ಬೆಂಗಳೂರು : ಪಠ್ಯದಲ್ಲಿ ಎಲ್ಲ ಸರ್ಕಾರಗಳೂ ರಾಜಕೀಯ ಮಾಡಿಲ್ಲ. ಕಾಂಗ್ರೆಸ್ನಿಂದಲೇ ಪಠ್ಯ ರಾಜಕೀಯ ಶುರುವಾಗಿದ್ದು ಎಂದು ಮಾಜಿ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಆರೋಪಿಸಿದ್ದಾರೆ. ನಾವು ಪರಿಷ್ಕರಣೆ ಮಾಡಿದ್ದರಲ್ಲಿ ತಪ್ಪಿದ್ದರೆ ಮರು ಪರಿಷ್ಕರಿಸಿ ನಮ್ಮದೇನು ಅಭ್ಯಂತರ ಇಲ್ಲ. ಆದರೆ ನಮ್ಮದು ತಪ್ಪು ಎಂದು ನಿಮಗೆ ಹೇಳಿದ್ದು ಯಾರು?. ಯಾವ ವರದಿ ಬಂತು. ಯಾವ ಸಮಿತಿ ಶಿಫಾರಸು ಮಾಡಿತು ಎಂದು ಹೇಳಿ? ಎಂದು ಸರ್ಕಾರವನ್ನು ಪ್ರಶ್ನಿಸಿದರು.
ಶಾಸಕರ ಭವನದಲ್ಲಿ ಪೀಪಲ್ಸ್ ಫೋರಂ ಫಾರ್ ಕರ್ನಾಟಕ ಎಜುಕೇಶನ್ನಿಂದ ನಡೆದ ಮಾಧ್ಯಮಗೋಷ್ಟಿಯಲ್ಲಿ ರಾಜ್ಯ ಸರ್ಕಾರದ ಪಠ್ಯಪುಸ್ತಕ ಹಾಳುಗೆಡವಿದ ಕುರಿತು ಮಾಜಿ ಸಚಿವ ಬಿ ಸಿ ನಾಗೇಶ್ ಮೀಮ್ಸ್ ಬಿಡುಗಡೆ ಮಾಡಿದರು. ನಂತರ ಮಾತನಾಡಿದ ಅವರು, ಪಠ್ಯಪುಸ್ತಕ ವಿಚಾರದಲ್ಲಿ ಬಿಜೆಪಿಯವರು ರಾಜಕಾರಣ ಮಾಡಿದರು, ಕಾಂಗ್ರೆಸ್ನವರೂ ರಾಜಕೀಯ ಮಾಡುತ್ತಿದ್ದಾರೆ ಎನ್ನುವ ಭಾವನೆ ಇದೆ. ಇದಕ್ಕೆ ಸ್ಪಷ್ಟೀಕರಣ ನೀಡುತ್ತೇನೆ. ಪಠ್ಯ ಪರಿಷ್ಕರಣೆ ಸಮಿತಿಯಲ್ಲಿ 1960 ರಿಂದ 2013 ರ ವರೆಗೂ ಇಬ್ಬರೂ ರಾಜಕಾರಣಿ ಇರಲಿಲ್ಲ. ಪಠ್ಯಪುಸ್ತಕ ರಚನಾ ಸಮಿತಿಯಲ್ಲಿ ರಾಜಕಾರಣಿಗಳು ಎಂಟ್ರಿಯಾಗಿದ್ದು ಸಿದ್ದರಾಮಯ್ಯ ಸಿಎಂ ಆದಮೇಲೆ. ಬರಗೂರು ರಾಮಚಂದ್ರಪ್ಪ ಕಾಂಗ್ರೆಸ್ನಲ್ಲಿ ಎಂಎಲ್‌ಸಿ ಆಗಿದ್ದವರು. ಅವರ ನೇತೃತ್ವದಲ್ಲಿ ಸಿದ್ದರಾಮಯ್ಯ ಪಠ್ಯ ಪುಸ್ತಕ ರಚನೆ ಮಾಡಿದರು. ಸಮಿತಿಗೆ ಬರಗೂರು ಅಧ್ಯಕ್ಷ ಆದರು. ಆಗಿನಿಂದ ಪಠ್ಯದಲ್ಲಿ ರಾಜಕಾರಣ ನುಸುಳಿತು. ಪಠ್ಯದಲ್ಲಿ ಎಲ್ಲ ಸರ್ಕಾರಗಳೂ ರಾಜಕೀಯ ಮಾಡಿಲ್ಲ. ಕಾಂಗ್ರೆಸ್ನಿಂದಲೇ ಪಠ್ಯ ರಾಜಕೀಯ ಶುರುವಾಗಿದ್ದು ಎಂದು ಆರೋಪಿಸಿದರು.
