ಬೆಂಗಳೂರು: ರಾಜ್ಯದಲ್ಲಿ ಏಪ್ರಿಲ್ 17 ರಂದು ನಡೆಯುವ 2 ವಿಧಾನಸಭೆ ಹಾಗೂ ಒಂದು ಲೋಕಸಭೆ ಉಪಚುನಾವಣೆ ಮತದಾನದ ಬಳಿಕ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಹೋರಾಟಕ್ಕೆ ಕಾಂಗ್ರೆಸ್ ಪಕ್ಷ ಸೂಕ್ತ ರೂಪುರೇಷೆ ಹೆಣೆಯುತ್ತಿದೆ.
ಬೆಳಗಾವಿ ಲೋಕಸಭೆ ಹಾಗೂ ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆ ಬಹಿರಂಗ ಪ್ರಚಾರ ನಿನ್ನೆಗೆ ಮುಕ್ತಾಯ ವಾಗಿದ್ದು, ಕಾಂಗ್ರೆಸ್ ನಾಯಕರು ಒಗ್ಗಟ್ಟಾಗಿ ಕ್ಷೇತ್ರಾದ್ಯಂತ ಕಳೆದ 15 ದಿನಗಳಿಂದ ಭರ್ಜರಿ ಪ್ರಚಾರ ನಡೆಸಿದ್ದಾರೆ. ಇದರ ನಡುವೆ ಸಮಯ ಸಿಕ್ಕಾಗೆಲ್ಲ ರಾಜ್ಯ ಕಾಂಗ್ರೆಸ್ ನಾಯಕರು ತಾವಿದ್ದ ಸ್ಥಳದಲ್ಲೇ ವಿಶೇಷ ಸಭೆ ನಡೆಸಿ ಚರ್ಚಿಸಿದ್ದು, ಮುಂಬರುವ ದಿನಗಳಲ್ಲಿ ರಾಜ್ಯ ಸರ್ಕಾರದ ವಿರುದ್ಧ ಕೈಗೊಳ್ಳಬಹುದಾದ ಹೋರಾಟಗಳ ರೂಪುರೇಷೆ ಸಿದ್ಧಪಡಿಸಿಕೊಂಡಿದ್ದಾರೆ.
ಉಪಚುನಾವಣೆಯ ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದು, ಕ್ಷೇತ್ರದ ವ್ಯಾಪ್ತಿಯ ನಾಯಕರನ್ನು ಹೊರತುಪಡಿಸಿ ಉಳಿದವರು ಜಿಲ್ಲೆಯನ್ನು ತೊರೆಯಬೇಕಾಗಿದೆ. ಈ ಹಿನ್ನೆಲೆ ನಿರಂತರ ಪ್ರವಾಸದಲ್ಲಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ರಾಜ್ಯ ರಾಜಧಾನಿ ಬೆಂಗಳೂರಿಗೆ ವಾಪಸ್ಸಾಗುತ್ತಿದ್ದಾರೆ.
ಇಂದಿನಿಂದಲೇ ಕಾಂಗ್ರೆಸ್ ನಾಯಕರ ವಿಶೇಷ ಸಭೆ, ಸಮಾಲೋಚನೆಗಳು ಆರಂಭವಾಗಲಿವೆ. ಕೊರೊನಾ ನಿಯಂತ್ರಣದಲ್ಲಿ ರಾಜ್ಯ ಸರ್ಕಾರದ ವೈಫಲ್ಯ, ರೋಗಿಗಳಿಗೆ ಸೂಕ್ತ ಚಿಕಿತ್ಸಾ ವ್ಯವಸ್ಥೆ ಕಲ್ಪಿಸುವಲ್ಲಿ ಹಿನ್ನಡೆ, ಕೋವಿಡ್ನಿಂದ ಮೃತಪಟ್ಟ ರೋಗಿಗಳ ಅಂತ್ಯಸಂಸ್ಕಾರಕ್ಕೆ ಸೂಕ್ತ ಸೌಕರ್ಯ ಕಲ್ಪಿಸದಿರುವುದು, ಮತ್ತೊಮ್ಮೆ ಕೊರೊನಾ ಹೆಸರಿನಲ್ಲಿ ರಾಜ್ಯ ಸರ್ಕಾರ ಹಣ ಮಾಡಿಕೊಳ್ಳಲು ಮುಂದಾಗುತ್ತಿದೆ ಎಂದು ಆರೋಪಿಸಿ ಸರ್ಕಾರದ ವಿರುದ್ಧ ಮುಗಿಬೀಳಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ.
ಈಗಾಗಲೇ ಲಾಕ್ಡೌನ್ ಮಾಡುವುದನ್ನು ಕಾಂಗ್ರೆಸ್ ನಾಯಕರು ವಿರೋಧಿಸಿದ್ದು, ಒಂದೊಮ್ಮೆ ಸರ್ಕಾರ ಇವರ ಮಾತನ್ನು ವಿಶ್ವಾಸಕ್ಕೆ ಪಡೆಯದೆ ಘೋಷಿಸಿದರೆ ಅದನ್ನೂ ಯಾವ ರೀತಿ ಖಂಡಿಸಬೇಕು ಎಂಬ ಕುರಿತು ರಾಜ್ಯ ಕಾಂಗ್ರೆಸ್ ನಾಯಕರು ಚರ್ಚಿಸಲಿದ್ದಾರೆ. ಏಪ್ರಿಲ್ 18ರಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕರೆದಿರುವ ಸರ್ವಪಕ್ಷ ಸಭೆಯಲ್ಲಿ ಚರ್ಚೆಗೆ ಬರುವ ಲಾಕ್ಡೌನ್ ಘೋಷಣೆ ವಿಚಾರವನ್ನು ವಿರೋಧಿಸಲು ಕಾಂಗ್ರೆಸ್ ತೀರ್ಮಾನಿಸಿದೆ.
ಒಟ್ಟಾರೆ ಜನ ವಿರೋಧಿ ಸರ್ಕಾರವಾಗಿದ್ದು, ಕಳೆದ ವರ್ಷ ಕೊರೊನಾ ಎದುರಾದ ಸಂದರ್ಭದಲ್ಲಿ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ. ಇದೀಗ ಎರಡನೇ ಅಲೆ ಸಂದರ್ಭದಲ್ಲಿಯೂ ಸೂಕ್ತ ಮುಂಜಾಗ್ರತೆ ಕೈಗೊಂಡಿಲ್ಲ ಎಂದು ತಮ್ಮ ಹೋರಾಟದ ಮೂಲಕ ಜನರಿಗೆ ತಿಳಿಸಲು ಕಾಂಗ್ರೆಸ್ ತೀರ್ಮಾನಿಸಿದೆ.