ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆ ಗೆಲುವನ್ನು ಮುಖ್ಯವಾಗಿರಿಸಿಕೊಂಡು ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ರಾಜ್ಯಕ್ಕೆ ಮತ್ತಿಬ್ಬರು ಕಾರ್ಯದರ್ಶಿಗಳನ್ನು ನೇಮಿಸಿ ಆದೇಶ ಹೊರಡಿಸಿದೆ.
ವರ್ಷದ ಹಿಂದೆ ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿ ರಣದೀಪ್ ಸಿಂಗ್ ಸುರ್ಜೆವಾಲಾರನ್ನ ನೇಮಿಸಿದ್ದ ಕಾಂಗ್ರೆಸ್ ಪಕ್ಷ, ಇದೀಗ ಅವರ ಕೈ ಬಲಪಡಿಸುವ ನಿಟ್ಟಿನಲ್ಲಿ ಇಬ್ಬರು ಕಾರ್ಯದರ್ಶಿಗಳನ್ನು ಹೆಚ್ಚುವರಿಯಾಗಿ ನೇಮಕ ಮಾಡಿದೆ. ಸುರ್ಜೆವಾಲಾ ಜೊತೆ ಕೈಜೋಡಿಸಿ ಇವರು ಪಕ್ಷ ಬಲವರ್ಧನೆಗೆ ಕಾರ್ಯನಿರ್ವಹಿಸಲಿದ್ದಾರೆ.
ಸಂಸದ ಕುಲದೀಪ್ ಶರ್ಮ ಹಾಗೂ ಶಾಸಕ ರಮೀಂದರ್ ಸಿಂಗ್ ಔಲಾ ಅವರನ್ನು ತಕ್ಷಣಕ್ಕೆ ಅನ್ವಯವಾಗುವಂತೆ ಎಐಸಿಸಿ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ. ಇವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣಧೀರ್ ಸಿಂಗ್ ಸುರ್ಜೇವಾಲಾ ಜೊತೆ ಕೈಜೋಡಿಸಲಿದ್ದಾರೆ.
2023ರ ವಿಧಾನಸಭೆ ಚುನಾವಣೆ ಪ್ರತಿಷ್ಠೆಯಾಗಿ ಪರಿಗಣಿಸಿರುವ ರಾಷ್ಟ್ರೀಯ ಕಾಂಗ್ರೆಸ್ ನಾಯಕರು, ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. 2008ರಿಂದ 13ರವರೆಗೆ ಆಡಳಿತ ನೀಡಿದ ಬಿಜೆಪಿ ಸರ್ಕಾರದ ವೈಫಲ್ಯವನ್ನು ಪ್ರಮುಖವಾಗಿ ತೋರಿಸಿ 2013ರ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್, ಇದೀಗ ಅದೇ ಸ್ಥಿತಿಯನ್ನು ಮತ್ತೊಮ್ಮೆ ಮರುಕಳಿಸುವ ಪ್ರಯತ್ನದಲ್ಲಿದೆ.
ರಾಜ್ಯ ಬಿಜೆಪಿ ಸರ್ಕಾರ ಉತ್ತಮ ಆಡಳಿತ ನೀಡುವಲ್ಲಿ ವಿಫಲವಾಗಿದೆ ಎಂಬುದನ್ನು ರಾಜ್ಯದ ಜನತೆ ಮುಂದೆ ಬಿಂಬಿಸುತ್ತಿದೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಕಾಂಗ್ರೆಸ್ ನಾಯಕರ ಮಾರ್ಗದರ್ಶನ ಅವಶ್ಯ ವಾಗಿರುವುದನ್ನು ಪರಿಗಣಿಸಿ ಹೊಸ ನೇಮಕ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಸುರ್ಜೇವಾಲ ಜೊತೆ ಇಬ್ಬರು ಕಾರ್ಯದರ್ಶಿಗಳು ಸಹ ರಾಜ್ಯಕ್ಕೆ ಆಗಮಿಸಿ ಇಲ್ಲಿನ ಚಟುವಟಿಕೆಗಳ ಮೇಲೆ ನಿಗಾ ವಹಿಸಲಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ಬಹುತೇಕ ಏರಿಯಾಗಳಲ್ಲಿ ಇಂದು ಕರೆಂಟ್ ಇರಲ್ಲ.. ಯಾವೆಲ್ಲ ಪ್ರದೇಶಗಳಲ್ಲಿ ವ್ಯತ್ಯಯ?