ಬೆಂಗಳೂರು: ವೈರಲ್ ಆಗಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ವಿಡಿಯೋ ಸಂಭಾಷಣೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಭಾಗಿಯಾಗಿದ್ದಾರೆ. ಇಬ್ಬರೂ ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಎಂ.ಜಿ. ರಸ್ತೆಯ ಟ್ರಿನಿಟಿ ವೃತ್ತದ ವಿಜಯ ಬ್ಯಾಂಕ್ ಜಂಕ್ಷನ್ನಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್ನ ವಿವಿಧ ನಾಯಕರು ಭಾಗಿಯಾಗಿದ್ದರು. ಅಮಿತ್ ಶಾ ಹಾಗೂ ಬಿ.ಎಸ್.ಯಡಿಯೂರಪ್ಪ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದಾರೆ. ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ನೂರಾರು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ವಿಧಾನ ಪರಿಷತ್ ಸದಸ್ಯ ರಿಜ್ವಾನ್ ಅರ್ಷದ್ ಮಾತನಾಡಿ, ಸುಗಮವಾಗಿ ಸಾಗಿದ್ದ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಬಿಜೆಪಿಯವರು ಉದ್ದೇಶಪೂರ್ವಕವಾಗಿ ಕೆಡವಿದರು. 17 ಶಾಸಕರು ರಾಜೀನಾಮೆ ನೀಡಿದರು. ಅವರು ಯಾಕೆ ರಾಜೀನಾಮೆ ಕೊಟ್ಟರೂ ಅನ್ನೋದು ಗೊತ್ತಾಗಲಿಲ್ಲ. ಇವರನ್ನು ಬಿಜೆಪಿಯವರು ಮುಂಬೈನಲ್ಲಿ ಇರಿಸಿದ್ದರು. ಮುಕ್ತವಾಗಿದ್ದೇವೆ ಎಂದು ಅನರ್ಹ ಶಾಸಕರು ಹೇಳಿಕೊಂಡರೂ ಅನುಮಾನ ಸಹಜವಾಗಿ ಕಾಡುವಂತೆ ಮಾಡಿದರು. ಕೋಟ್ಯಂತರ ರೂ. ಕೊಟ್ಟು ಯಡಿಯೂರಪ್ಪ ಶಾಸಕರನ್ನು ಖರೀದಿಸಿದ್ದಾರೆ. ಯಡಿಯೂರಪ್ಪ ಇದನ್ನು ತಮ್ಮ ಕೋರ್ ಕಮಿಟಿ ಸಭೆಯಲ್ಲಿ ಆಪರೇಷನ್ ಕಮಲ ಎಂದು ಒಪ್ಪಿಕೊಂಡಿದ್ದಾರೆ. ನಮ್ಮನ್ನು ನಂಬಿ ಬಂದವರು ಮೂರ್ಖರು ಎಂದಿದ್ದಾರೆ. ಬಿಜೆಪಿಯವರು ಅಧಿಕಾರದ ಆಸೆಗೆ ಪ್ರಜಾಪ್ರಭುತ್ವ ಕಗ್ಗೊಲೆ ಮಾಡಿದ್ದಾರೆ. ಪಕ್ಷ ಬಿಟ್ಟವರಿಗೆ ಹರಿಯಾಣ, ಮಹಾರಾಷ್ಟ್ರ ಮಾದರಿಯಲ್ಲಿ ಬುದ್ಧಿ ಕಲಿಸಬೇಕು. ಬೆಂಗಳೂರಿನ ಎಲ್ಲಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ, ಅನರ್ಹರನ್ನು ಸೋಲಿಸಿ ಕಾನೂನು ಕೂಡ ಅವರ ಪರವಾಗಿಲ್ಲ ಎಂಬ ಸಂದೇಶ ಸಾರಬೇಕಿದೆ ಎಂದು ಕರೆ ನೀಡಿದರು.
ಇದೇ ವೇಳೆ ಮಾಜಿ ಸಚಿವ ಹೆಚ್. ಎಂ. ರೇವಣ್ಣ, ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಹಾಗೂ ಶಾಸಕ ಎನ್.ಎ. ಹ್ಯಾರಿಸ್ ಮಾತನಾಡಿ, ಮುಖ್ಯಮಂತ್ರಿ ಬಿ. ಎಸ್ .ಯಡಿಯೂರಪ್ಪ ಹಾಗೂ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.