ಬೆಂಗಳೂರು: ಕಾಂಗ್ರೆಸ್ನಲ್ಲಿ ಮುಂದಿನ ಮುಖ್ಯಮಂತ್ರಿ ಯಾರಾಗಬೇಕೆಂಬ ಚರ್ಚೆ ಮುಂದುವರಿದಿದೆ. ಕೆಲವರು ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮುಂದುವರಿಸಿದ್ದಾರೆ. ಶಾಸಕರಾದ ರಾಘವೇಂದ್ರ ಹಿಟ್ನಾಳ್, ಜಮೀರ್ ಅಹಮದ್ ಬಳಿಕ ಇದೀಗ ಕಾಂಗ್ರೆಸ್ನ ಮತ್ತೋರ್ವ ಶಾಸಕರು ಸಿದ್ದರಾಮಯ್ಯ ಅವರನ್ನು ಬೆಂಬಲಿಸಿದ್ದಾರೆ.
ಸಿದ್ದರಾಮಯ್ಯ ನಿವಾಸಕ್ಕೆ ಇಂದು ಬೆಳಗ್ಗೆ ಆಗಮಿಸಿದ್ದ ಹರಿಹರ ಕ್ಷೇತ್ರದ ಶಾಸಕ ರಾಮಪ್ಪ ಮಾಧ್ಯಮದವರೊಂದಿಗೆ ಮಾತನಾಡಿ, ಮುಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬೇಕು. ಇದು ರಾಜ್ಯದ ಜನರ ಅಭಿಪ್ರಾಯ ಇದೇ ಆಗಿದೆ. ನಮ್ಮ ಶಾಸಕರ ಅಭಿಪ್ರಾಯವೂ ಇದೇ ಆಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಇನ್ನೂ ವಯಸ್ಸಿದೆ. ಅವರು ಮುಂದೆ ಬೇಕಾದರೆ ಸಿಎಂ ಆಗಬಹುದು. 2023 ಕ್ಕೆ ಸಿದ್ದರಾಮಯ್ಯನವರೇ ಸಿಎಂ ಆಗಬೇಕು. ಅವರು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಅದಕ್ಕೆ ಅವರೇ ಆದರೆ ಒಳ್ಳೆಯದು ಎಂಬುದು ನಮ್ಮ ಆಸೆ. ಇದರ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡಲಿದೆ ಎಂದು ಹೇಳಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ :
ಆಹಾರ ಕಿಟ್ ವಿತರಣೆಗಾಗಿ ಪ್ರತಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಮಹದೇವಪುರದತ್ತ ಪ್ರಯಾಣ ಬೆಳೆಸಿದ್ದಾರೆ. ಇದಕ್ಕೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಮುಂದಿನ ಸಿಎಂ ಅಂತ ಶಾಸಕರುಗಳು ಹೇಳಿದರೆ ನಾನೇನು ಮಾಡೋಕೆ ಆಗಲ್ಲ. ಅದಕ್ಕೂ ನನಗೂ ಸಂಬಂಧ ಇಲ್ಲವೆಂದು ಹೇಳಿ ತೆರಳಿದ್ದರು.
ಶಾಸಕರ ಹೇಳಿಕೆಗೆ ನಾನೇನು ಮಾಡುವುದಕ್ಕೆ ಆಗೋದಿಲ್ಲ. ನನಗೂ ಶಾಸಕರ ಹೇಳಿಕೆಗೆ ಸಂಬಂಧವಿಲ್ಲ. ಶಾಸಕರ ಮೇಲೆ ಸಿದ್ದರಾಮಯ್ಯ ಕ್ರಮ ತೆಗೆದುಕೊಳ್ತಾರೆ ಅಂತ ಡಿಕೆಶಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಅವರೇನೋ ಹೇಳಿದ್ರೆ ನಾನೇನು ಮಾಡೋಕೆ ಆಗುತ್ತೆ ಎಂದರು.
ಇದನ್ನೂ ಓದಿ : ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗ್ಬೇಕಂತ ಜನರ ನಾಡಿಮಿಡಿತ ಆಗಿದೆ: ಮಾಜಿ ಸಿಎಂ ಪರ ಬ್ಯಾಟಿಂಗ್ ಶುರು
ಈಗಾಗಲೇ ಮಂಗಳರವಾರ ದಿಲ್ಲಿಯಲ್ಲಿ ಪಕ್ಷದ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಬಂದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮುಂದಿನ ಸಿಎಂ ವಿಚಾರದಲ್ಲಿ ಯಾವುದೇ ನಾಯಕರು ತಮ್ಮ ಹೇಳಿಕೆ ನೀಡಬಾರದು ಎಂದಿದ್ದಾರೆ. ಇದರ ನಡುವೆ ಶಾಸಕರಾದ ರಾಘವೇಂದ್ರ ಹಿಟ್ನಾಳ್ ಹಾಗೂ ಜಮೀರ್ ಅಹಮದ್ ಕರೆ ಮಾಡಿದ್ದ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಮಧ್ಯೆ ರಾಮಪ್ಪ ಹೈಕಮಾಂಡ್ ಹೇಳಿದ್ರೂ ಡೋಂಟ್ ಕೇರ್ ಅಂತ ತಮ್ಮ ಹೇಳಿಕೆ ನೀಡಿದ್ದಾರೆ. ಇದಕ್ಕೆ ಪಕ್ಷ ಯಾವ ರೀತಿ ಪ್ರತಿಕ್ರಿಯೆ ನೀಡಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.