ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಅಪ್ಪ - ಮಕ್ಕಳು ಚುನಾವಣಾ ಕಣಕ್ಕಿಳಿದಿರುವುದು ಬೆಂಗಳೂರಿನಲ್ಲಿ ಮಾತ್ರವಲ್ಲ. ಆದರೆ, ಇಬ್ಬರೂ ಆಗರ್ಭ ಶ್ರೀಮಂತರು, ಅಕ್ಕ-ಪಕ್ಕದ ಕ್ಷೇತ್ರದಿಂದಲೇ ಕಣಕ್ಕಿಳಿದಿರುವುದು ವಿಶೇಷ. ವಿಜಯನಗರ ಕಾಂಗ್ರೆಸ್ ಶಾಸಕ ಎಂ. ಕೃಷ್ಣಪ್ಪ ಮತ್ತೊಮ್ಮೆ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಇನ್ನೊಂದೆಡೆ ಇವರ ಪುತ್ರ ಹಾಗೂ ಮಾಜಿ ಶಾಸಕ ಪ್ರಿಯಕೃಷ್ಣ ಸಹ ಕೈ ಪಕ್ಷದ ಅಭ್ಯರ್ಥಿಯಾಗಿ ಪಕ್ಕದ ಕ್ಷೇತ್ರ ಗೋವಿಂದರಾಜನಗರದಿಂದ ಕಣಕ್ಕಿಳಿದಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಹ ಗೆದ್ದು ಬೀಗಿರುವ ಎಂ. ಕೃಷ್ಣಪ್ಪ 2008, 2013 ಹಾಗೂ 2018ರಲ್ಲಿ ಹ್ಯಾಟ್ರಿಕ್ ಗೆಲುವು ದಾಖಲಿಸಿದ್ದರು. ಇದೀಗ ನಾಲ್ಕನೇ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಮಂಗಳವಾರ ಅವರು ನಾಮಪತ್ರ ಸಲ್ಲಿಕೆ ಸಹ ಮಾಡಿದ್ದಾರೆ. ಪಕ್ಕದ ಗೋವಿಂದರಾಜನಗರ ಕ್ಷೇತ್ರದಿಂದ ಅವರ ಪುತ್ರ ಪ್ರಿಯಕೃಷ್ಣ ನಾಮಪತ್ರ ಸಲ್ಲಿಸಿದ್ದಾರೆ.
2013ರಲ್ಲಿ ಚುನಾವಣೆಗೆ ಸ್ಪರ್ಧಿಸಿ ಗೆದ್ದಿದ್ದ ಪ್ರಿಯಕೃಷ್ಣ 2018ರಲ್ಲಿ ಬಿಜೆಪಿಯ ಸೋಮಣ್ಣ ವಿರುದ್ಧ ಸೋತಿದ್ದರು. ಈ ಸಾರಿ ಸೇಡು ತೀರಿಸಿಕೊಳ್ಳುವ ತವಕದಲ್ಲಿದ್ದಾರೆ. ಇವರು ಸಹ ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ. ಗೋವಿಂದರಾಜ ನಗರ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಕೃಷ್ಣ ಬರೋಬ್ಬರಿ 1,156.83 ಕೋಟಿ ಆಸ್ತಿ ಘೋಷಿಸುವ ಮೂಲಕ ಸಹಸ್ರ ಕೋಟಿ ಒಡೆಯ ಎಂದು ಕರೆಸಿಕೊಂಡಿದ್ದಾರೆ. ಆದರೆ, ಇವರ ತಂದೆ ವಿಜಯನಗರ ಅಭ್ಯರ್ಥಿ ಹಾಗೂ ಮಾಜಿ ಸಚಿವ ಎಂ. ಕೃಷ್ಣಪ್ಪ ಸುಮಾರು 400 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ.
