ಬೆಂಗಳೂರು : ದೇಶಕ್ಕೆ ಸಾಕಷ್ಟು ಉತ್ತಮ ಕಾರ್ಯಕ್ರಮ ನೀಡಿದ ಕಾಂಗ್ರೆಸ್ ಪಕ್ಷ ಹಾಗೂ ನಾಯಕರ ವಿರುದ್ಧ ಇಂದು ಪ್ರಧಾನಿ ನರೇಂದ್ರ ಮೋದಿ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಚಿವ ಎಂ.ಬಿ. ಪಾಟೀಲ್ ಬೇಸರ ವ್ಯಕ್ತಪಡಿಸಿದ್ದಾರೆ. ಇಂದು ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಅವರು ಮಾತನಾಡಿದರು.
ಹಲವು ಕಾರ್ಯಕ್ರಮ ನೀಡಿದ್ದು ಕಾಂಗ್ರೆಸ್. 20 ಅಂಶಗಳ ಕಾರ್ಯಕ್ರಮ ತಂದಿದ್ದು ಕಾಂಗ್ರೆಸ್. ಮಾಸಾಶನ, ಅಂಗವಿಕಲರ ಮಾಸಾಶನ ಮಾಡಿದ್ದು ಕಾಂಗ್ರೆಸ್. ದೊಡ್ಡ ದೊಡ್ಡ ಉದ್ಯಮ ಪ್ರಾರಂಭ ಮಾಡಿದ್ದು ನೆಹರು. ರಾಜ್ಯದಲ್ಲಿ ಬಿಎಂಎಲ್, ಹೆಚ್ಎಎಲ್ ತರಲಾಯಿತು. ಹಸಿರು ಕ್ರಾಂತಿ ಮೂಲಕ ಆಹಾರ ಸ್ವಾವಲಂಬನೆ ತಂದಿದ್ದೇ ನಾವು. ಇವತ್ತು ಬಿಜೆಪಿಯವರು ಹಾಗು ಪ್ರಧಾನಿಯವರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಎಂ.ಬಿ. ಪಾಟೀಲ್ ಹೇಳಿದರು.
2014 ರಲ್ಲಿ ಪ್ರಧಾನಿ ಏನು ಮಾತು ಕೊಟ್ಟಿದ್ರು? ಪ್ರಣಾಳಿಕೆ ಅಂದ್ರೆ ಭಗವದ್ಗೀತೆ ಅಂದಂತೆ ಅಂತಾರೆ. 15 ಲಕ್ಷ ಎಲ್ಲರ ಅಕೌಂಟಿಗೆ ಹಾಕುತ್ತೇವೆ ಎಂದರು. ವಿದೇಶದಲ್ಲಿರುವ ಕಾಳಧನ ತಂದು ಹಾಕುತ್ತೇವೆ ಎಂದರು. 2 ಕೋಟಿ ಉದ್ಯೋಗ ಪ್ರತಿ ವರ್ಷ ಸೃಷ್ಟಿ ಅಂದರು. 9 ವರ್ಷದಲ್ಲಿ 18 ಕೋಟಿ ಆಗಬೇಕಿತ್ತು. ಆದರೆ ಉದ್ಯೋಗ ಸೃಷ್ಟಿ ಮಾಡಲಿಲ್ಲ. ನಮ್ಮ ಬಗ್ಗೆ ಇವರು ಅಪಪ್ರಚಾರ ಮಾಡುತ್ತಾರೆ ಎಂದು ಬಿಜೆಪಿ ವಿರುದ್ಧ ಎಂ.ಬಿ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಸರ್ಕಾರದಲ್ಲಿ ಪರಮೇಶ್ವರ್ ಪ್ರಣಾಳಿಕೆಯಲ್ಲಿ ಹೇಳಿದ್ದೆಲ್ಲ ನಾವು ಈಡೇರಿಸಿದ್ದೇವೆ. ಇವತ್ತು ಬಿಜೆಪಿಯವರು ರಾಜ್ಯದ ಮರ್ಯಾದೆ ಹಾಳು ಮಾಡಿದ್ದಾರೆ. ಡಬಲ್ ಎಂಜಿನ್ ಅಂತ ಹೇಳುತ್ತಾರೆ. ಇವರ ಎರಡು ಎಂಜಿನ್ ಹಾಳಾಗಿಹೋಗಿವೆ. ರಿಪೇರಿ ಮಾಡಲಾರದಷ್ಟು ಗುಜರಿಯಾಗಿವೆ. ಸಮ್ಮಿಶ್ರ ಸರ್ಕಾರವನ್ನು ನಾವು ರಚಿಸಿದ್ದೆವು. ಇವರು ಒಬ್ಬೊಬ್ಬರಿಗೆ 80-100 ಕೋಟಿ ಖರ್ಚು ಮಾಡಿ ಅನೈತಿಕ ಮಾರ್ಗವಾಗಿ ಸರ್ಕಾರ ರಚನೆ ಮಾಡಿದರು ಎಂದು ಎಂ.ಬಿ ಪಾಟೀಲ್ ಕಿಡಿಕಾರಿದರು.
