ಬೆಂಗಳೂರು : ಮುಂದಿನ ಸಿಎಂ ಯಾರು ಎಂಬುವುದರ ಬಗ್ಗೆ ಚರ್ಚೆ ಮಾಡಬೇಡಿ ಎಂದು ಕಾಂಗ್ರೆಸ್ ಶಿಸ್ತು ಪಾಲನಾ ಸಮಿತಿ ಆದೇಶಿಸಿದೆ.
ಕಾಂಗ್ರೆಸ್ ಪಕ್ಷದಲ್ಲಿ ಬಹುದಿನಗಳಿಂದ ಸಾಕಷ್ಟು ಚರ್ಚೆಯಲ್ಲಿದ್ದ ಮುಂದಿನ ಸಿಎಂ ಯಾರು ಎಂಬ ಚರ್ಚೆಗೆ ಕಡಿವಾಣ ಹಾಕಲು ಪಕ್ಷದ ಶಿಸ್ತು ಪಾಲನಾ ಸಮಿತಿ ನಿರ್ಧಾರ ಕೈಗೊಂಡಿದ್ದು, ಮುಂಬರುವ ದಿನಗಳಲ್ಲಿ ಈ ಸಂಬಂಧ ಯಾವುದೇ ಚರ್ಚೆ ನಡೆಸಬೇಡಿ ಎಂದು ತಾಕೀತು ಮಾಡಿದೆ. ಈ ಹಿನ್ನೆಲೆ, ಮುಂದಿನ ಸಿಎಂ ಸಿದ್ದರಾಮಯ್ಯ, ಮುಂದಿನ ಸಿಎಂ ಡಿ.ಕೆ ಶಿವಕುಮಾರ್ ಎಂಬ ಅವರ ಅಭಿಮಾನಿಗಳ ಕೂಗಿಗೆ ಕಡಿವಾಣ ಬೀಳುವ ಸಾಧ್ಯತೆಯಿದೆ.
![Congress Disciplinary Committee Press realeas](https://etvbharatimages.akamaized.net/etvbharat/prod-images/9477204_hrs.jpg)
ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಎಂದು ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಶಾಸಕಿ ಸೌಮ್ಯ ರೆಡ್ಡಿ ಹಾಗೂ ಇತ್ತೀಚೆಗೆ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿರುವ ಹನುಮಂತರಾಯಪ್ಪ ಅವರು, ಡಿ.ಕೆ ಶಿವಕುಮಾರ್ ಅವರೇ ಮುಂದಿನ ಸಿಎಂ ಎಂದು ಹೇಳಿಕೆ ನೀಡಿದ್ದರು. ಇದರಿಂದ ಸಾಕಷ್ಟು ಗೊಂದಲ ನಿರ್ಮಾಣವಾದ ಹಿನ್ನೆಲೆ, ಹೇಳಿಕೆ-ಪ್ರತಿ ಹೇಳಿಕೆ ನೀಡದಂತೆ ನಾಯಕರೇ ತಾಕೀತು ಮಾಡಿದ್ದರು. ಪಕ್ಷದ ಹಲವು ನಾಯಕರು ಇಂತಹ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿ ಶಿಸ್ತು ಪಾಲನಾ ಸಮಿತಿ ಇದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಈ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದ ಸಮಿತಿ, ಮೂವರು ನಾಯಕರಿಗೆ ನೋಟಿಸ್ ನೀಡಲು ಮುಂದಾಗಿತ್ತು.
ನವೆಂಬರ್ 5 ರಂದು ನಡೆದ ಕೆಪಿಸಿಸಿ ಶಿಸ್ತು ಸಮಿತಿಯ ಸಭೆಯಲ್ಲಿ ನಡೆದ ಚರ್ಚೆಯ ಮೂಲಕ ಶಾಸಕಾಂಗ ಪಕ್ಷದ ನಾಯಕತ್ವದ ಭವಿಷ್ಯದ ಕುರಿತು ಪಕ್ಷದ ನಾಯಕರು ಭಿನ್ನ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿದ್ದಾರೆ. ಕೆಪಿಸಿಸಿ ಶಿಸ್ತು ಪಾಲನಾ ಸಮಿತಿಯು ನಾಯಕತ್ವದ ಕುರಿತ ಪ್ರಶ್ನೆಯನ್ನು ಸಮಯ ಬಂದಾಗ ಪರಿಗಣಿಸುವುದು ಸೂಕ್ತವೆಂದು, ಪಕ್ಷದ ಏಕತೆಯ ದೃಷ್ಟಿಯಿಂದ ಎಲ್ಲಾ ಚುನಾಯಿತ ಪ್ರತಿನಿಧಿಗಳು, ನಾಯಕರು, ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಇದರ ಬಗ್ಗೆ ಹೇಳಿಕೆ ನೀಡುವುದರಿಂದ ದೂರವಿರಬೇಕೆಂದು ವಿನಂತಿಸಿಕೊಂಡಿದೆ.
ಸದ್ಯ ಯಾವುದೇ ಮುಖಂಡರ ಮೇಲೆ ಶಿಸ್ತು ಕ್ರಮ ಕೈಗೊಳ್ಳದಿರಲು ಮತ್ತು ನೋಟಿಸ್ ಜಾರಿಗೊಳಿಸಲು ಕಾಂಗ್ರೆಸ್ ಪಕ್ಷದ ಶಿಸ್ತು ಸಮಿತಿ ತೀರ್ಮಾನ ಕೈಗೊಂಡಿಲ್ಲ. ನಾಯಕರು ಮತ್ತು ಕಾರ್ಯಕರ್ತರ ರಾಜ್ಯದ ಹಿತದೃಷ್ಟಿಯಿಂದ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪಕ್ಷ ಕಟ್ಟುವ ಕೆಲಸ ಮಾಡುವುದು ಸೂಕ್ತವೆಂದು ಶಿಸ್ತು ಸಮಿತಿಯು ಅಭಿಪ್ರಾಯಪಟ್ಟಿದೆ ಎಂದು ಸಮಿತಿಯ ಅಧ್ಯಕ್ಷರಾದ ಮಾಜಿ ರಾಜ್ಯಸಭೆ ಸದಸ್ಯ ಕೆ. ರೆಹಮಾನ್ ಖಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.