ಸಹಸ್ರ ಕೋಟಿ ಒಡೆಯ ಪ್ರಿಯಕೃಷ್ಣ: ಗೋವಿಂದರಾಜನಗರ ಕ್ಷೇತ್ರದ ಅಭ್ಯರ್ಥಿ ಪ್ರಿಯಕೃಷ್ಣ ಸಹಸ್ರ ಕೋಟಿ ಆಸ್ತಿ ಹೊಂದಿದ್ದಾರೆ. ಪ್ರಿಯಕೃಷ್ಣ ಬಳಿ 935 ಕೋಟಿ ರೂ. ಮೌಲ್ಯದ ಚರಾಸ್ತಿ, 221.83 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇದೆ. 5 ವರ್ಷಗಳ ಹಿಂದೆ ಪ್ರಿಯಕೃಷ್ಣ ಆಸ್ತಿ 1,020.53 ಕೋಟಿ ರೂ.ಗಳಿತ್ತು. ಅದೀಗ, 136.3 ಕೋಟಿ ರೂ. ಹೆಚ್ಚಾಗಿದೆ. ಪ್ರಸ್ತುತ 1.40 ಕೆಜಿ ಚಿನ್ನಾಭರಣವಿದೆ. 17 ವಾಹನಗಳಿದ್ದು, ಅದರಲ್ಲಿ ಬೆನ್ಜ್, ಆಡಿ ಸೇರಿ 10 ಕಾರುಗಳಿವೆ.
ದೊಡ್ಡ ಮೊತ್ತದ ಸಾಲ: ಕಾಂಗ್ರೆಸ್‌ನ ನಾಯಕ ಎಂ.ಕೃಷ್ಣಪ್ಪ ಅವರ ಪುತ್ರ ಆಗರ್ಭ ಶ್ರೀಮಂತನಾಗಿದ್ದರೂ ಬರೋಬ್ಬರಿ 881 ಕೋಟಿ ರೂ. ಸಾಲವನ್ನು ವಿವಿಧ ಬ್ಯಾಂಕ್‌ಗಳು ಹಾಗೂ ವ್ಯಕ್ತಿಗಳಿಂದ ಪಡೆದುಕೊಂಡಿರುವುದಾಗಿ ತಿಳಿಸಿದ್ದಾರೆ. ಇವರ ಆಸ್ತಿಯ ಮೌಲ್ಯದಲ್ಲಿ ಶೇ.70 ಸಾಲದ ಹಣವನ್ನೇ ಹೊಂದಿದ್ದಾರೆ. ಪ್ರಿಯಾಕೃಷ್ಣ ಅವರು ಸಾಲ ಮಾಡಿರುವುದರ ಕುರಿತು ನೀಡಿರುವ ದಾಖಲೆಗಳಲ್ಲಿ ಅವರ ಸಹೋದರ ಪ್ರದೀಪ್ ಕೃಷ್ಣ ಅವರಿಂದ 55 ಕೋಟಿ ರೂ. ಸಾಲವನ್ನು ಪಡೆದುಕೊಂಡಿದ್ದಾರೆ. ಅವರ ತಂದೆ ಎಂ. ಕೃಷ್ಣಪ್ಪ ಅವರಿಂದ 4 ಕೋಟಿ ರೂ. ಸಾಲವನ್ನು ಪಡೆದುಕೊಂಡಿದ್ದಾರೆ.