ಇವತ್ತು ಬಿಜೆಪಿ ಯಡಿಯೂರಪ್ಪನವರನ್ನು ತೆಗೆದು ಹಾಕಿದೆ. ವಿರೇಂದ್ರ ಪಾಟೀಲರಿಗೆ ಕಾಂಗ್ರೆಸ್ ಅನ್ಯಾಯ ಮಾಡಿದೆ ಅಂತಾರೆ. ಅಂದು ವಿರೇಂದ್ರ ಪಾಟೀಲರು ಅನಾರೋಗ್ಯಕ್ಕೊಳಗಾಗಿದ್ದರು. ಹಾಗಾಗಿ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲಾಯಿತು. ಬಳಿಕ ಬಂಗಾರಪ್ಪನವರನ್ನು ಸಿಎಂ ಮಾಡಲಾಯಿತು. ಅದನ್ನೇ ದೊಡ್ಡದಾಗಿ ಅಪಪ್ರಚಾರ ಮಾಡಿದರು. ವಿರೇಂದ್ರ ಪಾಟೀಲರು ಇಂದಿರಾ ವಿರುದ್ಧ ಸೋತರು. ಆಗಲೂ ನಾವು ಅವರನ್ನು ಕೇಂದ್ರ ಸಚಿವರನ್ನಾಗಿ ಮಾಡಿದ್ವಿ. ಜತ್ತಿ, ಶಿವರಾಜ್ ಪಾಟೀಲರಿಗೆ ಸ್ಥಾನಮಾನ ಕೊಟ್ಟಿದ್ದೆವು ಎಂದು ಎಂ.ಬಿ ಪಾಟೀಲ್ ಸಮರ್ಥಿಸಿಕೊಂಡರು.
ರೈತರ ಆದಾಯ ಡಬಲ್ ಮಾಡುತ್ತೇವೆ ಅಂದರು. ರಸಗೊಬ್ಬರ, ಕೀಟನಾಶಕ ಬೆಲೆ ಹೆಚ್ಚಾಗಿದೆ. ರೈತರ ಬೆಳೆಗೆ ಮಾತ್ರ ಬೆಲೆ ಹಾಗು ಕಬ್ಬಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಈರುಳ್ಳಿ ರಫ್ತು ಬ್ಯಾನ್ ಮಾಡಲಾಗಿದೆ. ಅಕ್ಕಪಕ್ಕದ ಭೂತಾನ್, ನೇಪಾಳಗೆ ಈರುಳ್ಳಿ ರಫ್ತು ಮಾಡುತ್ತಿದ್ದೆ. ಇದೀಗ ರಫ್ತು ಮಾಡುವುದನ್ನು ನಿಷೇಧ ಮಾಡಿದ್ದರಿಂದ ಈರುಳ್ಳಿ ಬೆಲೆ ಕುಸಿದಿದೆ. ರೈತರಿಗೆ ಬಹಳ ದೊಡ್ಡ ಪೆಟ್ಟುಬಿದ್ದಿದೆ. ಸಿಲಿಂಡರ್ ಬೆಲೆ 400 ಇದ್ದದ್ದು 1200 ತಲುಪಿದೆ. ಪೆಟ್ರೋಲ್, ಡೀಸೆಲ್, ಸೀಮೆಂಟ್, ಬೇಳೆ ಕಾಳು ಬೆಲೆ ಹೆಚ್ಚಾಗಿದೆ. ಇದರ ನಡುವೆ ನಿರುದ್ಯೋಗ ಬೇರೆ. ಇದು ನರೇಂದ್ರ ಮೋದಿಯವರ ಅಚ್ಛೇದಿನ್ ಕೊಡುಗೆ ಎಂದು ಪ್ರಧಾನಿ ವಿರುದ್ಧವೂ ಎಂಬಿಪಿ ವಾಗ್ದಾಳಿ ನಡೆಸಿದರು.
