ಬೆಂಗಳೂರು: ನಗರದ ಮತದಾರರ ಪಟ್ಟಿಗೆ ಅಕ್ರಮವಾಗಿ ಹೆಸರು ಸೇರಿಸಿ ಮತ್ತೆ ಕೊನೆಯ ವರ್ಷವೂ ಕಾಂಗ್ರೆಸ್-ಜೆಡಿಎಸ್ ಅಧಿಕಾರ ನಡೆಸಲು ಹುನ್ನಾರ ನಡೆಸುತ್ತಿವೆ ಎಂದು ಬಿಬಿಎಂಪಿ ಪ್ರತಿಪಕ್ಷದ ನಾಯಕ ಪದ್ಮನಾಭ ರೆಡ್ಡಿ ಸುದ್ದಿಗೋಷ್ಠಿ ನಡೆಸಿ ಆರೋಪಿಸಿದರು.
ಮೋಹನ್ ಕೊಂಡಜ್ಜಿ ಸೇರಿದಂತೆ ಬೇರೆ ಜಿಲ್ಲೆಗಳ ಒಟ್ಟು ಮೂವರು ಎಂಎಲ್ಸಿಗಳನ್ನು ಬೆಂಗಳೂರು ಮತದಾರರ ಪಟ್ಟಿಗೆ ಅಕ್ರಮವಾಗಿ ಸೇರಿಸಲಾಗ್ತಿದೆ. ಬೆಂಗಳೂರು ಜನರು ಬಿಜೆಪಿಯನ್ನೇ ಗೆಲ್ಲಿಸಿದ್ದರೂ ಕಾಂಗ್ರೆಸ್ ಮುಖಂಡರು ಬೇರೆ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾದ ವಿಧಾನ ಪರಿಷತ್ ಸದಸ್ಯರನ್ನು ಸೇರಿಸಿ, ಅಕ್ರಮವಾಗಿ ಅಧಿಕಾರ ಹಿಡಿಯಲು ಕಳ್ಳ ದಾರಿ ಹಿಡಿದಿದ್ದಾರೆ.
ಕಳೆದ ನಾಲ್ಕು ವರ್ಷದಿಂದ ವಾಮಮಾರ್ಗದಲ್ಲಿ ಕಾಂಗ್ರೆಸ್-ಜೆಡಿಎಸ್ ಪಾಲಿಕೆಯಲ್ಲಿ ಅಧಿಕಾರ ಹಿಡಿದಿವೆ. ಅಧಿಕಾರ ದುರ್ಬಳಕೆ ಮಾಡಿಕೊಂಡು ಬೇರೆ ಜಿಲ್ಲೆಗಳಲ್ಲಿ ವಾಸಿಸುತ್ತಿರುವ ಎಂ.ಎಲ್.ಸಿಗಳನ್ನು, ರಾಜ್ಯಸಭಾ ಸದಸ್ಯರನ್ನು ಬೆಂಗಳೂರು ಮತದಾರರ ಪಟ್ಟಿಯಲ್ಲಿ ಸೇರಿಸುತ್ತಿದ್ದಾರೆ. ಇದರ ವಿರುದ್ಧ ರಾಜ್ಯ ಚುನಾವಣಾ ಆಯೋಗ ಹಾಗೂ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಕೊಡಲಾಗುವುದು ಎಂದರು.