ಜನತಾ ಸೇವಾ ಕೋ-ಆಪರೇಟಿವ್ ಬ್ಯಾಂಕ್‌ನಿಂದ 6.30 ಕೋಟಿ ರೂ. ಹಾಗೂ ಎ.ಎನ್. ಕನ್ಸಲ್ಟಂಟ್ಸ್‌ನಿಂದ 25 ಕೋಟಿ ರೂ. ಸಾಲವನ್ನು ಮಾಡಿದ್ದಾರೆ. ಉಳಿದಂತೆ 780 ಕೋಟಿ ರೂ. ಸಾಲವನ್ನು ವಿವಿಧ ಬ್ಯಾಂಕ್ ಮತ್ತು ವ್ಯಕ್ತಿಗಳಿಂದ ಪಡೆಯಲಾಗಿದೆ ಎಂದು ಘೋಷಣೆ ಮಾಡಿಕೊಂಡಿದ್ದಾರೆ. 2018ರ ವಿಧಾನಸಭಾ ಚುನಾವಣೆ ವೇಳೆ ಪ್ರಿಯಕೃಷ್ಣ 1,024 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಘೋಷಿಸಿದ್ದರು. ಈ ವರ್ಷ 1,156 ಕೋಟಿ ರೂ. ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ.
ಕೃಷ್ಣಪ್ಪ ಸಹ ಸಾಹುಕಾರ: ವಿಜಯನಗರ ವಿಧಾನಸಭಾ ಕ್ಷೇತ್ರದಿಂದ ಉಮೇದುವಾರಿಕೆ ಸಲ್ಲಿಸಿರುವ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ ಸಚಿವ ಎಂ. ಕೃಷ್ಣಪ್ಪ 399.73 ಕೋಟಿ ರೂ. ಆಸ್ತಿ ಹೊಂದಿದ್ದಾರೆ. ಆ ಪೈಕಿ 103.81 ಕೋಟಿ ರೂ. ಚರಾಸ್ತಿ ಆಗಿದ್ದರೆ, 295.92 ಕೋಟಿ ರೂ. ಸ್ಥಿರಾಸ್ತಿಯಾಗಿದೆ. ಅವರ ಬಳಿ ಬರೋಬ್ಬರಿ 20.5 ಕೆಜಿ ಚಿನ್ನವಿದ್ದು, 18 ಕೆಜಿ ಬೆಳ್ಳಿ ಇದೆ. ಅಲ್ಲದೇ, ಎಂ.ಕೃಷ್ಣಪ್ಪ 48.24 ಎಕರೆ ಕೃಷಿ ಭೂಮಿ ಹೊಂದಿದ್ದಾರೆ.
ಕೃಷ್ಣಪ್ಪ 8,17,118 ರೂ., ಪತ್ನಿ ಪ್ರಿಯದರ್ಶಿನಿ ಬಳಿ 1,58,926 ರೂ. ಹಾಗೂ ಕುಟುಂಬದ ಬಳಿ 1,46,100 ರೂ. ನಗದು ಇದೆ. ಐದು ಐಷಾರಾಮಿ ಕಾರುಗಳ ಒಡೆಯರಾಗಿರುವ ಕೃಷ್ಣಪ್ಪ, 5 ಟ್ರಾಕ್ಟರ್ಗಳನ್ನು ಹೊಂದಿದ್ದಾರೆ. ಕೃಷ್ಣಪ್ಪ ಕುಟುಂಬ ವಿವಿಧ ಹಣಕಾಸು ಸಂಸ್ಥೆ ಮತ್ತು ವ್ಯಕ್ತಿಗಳಿಂದ 40.51 ಕೋಟಿ ರೂ. ಸಾಲ ಹಾಗೂ ಅವರ ಪತ್ನಿ ಹಸರಿನಲ್ಲಿ 36.64 ಕೋಟಿ ರೂ. ಸಾಲ ಪಡೆದಿರುವುದಾಗಿ ದಾಖಲಿಸಲಾಗಿದೆ.
ಇದನ್ನೂ ಓದಿ: ಡಿ ಕೆ ಶಿವಕುಮಾರ್ ₹1,414 ಕೋಟಿ ಮೌಲ್ಯದ ಆಸ್ತಿ ಒಡೆಯ.. ಹೆಚ್ ಡಿ ಕುಮಾರಸ್ವಾಮಿ ಒಟ್ಟು ಆಸ್ತಿ ಎಷ್ಟು?