ಬೆಂಗಳೂರು: ಲಾಕ್ಡೌನ್ ಒಂದೂವರೆ ತಿಂಗಳ ನಂತರ ಇಂದಿನಿಂದ ಇನ್ನಷ್ಟು ನಿರಾಳವಾಗಿದೆ. ಆದರೆ ಕಾಂಗ್ರೆಸ್ ನಾಯಕರು ತಡವಾಗಿ ಆರಂಭಿಸಿದ ಆಹಾರ ಕಿಟ್ ವಿತರಣೆ ಮಾತ್ರ ಈಗಲೂ ಮುಂದುವರಿದಿದೆ.
ಲಾಕ್ಡೌನ್ ಘೋಷಣೆಯಾದ ಮೊದಲ ಒಂದು ತಿಂಗಳು ಕೇವಲ ಆರೋಗ್ಯ ಕಾಳಜಿಯತ್ತ ಮಾತ್ರ ಗಮನ ಹರಿಸಿದ್ದ ಕಾಂಗ್ರೆಸ್ ರಾಜ್ಯ ನಾಯಕರಿಗೆ ಹೈಕಮಾಂಡ್ನಿಂದ ಆಹಾರದ ಕಿಟ್ ಕೂಡ ವಿತರಿಸುವಂತೆ ಸೂಚನೆ ಬಂತು. ಕೂಡಲೇ ಆರೋಗ್ಯದತ್ತ ಹರಿಸಿದ್ದ ಕಾಳಜಿಯನ್ನು ನಿಲ್ಲಿಸಿದ ರಾಜ್ಯ ನಾಯಕರು ಆಹಾರದ ಕಿಟ್ ವಿತರಣೆಗೆ ಮುಂದಾದರು. ನಿಧಾನವಾಗಿ ಆ್ಯಂಬು ಲೆನ್ಸ್ ಸೇವೆ, ಉಚಿತವಾಗಿ ಆರೋಗ್ಯ ಕಿಟ್ ವಿತರಿಸುವ ಕಾರ್ಯ ತೆರೆಮರೆಗೆ ಸರಿಯಿತು.
ಇಂದಿಗೂ ನಗರದ ಹಾಗೂ ರಾಜ್ಯದ ವಿವಿಧ ಕಡೆ ಕಾಂಗ್ರೆಸ್ ಆರೋಗ್ಯ ರಕ್ಷಕ ಆ್ಯಂಬುಲೆನ್ಸ್ಗಳು ಚಾಲಕರಿಲ್ಲದೇ ಅಲ್ಲಲ್ಲಿ ನಿಂತಿದ್ದು ಗೋಚರಿಸುತ್ತಿದೆ. ಪಕ್ಷದ ಹೈಕಮಾಂಡ್ ಸೂಚನೆ ಮೇರೆಗೆ ಸ್ಥಳೀಯ ಕಾಂಗ್ರೆಸ್ ನಾಯಕರು ತಮ್ಮ ವ್ಯಾಪ್ತಿಯಲ್ಲಿ ಬಡವರಿಗೆ ಆಹಾರದ ಕಿಟ್ ನೀಡುತ್ತಿದ್ದಾರೆ.
ಅದನ್ನು ರಾಜ್ಯ ನಾಯಕರು ತೆರಳಿ ವಿತರಿಸುತ್ತಿದ್ದಾರೆ. ಕಳೆದ 15 ದಿನಗಳಿಂದ ಈ ಕಾರ್ಯ ನಡೆಯುತ್ತಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಗರ ಹಾಗೂ ರಾಜ್ಯದ ವಿವಿಧ ಭಾಗಗಳಿಗೆ ತೆರಳಿ ಸ್ಥಳೀಯ ಮುಖಂಡರು ಸಿದ್ಧಪಡಿಸಿರುವ ಆಹಾರದ ಕಿಟ್ ಅನ್ನು ಬಡವರಿಗೆ ನೀಡಿ ಬರುವ ಕಾರ್ಯ ಮಾಡುತ್ತಿದ್ದಾರೆ.
