ಬೆಂಗಳೂರು : ರಾಜ್ಯ ಕಾಂಗ್ರೆಸ್ ಪಕ್ಷದ ಬೆಂಗಳೂರು ವಿಭಾಗದ ಸಂಕಲ್ಪ ಸಮಾವೇಶಕ್ಕೆ ಚಾಲನೆ ನೀಡಲಾಯಿತು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವೈಫಲ್ಯವನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಹಾಗೂ ಪಕ್ಷದ ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡುವ ಸಲುವಾಗಿ ಸಂಕಲ್ಪ ಸಮಾವೇಶ ಆಯೋಜಿಸಲಾಗಿದ್ದು, ಬೆಂಗಳೂರಿನ ಮೈಸೂರು ರಸ್ತೆಯ ಪೂರ್ಣಿಮಾ ಪ್ಯಾಲೇಸ್ನಲ್ಲಿ ಚಾಲನೆ ಪಡೆದಿದೆ.
ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್ ಆರ್ ಪಾಟೀಲ್, ಮಾಜಿ ಡಿಸಿಎಂ ಡಾ. ಜಿ ಪರಮೇಶ್ವರ್, ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸಲೀಂ ಅಹ್ಮದ್, ಮಾಜಿ ಸಚಿವರು, ಸಂಸದರು, ಮಾಜಿ ಸಂಸದರು, ಶಾಸಕರು, ಮಾಜಿ ಶಾಸಕರು ಪಾಲ್ಗೊಂಡಿದ್ದರು.
ಇದನ್ನು ಓದಿ: ಕೊಡವರು ಗೋಮಾಂಸ ತಿನ್ನುತ್ತಾರೆಂದಿದ್ದ ಸಿದ್ದರಾಮಯ್ಯ ವಿರುದ್ಧ ಎಫ್ಐಆರ್
ಉದ್ಘಾಟನಾ ಭಾಷಣ ಮಾಡಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, "ಇದು ಕಾಂಗ್ರೆಸ್ ಪಕ್ಷದ ಪಾಲಿಗೆ ಹೋರಾಟದ ವರ್ಷವಾಗಿದೆ. ಬ್ಲಾಕ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಮುಂಚೂಣಿ ಘಟಕದ ಅಧ್ಯಕ್ಷರು, ಹಿರಿಯ ನಾಯಕರನ್ನು ಆಹ್ವಾನಿಸಿದ್ದೇವೆ. ಮಂಗಳೂರಿನಲ್ಲಿ ಅತ್ಯಂತ ಯಶಸ್ವಿಯಾಗಿ ಕಾರ್ಯಕ್ರಮ ಆಯೋಜಿಸಿದ್ದೆವು. ಕಾಂಗ್ರೆಸ್ ನಿಷ್ಕ್ರಿಯ ಆಗಿದೆ ಎಂದು ಜನ ಭಾವಿಸಬಾರದು ಎಂದು ಕೊರೊನಾ ಸಂದರ್ಭದಲ್ಲೂ ನಾವು ಸಾಕಷ್ಟು ಕಾರ್ಯಕ್ರಮ, ಸಹಾಯ ಮಾಡಿದ್ದೇವೆ.
ನಾವು ಅವರಿಗೆ ಭ್ರಷ್ಟಾಚಾರ ಹೊರತುಪಡಿಸಿ ಉಳಿದೆಲ್ಲ ಕಾರ್ಯಕ್ಕೆ ಸಹಕಾರ ನೀಡಿದ್ದೇವೆ. ತಪ್ಪು ಕೆಲಸದ ವಿರುದ್ಧ ಸರ್ಕಾರದ ನಿಲುವಿಗೆ ಹೋರಾಡಿದ್ದೇವೆ. ಕರ್ನಾಟಕ ಕೊರೊನಾ ಸಂದರ್ಭದ ಕಾರ್ಯ, ಸರ್ಕಾರದ ವಿರುದ್ಧ ಹೋರಾಟಕ್ಕೆ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಅಭಿನಂದನಾ ಪತ್ರ ಕಳಿಸಿದ್ದಾರೆ. ನಾವು ಯುದ್ಧ ಸಂದರ್ಭದಲ್ಲಿದ್ದೇವೆ. ನಾವು ಹೋರಾಟ ಮಾಡಬೇಕಾಗಿದೆ. ನಿಮ್ಮ ಧ್ವನಿ ನಮ್ಮ ಧ್ವನಿ ಆಗಬೇಕು, ನಮ್ಮ ಧ್ವನಿ ದೇಶದ ಧ್ವನಿ ಆಗಬೇಕು." ಎಂದು ಕರೆ ಕೊಟ್ಟರು.
ಪ್ರತಿಯೊಬ್ಬ ಮುಖಂಡರಿಗೆ ಮೂರು ನಿಮಿಷ ಕಾಲಾವಧಿ ನೀಡುತ್ತೇವೆ. ನಿಮ್ಮ ವ್ಯಾಪ್ತಿ, ಕ್ಷೇತ್ರದ ಸಮಸ್ಯೆಯನ್ನು ವಿವರಿಸಬೇಕು. ನಾಯಕರ ಅಭಿಪ್ರಾಯಕ್ಕೆ ಮನ್ನಣೆ ಇರಲಿದೆ. ನಿಜವಾದ ಸಮಸ್ಯೆಯನ್ನು ವಿವರಿಸಿ. ನೀವು ನೀಡುವ ಮಾಹಿತಿ, ವಿವರಿಸುವ ಮಾಹಿತಿ ಆಧರಿಸಿ ನಮ್ಮ ನಿರ್ಧಾರ ಆಗಿರಲಿದೆ. ಇತಿಹಾಸ ಮರು ಸೃಷ್ಟಿಸುವ ಅವಕಾಶ ಇಂದು ಲಭಿಸಿದೆ. ನಾವು ಇಂದು ನಮ್ಮ ಹೋರಾಟ ಮಾಡಬೇಕಿದೆ. ನಮ್ಮ ಶಕ್ತಿ ತೋರಿಸಿ ದೇಶದ ರಕ್ಷಣೆಗೆ ಮುಂದಾಗಬೇಕಿದೆ ಎಂದು ಹೇಳಿದರು.
ಇಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಆಶಯ, ಅರಿವು, ತಿಳುವಳಿಕೆ ಆಧರಿಸಿ ಕೆಪಿಸಿಸಿ ನಿಮ್ಮ ಸೇವೆ ಬಳಸಿಕೊಳ್ಳಲಿದೆ. ಅವಕಾಶವನ್ನು ನಾವೇ ಸೃಷ್ಟಿಸಿಕೊಳ್ಳಬೇಕಿದೆ. ನಾವು ಬೀದಿಗಿಳಿದು ಹೋರಾಡಲು ಸಾಕಷ್ಟು ಅವಕಾಶ ಇದೆ. ಬಿಜೆಪಿ ಸರ್ಕಾರ ನುಡಿದಂತೆ ನಡೆದುಕೊಂಡಿಲ್ಲ. ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಹೋರಾಡಬೇಕಿದೆ ಎಂದರು.