಡುವೆ ಭೇದಭಾವ ಮಾಡಿಲ್ಲ. ಪಟ್ಟಭದ್ರ ಹಿತಾಸಕ್ತಿಗಳು ಸುಳ್ಳು ಹರಡುತ್ತಿದ್ದಾರೆ. ನನ್ನ ವೃತ್ತಿಜೀವನದಲ್ಲಿ ಸುಳ್ಳನ್ನು ಎದುರಿಸಲು ನಾನು ಎಂದಿಗೂ ದುಬಾರಿ ಪಿಆರ್ ಏಜೆನ್ಸಿಗಳನ್ನು ನೇಮಿಸಿಕೊಂಡಿಲ್ಲ. 60 ವರ್ಷಗಳಿಂದ ನನ್ನನ್ನು ಬೆಳೆಸಿದ ದೇವರಿಗೆ ಮತ್ತು ಜನರಿಗೆ ಸತ್ಯ ತಿಳಿದಿದೆ.
ಪ್ರ: ಜೆಡಿಎಸ್ ಸ್ವತಂತ್ರ ಸರ್ಕಾರ ರಚಿಸಲು 123 ಸ್ಥಾನಗಳ ಗುರಿಯನ್ನು ಹೊಂದಿದೆ. ಕೆಲವು ವಿಮರ್ಶಕರು ಇದು ಅವಾಸ್ತವಿಕ ಎಂದು ಹೇಳುತ್ತಾರೆ. ಆದರೆ ಈ ನಿಟ್ಟಿನಲ್ಲಿ ನಿಮಗಿರುವ ವಿಶ್ವಾಸವೆಷ್ಟು?
ಉ: ನಮ್ಮ ಕಠಿಣ ಪರಿಶ್ರಮ ಮತ್ತು ಅಭಿವೃದ್ಧಿಯ ದೃಷ್ಟಿ ನಮಗೆ ಆತ್ಮವಿಶ್ವಾಸವನ್ನು ನೀಡುತ್ತದೆ. ನಮ್ಮ ವಿಮರ್ಶಕರು ಮತ್ತು ರಾಜಕೀಯ ವಿರೋಧಿಗಳ ಕುತಂತ್ರಗಳ ಬಗ್ಗೆ ನಾನು ಹೆದರುವುದಿಲ್ಲ.
ಪ್ರ: ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಬಗ್ಗೆ ನಿಮ್ಮ ಅಭಿಪ್ರಾಯವೇನು ಮತ್ತು ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದಾಗ ಅವು ಹೇಗೆ ಕೆಲಸ ಮಾಡಿವೆ?
ಉ: ನಾನು ಈ ಬಗ್ಗೆ ಪ್ರತಿಕ್ರಿಯಿಸಲು ಬಯಸುವುದಿಲ್ಲ. ನಮ್ಮ ನಾಯಕರಾದ ಎಚ್ ಡಿ ಕುಮಾರಸ್ವಾಮಿ ಮತ್ತು ಸಿ ಎಂ ಇಬ್ರಾಹಿಂ (ಜೆಡಿಎಸ್ ರಾಜ್ಯಾಧ್ಯಕ್ಷ) ಈ ಬಗ್ಗೆ ಸರಿಯಾದ ವಿಶ್ಲೇಷಣೆ ನೀಡಬಹುದು. ರಾಷ್ಟ್ರೀಯ ಪಕ್ಷಗಳು ಪೊಳ್ಳು ಭರವಸೆಗಳನ್ನು ನೀಡುವ ಅಭ್ಯಾಸವನ್ನು ಹೊಂದಿವೆ ಎಂದು ನಾನು ಹೇಳಬಲ್ಲೆ. ಜನರು ಅವರ ಸುಳ್ಳುಗಳನ್ನು ಅರಿತುಕೊಂಡಿದ್ದಾರೆ.
ಪ್ರ: ಕರ್ನಾಟಕ ಚುನಾವಣೆ ಎಷ್ಟು ಮಹತ್ವದ್ದಾಗಿದೆ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಅದರ ಫಲಿತಾಂಶದ ಪರಿಣಾಮ ಏನಾಗಲಿದೆ?
ಉ: ಕರ್ನಾಟಕದ ಚುನಾವಣೆಯು ಈ ವರ್ಷ ಬರಲಿರುವ ಇತರ ರಾಜ್ಯಗಳ ಹಾಗೂ 2024 ರ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ.
ಪ್ರಶ್ನೆ: ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಕಾರ್ಯವೈಖರಿ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಅವರ ಆಡಳಿತದಲ್ಲಿ ಭಾರತದಲ್ಲಿ ಪ್ರಜಾಪ್ರಭುತ್ವದ ಬಗ್ಗೆ ನಡೆಯುತ್ತಿರುವ ಚರ್ಚೆಯ ಬಗ್ಗೆ ಏನು ಹೇಳುವಿರಿ?