ಜಗದೀಶ್ ಶೆಟ್ಟರ್ ಗೆ ಇನ್ನೂ 66 ವರ್ಷವಾಗಿದ್ದು, 75ರ ವಯಸ್ಸಿನ ತಿಪ್ಪಾರೆಡ್ಡಿಗೆ ಟಿಕೆಟ್ ಕೊಟ್ಟಿದ್ದಾರೆ. ಸುರೇಶ್ ಕುಮಾರ್ ಗೆ ಟಿಕೆಟ್ ಕೊಟ್ಟಿದ್ದಾರೆ. ಯಾಕೆ ಶೆಟ್ಟರ್, ಸವದಿಗೆ ಟಿಕೆಟ್ ತಪ್ಪಿಸಿದ್ದು? ಶೆಟ್ಟರ್ ಸಿಎಂ ಆಗಿದ್ದಂತವರು. ಬೊಮ್ಮಾಯಿ ಸರ್ಕಾರದಲ್ಲಿ ಶೆಟ್ಟರ್ ಸಚಿವರಾಗಲಿಲ್ಲ. ಸಚಿವ ಸ್ಥಾನವನ್ನು ಅವರು ತ್ಯಾಗ ಮಾಡಿದರು. ಲಿಂಗಾಯತ ಸಮುದಾಯಕ್ಕೆ ಎಲ್ಲವೂ ಅರ್ಥವಾಗಿದೆ. ಬಿಜೆಪಿ ಹಿಡನ್ ಅಜೆಂಡಾ ಗೊತ್ತಾಗಿದೆ. ಲಿಂಗಾಯತರ ವಿಚಾರದಲ್ಲಿ ಗಾಬರಿಗೊಂಡಿದ್ದಾರೆ. 40% ಭ್ರಷ್ಟಾಚಾರದಲ್ಲೂ ಆತಂಕಗೊಂಡಿದ್ದಾರೆ. ಅದಕ್ಕೆ ಮೋದಿ, ಅಮಿತ್ ಶಾ ಪರ್ಮನೆಂಟ್ ಮಾಡಿ ಅವರನ್ನೇ ಸಿಎಂ ಮಾಡೋ ಮಟ್ಟಕ್ಕೆ ಇಲ್ಲಿ ಠಿಕಾಣಿ ಹೂಡಿದ್ದಾರೆ ಎಂದು ಎಂ.ಬಿ ಪಾಟೀಲ್ ವ್ಯಂಗ್ಯವಾಡಿದರು.
ಇವತ್ತು ಯಡಿಯೂರಪ್ಪನವರನ್ನೇ ಚುನಾವಣೆ ಪ್ರಚಾರಕ್ಕೆ ಮುಂದೆ ಬಿಟ್ಟು ಅವರ ಮೂಲಕ ಮಾತನಾಡಿಸುತ್ತಿದ್ದಾರೆ. ಯಡಿಯೂರಪ್ಪನವರು ಎಲ್ಲಿಗೆ ಚೂರಿ ಹಾಕಿದರು. ಕೆಜೆಪಿ ಕಟ್ಟಿದಾಗ ಬೆನ್ನಿಗೆ ಹಾಕಿದ್ರಾ, ಎದೆಗೆ ಹಾಕಿದ್ರಾ? 2013 ರಲ್ಲಿ ಬಿಎಸ್ ವೈ, ಶೋಭಾ ದೆಹಲಿಯ ಲೀಲಾ ಪ್ಯಾಲೇಸ್ ಹೋಟೆಲ್ನಲ್ಲಿ ಎರಡು ಬಾರಿ ನೀವು ಯಾರನ್ನ ಭೇಟಿ ಮಾಡಿದ್ರಿ? ಅವರ ಜೊತೆ ಏನು ಮಾತುಕತೆ ಆಯ್ತು. ನಮ್ಮ ಬಳಿ ಎಲ್ಲ ಮಾಹಿತಿ ಇದೆ. ನಾಲ್ಕೈದು ದಿನ ಬಿಟ್ಟು ಎಲ್ಲ ಹೇಳುತ್ತೇವೆ ಎಂದು ಹೊಸ ಬಾಂಬ್ವೊಂದನ್ನು ಎಂ.ಬಿ ಪಾಟೀಲ್ ಸಿಡಿಸಿದರು.