ಬರಗೂರು ಸಮಿತಿ ಶಿಫಾರಸ್ಸಿಗೆ ಅವರ ಪಕ್ಷದಿಂದಲೇ ಆಕ್ಷೇಪಣೆ ಬಂದಾಗ ಎನ್ಸಿಎಫ್ಗೆ ಕಳಿಸಿತು. ಎನ್ಇಪಿ ಬರುತ್ತಿದೆ ಹಾಗಾಗಿ ಹೆಚ್ಚು ಬದಲಾವಣೆ ಬೇಡ ಎನ್ನಲಾಯಿತು. ಆದರೆ ಈಗ ಮತ್ತೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು, ಸಚಿವರು ಶಿಕ್ಷಣ ತಜ್ಞರಿಲ್ಲದೆ ಏಕಾಏಕಿ ಪಠ್ಯ ತೆಗೆದು ಬಿಸಾಕಿದ್ದೇವೆ ಎಂದರು. ಕ್ಯಾಬಿನೆಟ್ನಲ್ಲಿ ಪಠ್ಯಪುಸ್ತಕ ಕುರಿತು ನಿರ್ಧರಿಸಿದರು. ಇದರಿಂದಾಗಿ ಈ ವಿಷಯ ರಾಜಕೀಯಗೊಂಡಿತು. ಇದನ್ನು ಪೋಷಕರಿಗೆ ತಿಳಿಸುವ ಕೆಲಸ ಮಾಡಲಿದ್ದೇವೆ ಎಂದರು.
ಎಲ್ಲ ಸರ್ಕಾರಗಳು ಪಠ್ಯದಲ್ಲಿ ಹಸ್ತಕ್ಷೇಪ ಮಾಡಿಲ್ಲ. 2009ರಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದಾಗ ಸಮಿತಿ ರಚಿಸಿ ಪಠ್ಯದ ಎಲ್ಲ ತಲೆಬರಹ ಪರಿಷ್ಕರಣೆ ಮಾಡಲಾಗಿತ್ತು. ಈಗ ಎನ್ಇಪಿ ಜಾರಿಗೆ ತರಲಾಗಿದೆ. ಅನುಷ್ಠಾನ ಕಾರ್ಯವೂ ನಡೆದಿದೆ. ಈ ಹಂತದಲ್ಲಿ ಇವರು ಎಸ್ಇಪಿ ತರಲು ಹೊರಟಿದ್ದಾರೆ. ಶಿಕ್ಷಣ ಮುಂದೆ ಹೋಗಬೇಕು, ಹಿಂದೆ ಬರುವುದಲ್ಲ. ಈಗಾಗಲೇ ರಾಷ್ಟ್ರೀಯ ಪಠ್ಯ ಬಂದಾಗಿದೆ. ಈಗ ಇವರು ಮತ್ತೆ ಹಿಂದಕ್ಕೆ ಹೋಗುತ್ತಿದ್ದಾರೆ. ನಮ್ಮ ರಾಜ್ಯದ ಮಕ್ಕಳನ್ನು ಇವರು ಎಲ್ಲಿಗೆ ಕರೆದೊಯ್ಯುತ್ತಿದ್ದಾರೆ. ಎಸ್ಇಪಿ ಸರ್ಕಾರಿ ಶಾಲೆಗೆ ಮಾತ್ರ. ಡಿ ಕೆ ಶಿವಕುಮಾರ್, ಖರ್ಗೆ, ಎಂ ಬಿ ಪಾಟೀಲ್ ಸೇರಿ ಇವರೆಲ್ಲರ ಖಾಸಗಿ ಶಾಲೆಯಲ್ಲಿ ಎನ್ಇಪಿ ಶುರುವಾಗಿದೆ. ಬಡ ಮಕ್ಕಳಿಗೆ ಎಸ್ಇಪಿ ಇವರ ಶಾಲೆ ಮಕ್ಕಳಿಗೆ ಎನ್ಇಪಿ ಮಾಡಲಾಗುತ್ತದೆ. ಇದು ತಾರತಮ್ಯ ನೀತಿಯಂತಾಗಲಿದೆ. ಹಾಗಾಗಿ ಸರ್ಕಾರ ರಾಜ್ಯದ ಎಲ್ಲ ಶಾಲೆಗಳಲ್ಲಿಯೂ ಎಸ್ಇಪಿ ಕಡ್ಡಾಯ ಎನ್ನಲಿ. ಎಲ್ಲರ ಖಾಸಗಿ ಶಾಲೆಗಳಲ್ಲಿ ಎಸ್ಇಪಿ ತರಲಿ ಎಂದು ಒತ್ತಾಯಿಸಿದರು.
ಈಗ ಪಠ್ಯ ಬದಲಾವಣೆ ಮಾಡಿ, ಆ ಪಠ್ಯದ ಒಂದು ಪ್ರತಿ ಕಳಿಸಿ ಜೆರಾಕ್ಸ್ ಮಾಡಿ ಮಕ್ಕಳಿಗೆ ಹಂಚಿ ಎಂದಿದ್ದಾರೆ. ಈ ಸ್ಥಿತಿಗೆ ವ್ಯವಸ್ಥೆ ತಳ್ಳಿದ್ದಾರೆ. ಸಿಎಂ ಹೇಳಿದ್ದಾರೆ, ಹಾಗಾಗಿ ಪಠ್ಯ ಬದಲಾವಣೆ ಮಾಡುತ್ತಿದ್ದೇವೆ ಎಂದು ಸಚಿವ ಮಧು ಬಂಗಾರಪ್ಪ ಹೇಳುತ್ತಾರೆ. ಪಠ್ಯ ಪರಿಷ್ಕರಣೆ ತಜ್ಞರ ಅಭಿಪ್ರಾಯ ಅಲ್ಲ, ಸರ್ಕಾರದ ನಿರ್ಧಾರ ಎಂದು ಟೀಕಿಸಿದರು.
ರೋಹಿತ್ ಚಕ್ರತೀರ್ಥ ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿಲ್ಲ. 511 ಪಾಠದ ಟೈಟಲ್ ಯಾವ ರೀತಿ ಇರಬೇಕು ಎಂದು ನಮ್ಮ ಅವಧಿಯಲ್ಲೇ ಬದಲಾವಣೆ ಮಾಡಿದೆವು. ಶಿಕ್ಷಣ ತಜ್ಞರೇ ಶಿಫಾರಸು ಮಾಡಿದ್ದು, ರಾಜಕೀಯ ವ್ಯಕ್ತಿಗಳಿಂದ ಮಾಡಿಸಿರಲಿಲ್ಲ. ನಾವು ಮಾಡಿದ್ದರಲ್ಲಿ ತಪ್ಪಿದ್ದರೆ ಪರಿಷ್ಕರಿಸಿ ನಮ್ಮದೇನು ಅಭ್ಯಂತರ ಇಲ್ಲ. ಆದರೆ ನಮ್ಮದು ತಪ್ಪು ಎಂದು ನಿಮಗೆ ಹೇಳಿದ್ದು ಯಾರು? ಯಾವ ವರದಿ ಬಂತು, ಯಾವ ಸಮಿತಿ ಶಿಫಾರಸು ಮಾಡಿತು ಎಂದು ಹೇಳಿ? ಎಂದು ಪ್ರಶ್ನಿಸಿದರು.