ಒಂದೆಡೆ ಸರ್ಕಾರ ಕಳೆದ ವಾರದಿಂದಲೇ ಲಾಕ್ಡೌನ್ನಲ್ಲಿ ಒಂದಿಷ್ಟು ನಿರಾಳತೆ ಘೋಷಿಸುತ್ತಾ ಬಂದಿದೆ. ಇದೀಗ ಅರ್ಧ ಕರ್ನಾಟಕ ಸಂಪೂರ್ಣ ಲಾಕ್ಡೌನ್ ಮುಕ್ತವಾಗಿದೆ. ಜನ ನಿಧಾನವಾಗಿ ಆಚೆ ಬಂದು ತಮ್ಮ ದೈನಂದಿನ ವೃತ್ತಿ ಬದುಕಿನಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಆದರೆ, ತಡವಾಗಿ ಕಾಂಗ್ರೆಸ್ ನಾಯಕರು ಆರಂಭಿಸಿದ ಆಹಾರದ ಕಿಟ್ ವಿತರಣೆ ಈಗಲೂ ಮುಂದುವರಿದಿದೆ.
ಸ್ಥಳೀಯವಾಗಿ ನಾಯಕರು ತಮ್ಮದೆ ಹಣ ಹೊಂದಿಸಿ ಈ ಕಿಟ್ ವಿತರಣೆ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದು, ಕೆಲವರಿಗೆ ತ್ವರಿತವಾಗಿ ವ್ಯವಸ್ಥೆ ಮಾಡಿಕೊಳ್ಳಲಾಗದ ಕಾರಣ ನಿಧಾನವಾಗಿದೆ. ಸಿದ್ಧತೆ ಮಾಡಿಕೊಂಡ ಹಿನ್ನೆಲೆ ರಾಜ್ಯ ನಾಯಕರು ತೆರಳಿ ಆಹಾರ ಕಿಟ್ ವಿತರಿಸಿ ಬರುವ ಕಾರ್ಯ ಮಾಡುತ್ತಿದ್ದಾರೆ.
ಇಂದು ಪ್ರವಾಸ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇಂದು ಕೊಪ್ಪಳ ಜಿಲ್ಲೆಗೆ ಪ್ರವಾಸ ಕೈಗೊಂಡಿದ್ದಾರೆ. ಕೊಪ್ಪಳದ ಯಲಬುರ್ಗಾ ಮಾಜಿ ಶಾಸಕ ಹಾಗೂ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಹಮ್ಮಿಕೊಂಡಿರುವ ಆಹಾರ ಕಿಟ್ ವಿತರಣಾ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ.
ನಿನ್ನೆ ಮೊನ್ನೆಯವರೆಗೂ ಸಾಕಷ್ಟು ಕಡೆ ಆಹಾರ ಕಿಟ್ ವಿತರಣೆ ನಡೆದಿದೆ. ಮುಂದೆಯೂ ಕೆಲ ದಿನ ನಡೆಯಲಿದೆ ಎಂಬ ಮಾತಿದೆ. ಆದರೆ, ಲಾಕ್ಡೌನ್ ತೆರವಿನ ನಂತರವೂ ಸಾಕಷ್ಟು ಕಡೆ ಆಹಾರ ಕಿಟ್ ವಿತರಣೆ ನಡೆಯಲಿದೆ. ರಾಜ್ಯ ಸರ್ಕಾರದ ವಿರುದ್ಧ ಹೋರಾಟ, ವಾಗ್ದಾಳಿ ನಡೆಸಲು ಇನ್ನೊಂದು ವೇದಿಕೆ ಲಭಿಸುವವರೆಗೂ ಕಾಂಗ್ರೆಸ್ ನಾಯಕರು ಈ ಮಾದರಿಯ ವೇದಿಕೆಗೆ ಅನಿವಾರ್ಯವಾಗಿ ಪ್ರೋತ್ಸಾಹ ನೀಡುತ್ತಲೇ ಇರಬೇಕಾಗಿದೆ.
ಸದ್ಯಕ್ಕೆ ಯಾವುದೇ ರಾಜಕೀಯ ಸಭೆ, ಸಮಾರಂಭಗಳಿಗೆ ಅವಕಾಶ ಸಿಗುತ್ತಿಲ್ಲ. ಜನಸೇವೆ ಎಂಬ ಹೆಸರಲ್ಲಿ ಈ ವೇದಿಕೆ ಮೂಲಕ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಬಹುದಲ್ಲಾ ಎನ್ನುವುದು ಕಾಂಗ್ರೆಸ್ ನಾಯಕರ ಅಭಿಲಾಷೆಯಾಗಿದೆ.