ಹಬ್ಬಗಳಿಗೆ ಬಿಜೆಪಿ ಉಚಿತ ಸಿಲಿಂಡರ್ ವಿತರಣೆ ವಿಚಾರ ಮಾತನಾಡಿ, ಕಾಂಗ್ರೆಸ್ ಉಚಿತ ಘೋಷಣೆ ಯಾಕೆ ಟೀಕೆ ಮಾಡ್ತೀರಾ? ಕಾಂಗ್ರೆಸ್ ಗ್ಯಾರಂಟಿ ಟೀಕೆ ಮಾಡ್ತೀರಾ? ನಾವು ಕೊಟ್ಟರೆ ತಪ್ಪು, ನೀವು ಕೊಟ್ಟರೆ ಸರಿನಾ? ಬಿಜೆಪಿ ಪ್ರಣಾಳಿಕೆಯಲ್ಲಿ ಉಚಿತ ಘೋಷಣೆ ಹಿನ್ನೆಲೆ ಬಿಜೆಪಿ ಡಬಲ್ ಸ್ಟ್ಯಾಂಡ್ ಬಯಲಾಗಿದೆ ಎಂದರು.
ಚುನಾವಣಾ ನಿರ್ಣಾಯಕ ಹಂತಕ್ಕೆ ಬಂದಿದ್ದು, ಕಾಂಗ್ರೆಸ್ ಸಾಕಷ್ಟು ಸಂಘಟನೆ ಮಾಡಿದೆ. ಕೇಂದ್ರ ನಾಯಕರು ಬಂದು ಪ್ರಚಾರ ಮಾಡುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ವ್ಯಾಪಕವಾಗಿ ಪ್ರಚಾರ ಮಾಡಿದ್ದಾರೆ. ನಮ್ಮ ಪ್ರಚಾರ, ಕಾರ್ಯಕ್ರಮಗಳಿಗೆ ಜನರ ಬೆಂಬಲ ಸಿಕ್ಕಿದೆ. ನಮ್ಮ ಕಾರ್ಯಕ್ರಮಕ್ಕೆ ಜನರು ಸೇರುತ್ತಿದ್ದಾರೆ. ದೇಶವನ್ನು ಕಟ್ಟುವಲ್ಲಿ ಮಹತ್ವದ ಪಾತ್ರವಹಿಸಿದ್ದೇವೆ. ಆಗ ಬಿಜೆಪಿ ಭಾಗಿಯಾಗಿರಲಿಲ್ಲ. ರಾಷ್ಟ್ರೀಯತೆ ಬಗ್ಗೆ ಬಿಜೆಪಿ ನಮಗೆ ಪಾಠ ಮಾಡುತ್ತಿದೆ. ಕಾಂಗ್ರೆಸ್ ಅವಧಿಯಲ್ಲಿ ದೇಶದ ಡ್ಯಾಮ್ ಗಳು ನಿರ್ಮಾಣ ಆಗಿವೆ. 90% ಡ್ಯಾಮ್ ಕಟ್ಟಿದ್ದು ಕಾಂಗ್ರೆಸ್. ರಾಜ್ಯದಲ್ಲಿ ಮಹಾರಾಜರ ಕೊಡುಗೆ ಆಗಿದೆ. ರಾಷ್ಟ್ರೀಯ ಮಟ್ಟದಲ್ಲಿ ಆರೋಗ್ಯದ ಸುಧಾರಣೆ ಆಗಿದೆ ಎಂದರು.
ಲಿಂಗಾಯತ ನಾಯಕರ ಮುಗಿಸಲು ಲಿಂಗಾಯತರನ್ನೆ ಬಳಸುತ್ತಿದ್ದಾರೆ. ಜೋಶಿ ಮತ್ತು ಸಂತೋಷ ಯಾಕೆ ಬಿಟ್ಟಿಲ್ಲ? ಲಿಂಗಾಯತರ ನಡುವೆ ಒಡಕು ಮೂಡಿಸಿದ್ದಾರೆ. ಯಡಿಯೂರಪ್ಪ ಮಗನ ಭವಿಷ್ಯಕ್ಕಾಗಿ ಪ್ರಚಾರ ಮಾಡುತ್ತಿದ್ದಾರೆ. ಯಡಿಯೂರಪ್ಪ ಕೂಡ ಕೆಜೆಪಿ ಕಟ್ಟಿದರು. ಆಗಲು ಬಲಿ ಆದರೂ, ಈಗ ಬಿಜೆಪಿ ಸರ್ಕಾರ ತಂದು ಬಲಿ ಆಗಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ : ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಕಿಚ್ಚ ಸುದೀಪ್ ಭರ್ಜರಿ ರೋಡ್ ಶೋ