ಶಾಲೆಗಳ ಸಮಯ ಬದಲಾವಣೆಗೆ ಕೋರ್ಟ್ ಸೂಚಿಸಿದೆ. ಎಲ್ಲರೊಂದಿಗೆ ಚರ್ಚೆ ನಡೆಸಿ ನಂತರ ಸಮಯ ಬದಲಾವಣೆ ಮಾಡಲಿ. ಖಾಸಗಿ ಶಾಲೆಗೆ ಒಂದು, ಸರ್ಕಾರಿ ಶಾಲೆಗೆ ಮತ್ತೊಂದು ಸಮಯ ಬದಲಾವಣೆ ಮಾಡಿದರೆ ಹೇಗೆ?. ಎಲ್ಲರಿಗೂ ಒಂದೇ ಮಾಡಬೇಕು. ಮಾಡಿದಲ್ಲಿ ತಪ್ಪೇನು ಇಲ್ಲ ಎಂದು ಹೇಳಿದರು. ಕಳೆದ ಬಾರಿಗೂ ಈ ಬಾರಿಗೂ ಸರ್ಕಾರಿ ಶಾಲೆಗಳಲ್ಲಿ 2.75 ಲಕ್ಷ ಮಕ್ಕಳ ವ್ಯತ್ಯಾಸ ಇದೆ ಯಾಕೆ?. ಅವರೆಲ್ಲಿ ಹೋದರು. ಶಾಲೆ ಬಿಟ್ಟರಾ? ಬೇರೆ ಶಾಲೆಗೆ ಸೇರಿದ್ದಾರಾ?. ಯಾವುದೇ ಮಾಹಿತಿ ಇಲ್ಲ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದು ಮಾಜಿ ಸಚಿವ ನಾಗೇಶ್ ಹೇಳಿದ್ರು.
ಇದಕ್ಕೂ ಮುನ್ನ ಮಾತನಾಡಿದ ಪೀಪಲ್ಸ್ ಫೋರಂ ಫಾರ್ ಕರ್ನಾಟಕ ಎಜುಕೇಶನ್ ಸಂಚಾಲಕ ರಾಮಚಂದ್ರ ಶೆಟ್ಟಿ,
ರಾಜ್ಯ ಸರ್ಕಾರವು ಶಾಲಾ ಪಠ್ಯ ಪುಸ್ತಕಗಳನ್ನು ಹಾಳು ಮಾಡಿದೆ. 5-6 ನೇ ತರಗತಿ ಮಕ್ಕಳಿಗೆ ಜಾತಿಯ ವಿಷ ಬೀಜ ಬಿತ್ತುವ ಪಠ್ಯ ಸೇರಿಸಲಾಗಿದೆ. ಸರ್ಕಾರ ಈ ಕೂಡಲೇ ಶಿಕ್ಷಣ ತಜ್ಞರ ಸಮಿತಿ ರಚಿಸಬೇಕು. ತಜ್ಞರು ಶಿಫಾರಸು ಮಾಡಿದ ರಚನಾತ್ಮಕ ಪಠ್ಯವನ್ನು ಶಾಲೆಗಳಲ್ಲಿ ಬೋಧಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಶಿಕ್ಷಣ ರಾಜಕೀಯದ ವಸ್ತುವಲ್ಲ. ಯಾವುದೇ ರಾಜಕೀಯ ಪಕ್ಷದ ಪ್ರಣಾಳಿಕೆಯಲ್ಲಿ ಇರುವ ವಿಷಯವೂ ಅಲ್ಲ. ಪ್ರಣಾಳಿಕೆಯಲ್ಲಿ ಪಠ್ಯಪುಸ್ತಕದ ವಿಚಾರ ತರುವುದೇ ತಪ್ಪು. ಪ್ರಣಾಳಿಕೆಯಲ್ಲಿ ತಂದ ಒಂದೇ ಕಾರಣಕ್ಕೆ ಪಠ್ಯಪುಸ್ತಕ ಬದಲಾವಣೆ ಯತ್ನ ಖಂಡನೀಯವಾಗಿದೆ. ಯಾವುದೇ ಮಗು ಯಾವ ಹಂತದಲ್ಲಿ ಎಷ್ಟು ಶಿಕ್ಷಣ ಪಡೆಯಬೇಕು ಎನ್ನುವುದು ಮುಖ್ಯ. ಹಾಗಾಗಿ ಈ ವಿಚಾರದಲ್ಲಿ ಶಿಕ್ಷಣ ತಜ್ಞರ ಅಭಿಪ್ರಾಯದ ಆಧಾರದಲ್ಲಿ ಪಠ್ಯ ಪರಿಷ್ಕರಣೆ ಆಗಬೇಕು ಎಂದರು.