ಉ: ನಾನು ರಾಜ್ಯಸಭೆಯಲ್ಲಿ ಕೃಷಿ ಸಮಸ್ಯೆಗಳು, ಕೃಷಿ ಕಾನೂನುಗಳು, ಕೋವಿಡ್, ಬಜೆಟ್, ಆರ್ಥಿಕತೆ, ಈಶಾನ್ಯ ರಾಜ್ಯಗಳು, ಕಾಶ್ಮೀರ ಇತ್ಯಾದಿ ಎಲ್ಲ ವಿಷಯಗಳ ಬಗ್ಗೆ ವಿವರವಾಗಿ ಮಾತನಾಡಿದ್ದೇನೆ. ಇದೆಲ್ಲವೂ ಸಂಸತ್ತಿನಲ್ಲಿ ಮತ್ತು ನನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ದಾಖಲಾಗಿದೆ. ಲೆಯಾಗಿದೆ. ಯಾರಾದರೂ ಇದನ್ನು ನೋಡಿದರೆ ಕೇಂದ್ರದ ಬಿಜೆಪಿ ಸರ್ಕಾರದ ಬಗ್ಗೆ ನನ್ನ ಮೌಲ್ಯಮಾಪನ ಏನೆಂದು ತಿಳಿಯುತ್ತದೆ. ನಾನು ಯಾವಾಗಲೂ ನನ್ನ ಕೆಲಸವನ್ನು ಗಂಭೀರವಾಗಿ ಪರಿಗಣಿಸಿದ್ದೇನೆ ಮತ್ತು 91 ನೇ ವಯಸ್ಸಿನಲ್ಲಿಯೂ ಅದನ್ನು ಮುಂದುವರಿಸಿದ್ದೇನೆ. ಕಾಂಗ್ರೆಸ್ ಪಕ್ಷವು ಈ ದೇಶದ ಏಕೈಕ ವಿರೋಧ ಪಕ್ಷವಲ್ಲ.
ಪ್ರ: 2024ರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪ್ರತಿಪಕ್ಷಗಳ ಒಗ್ಗಟ್ಟಿನಲ್ಲಿ ಕಾಂಗ್ರೆಸ್ ವಹಿಸಬೇಕಾದ ಪಾತ್ರ ಏನು ಎಂದು ನೀವು ಭಾವಿಸುತ್ತೀರಿ?
ಉ: ಮೊದಲು ಕಾಂಗ್ರೆಸ್ ತನ್ನ ಮನೆಯನ್ನು ಸುಸ್ಥಿತಿಗೆ ತರಬೇಕು. ವಿರೋಧ ಪಕ್ಷಗಳ ಮುಂದೆ ಹಲವು ಆಯ್ಕೆಗಳಿವೆ ಮತ್ತು ಈ ರಾಷ್ಟ್ರವು ಹಲವಾರು ಮುಂಚೂಣಿ ನಾಯಕರನ್ನು ಹೊಂದಿದೆ.
ಪ್ರ: ಮಾನನಷ್ಟ ಮೊಕದ್ದಮೆಯಲ್ಲಿ ದೋಷಿ ಎಂದು ಸಾಬೀತಾಗಿರುವ ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸುವ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಉ: ಈ ಬಗ್ಗೆ ನಾನು ಪ್ರತ್ಯೇಕವಾಗಿ ಕಾಮೆಂಟ್ ಮಾಡಲು ಬಯಸುವುದಿಲ್ಲ. ನನ್ನ ಪಕ್ಷದ ಹಿರಿಯ ನಾಯಕರು ಈಗಾಗಲೇ ಈ ಬಗ್ಗೆ ಮಾತನಾಡಿದ್ದಾರೆ. ಇದು ತುಂಬಾ ದುರದೃಷ್ಟಕರ ಎಂದು ನಾನು ಹೇಳಬಲ್ಲೆ.
ಪ್ರಶ್ನೆ: ಜನತಾ ಪರಿವಾರ ಮತ್ತು ತೃತೀಯ ರಂಗದ ಪುನರುಜ್ಜೀವನದ ಸಾಧ್ಯತೆಯ ಬಗ್ಗೆ ಏನು ಹೇಳುವಿರಿ?
ಉ: ಎಲ್ಲವೂ ಸಾಧ್ಯ. ಎಲ್ಲವೂ ಅಂದರೆ ಅಕ್ಷರಶಃ ಎಲ್ಲವೂ ಸಾಧ್ಯ. ನನಗೆ ಮೂರನೇ ಅಥವಾ ನಾಲ್ಕನೇ ರಂಗದಲ್ಲಿ ನಂಬಿಕೆ ಇಲ್ಲ, ನಾವು ಏನೇ ಮಾಡಿದರೂ ಈ ರಾಷ್ಟ್ರ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸುವುದಕ್ಕಾಗಿ ಮಾಡುತ್ತೇವೆ.
ಇದನ್ನೂ ಓದಿ : ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನಂಜನಗೂಡು ಪಂಚಮಹಾರಥೋತ್ಸವ ವೈಭವ- ವಿಡಿಯೋ