ಈಗ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಪಠ್ಯ ಬದಲಾವಣೆ ಮಾಡಲು ಹೊರಟಿರುವುದನ್ನು ನೋಡಿದರೆ ತುಘಲಕ್ ಆಡಳಿತದ ನೆನಪಾಗುತ್ತಿದೆ. ಜೆನೆಟಿಕ್ ಆಧಾರದ ಮೇಲೆ ಆರ್ಯರ ವಲಸೆ ಸಿದ್ಧಾಂತವನ್ನು ಜಗತ್ತಿನ ಎಲ್ಲ ಶಿಕ್ಷಣ ತಜ್ಞರು ತಿರಸ್ಕರಿಸಿದ್ದಾರೆ. ಆದರೆ ಅದನ್ನು ಈಗ ನಮ್ಮ ಪಠ್ಯದಲ್ಲಿ ಸೇರಿಸುತ್ತಿದ್ದಾರೆ. ಆಫ್ಘಾನಿಸ್ತಾನದಲ್ಲಿ ಸರಸ್ವತಿ ನದಿ ಹರಿಯುತ್ತಿದೆ ಎಂದು ಪಠ್ಯದಲ್ಲಿ ತೂರಿಸುತ್ತಿದ್ದಾರೆ. ಐದು ಆರನೇ ತರಗತಿಯ ಮಕ್ಕಳಲ್ಲಿ ಜಾತಿ ಧರ್ಮದ ವಿಷಬೀಜ ಬೆಳೆಸುವ ಹುನ್ನಾರ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಅವೈಜ್ಞಾನಿಕ ತಿದ್ದುಪಡಿ, ವಿಭಜನೆಯ ವಿಷಬೀಜ ಬಿತ್ತುವ ಪಠ್ಯಕ್ರಮ ಹಿಂಪಡೆಯುವಂತೆ ಆಗ್ರಹಿಸಿ ಆ ಪ್ರಯತ್ನದ ಮೊದಲ ಹಂತವಾಗಿ ನೂರಾರು ಸಭೆ ನಡೆಸಿ, ಈಗ ಪಠ್ಯದಲ್ಲಿನ ವೈರುಧ್ಯಗಳನ್ನು ಮೀಮ್ಸ್ ಮೂಲಕ ಬಿಡುಗಡೆ ಮಾಡುತ್ತಿದ್ದೇವೆ.
ಮೀಮ್ಸ್ ಬಿಡುಗಡೆ ಮಾಡಿ ಜನರ ಬಳಿ ಹೋಗುತ್ತಿದ್ದೇವೆ. ಪೋಷಕರಲ್ಲಿ ಜಾಗೃತಿ ಮೂಡಿಸಲಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ : Textbook Revision: ಪಠ್ಯಪುಸ್ತಕ ತಿದ್ದುಪಡಿಗೊಳಿಸಿ ಸರ್ಕಾರದ ಆದೇಶ: ಹೆಡ್ಗೇವಾರ್ ಗದ್ಯಕ್ಕೆ ಕೊಕ್, ಹಲವು ಪಾಠಗಳಿಗೆ ಕತ್ತರಿ