ಬೆಂಗಳೂರು: ಎರಡು ವಿಧಾನಸಭೆ ಕ್ಷೇತ್ರ ತನ್ನಲ್ಲೇ ಉಳಿಸಿಕೊಳ್ಳಲು ಹರಸಾಹಸ ನಡೆಸಿರುವ ರಾಜ್ಯ ಕಾಂಗ್ರೆಸ್ ನಾಯಕರು ಉಪಚುನಾವಣೆಯ ಗೆಲುವನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ್ದು, ಇದರ ಜತೆ ಬೆಳಗಾವಿ ಲೋಕಸಭೆ ಕ್ಷೇತ್ರವನ್ನೂ ತಮ್ಮದಾಗಿಸಿಕೊಳ್ಳುವ ಸಾಹಸಕ್ಕೆ ಕೈ ಹಾಕಿದ್ದಾರೆ.
ಸಾಕಷ್ಟು ಅಳೆದು ತೂಗಿ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವ ಕಾಂಗ್ರೆಸ್ ನಾಯಕರು, ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ನಡುವೆ ಇರುವ ಆಂತರಿಕ ಭಿನ್ನಾಭಿಪ್ರಾಯ, ಬಂಡಾಯ ಅಭ್ಯರ್ಥಿಗಳು ಕಣದಲ್ಲಿರುವುದನ್ನು ಧನಾತ್ಮಕವಾಗಿ ಬಳಸಿಕೊಳ್ಳುತ್ತಿವೆ. ಈ ಸಾರಿ ಉಪಚುನಾವಣೆಯಲ್ಲಿ ಪ್ರಚಾರ ಸಂದರ್ಭ ಕಾಂಗ್ರೆಸ್ ನಾಯಕರು ತಮ್ಮನ್ನು ಅಗಲಿದ ನಾಯಕನ ಪರ ಮತ ಕೊಡಿ, ತಮಗೆ ಮೋಸ ಮಾಡಿದ ಅಭ್ಯರ್ಥಿಗೆ ಮತ ನೀಡಬೇಡಿ ಎಂದು ಸ್ಪಷ್ಟವಾಗಿ ಜನರಿಗೆ ಮನವರಿಕೆ ಮಾಡಿಕೊಡುವ ಯತ್ನ ಮಾಡುತ್ತಿದ್ದಾರೆ.
ಪ್ರಚಾರ ಸಂದರ್ಭ ಎಲ್ಲಿಯೂ ವೈಯಕ್ತಿಕ ನಿಂದನೆಗೆ ಅವಕಾಶ ನೀಡದೇ ಹಿಂದೆ ತಮ್ಮ ಸರ್ಕಾರ ಇದ್ದಾಗ ಈ ಕ್ಷೇತ್ರಗಳಿಗೆ ನೀಡಿದ ಅನುದಾನ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಇದ್ದಾಗ ಕೊಟ್ಟ ಕೊಡುಗೆಯನ್ನು ಜನರಿಗೆ ತಿಳಿಸುವ ಯತ್ನ ಮಾಡುತ್ತಿದ್ದಾರೆ. ವಿಪರೀತ ಬಿಸಿಲು ಇರುವ ಹಿನ್ನೆಲೆ ದಿನವಿಡೀ ಪ್ರಚಾರ ಸಾಧ್ಯವಾಗದ ಹಿನ್ನೆಲೆ ಸಿಕ್ಕ ಅವಕಾಶವನ್ನು ಅವಹೇಳನಕ್ಕೆ ಬಳಸಿಕೊಳ್ಳದೇ, ಅವಕಾಶವಾಗಿ ಪರಿವರ್ತಿಸಿಕೊಳ್ಳುವ ಯತ್ನದಲ್ಲಿದ್ದಾರೆ.
ಮಸ್ಕಿ ವಿಧಾನಸಭೆ ಆಶಾದಾಯಕ
ರಾಜ್ಯ ಕಾಂಗ್ರೆಸ್ ಪಾಲಿಗೆ ಮಸ್ಕಿ ವಿಧಾನಸಭೆ ಕ್ಷೇತ್ರ ಕೊಂಚ ಆಶಾದಾಯಕವಾಗಿದೆ. ಇಲ್ಲಿ ಪಕ್ಷ ತ್ಯಜಿಸಿದ ಪ್ರತಾಪ್ ಗೌಡ ವಿರುದ್ಧ ಭರ್ಜರಿಯಾಗಿ ಪಕ್ಷ ಪ್ರಚಾರ ನಡೆಸಿದೆ. ಅಲ್ಲದೇ ಬಿಜೆಪಿ ಹೊಸ ಅಭ್ಯರ್ಥಿಗೆ ಮಣೆ ಹಾಕಿದೆ. ಅಲ್ಲದೇ ಹಿಂದೆ ಬಿಜೆಪಿ ಅಭ್ಯರ್ಥಿಯಾಗಿ ಅಲ್ಪ ಮತದಿಂದ ಸೋತಿದ್ದ ಮಲ್ಲಿಕಾರ್ಜುನ ಖೂಬಾ ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.
ಮೂರು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದರೂ, ಕಳೆದ ಒಂದು ವರ್ಷದಿಂದ ಪ್ರತಾಪ್ ಗೌಡ ವರ್ಚಸ್ಸು ಕೊಂಚ ಕಡಿಮೆ ಆಗಿದೆ. ಅಲ್ಲದೇ ಕಾಂಗ್ರೆಸ್ ಇಲ್ಲಿ ಗೆಲ್ಲುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಎಲ್ಲಾ ಪ್ರಯತ್ನವನ್ನೂ ಬಳಸಿಕೊಳ್ಳುತ್ತಾ ಸಾಗಿದೆ. ಒಟ್ಟಾರೆ ಇಲ್ಲಿ ಕಾಂಗ್ರೆಸ್ ನಿರೀಕ್ಷೆ ಹೆಚ್ಚಿದ್ದು, ಗೆಲ್ಲುವ ಅವಕಾಶವಿದೆ ಎಂದು ಸಹ ಹೇಳಲಾಗುತ್ತಿದೆ.
ಬಸವಕಲ್ಯಾಣ ಕಷ್ಟ
ಬಸವಕಲ್ಯಾಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅನುಕಂಪದ ಅಲೆ ಕೈ ಹಿಡಿಯುತ್ತಿಲ್ಲ. ಅಲ್ಲದೇ ಆಕಾಂಕ್ಷಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದರು, ಎಲ್ಲರೂ ಒಟ್ಟಾಗಿ ಕೈ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿಲ್ಲ. ಇನ್ನೊಂದೆಡೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಪ್ರಚಾರ ಕಣದಲ್ಲಿಲ್ಲ. ಈ ಭಾಗದ ಪ್ರಭಾವಿ ನಾಯಕರಾಗಿದ್ದ ಖಂಡ್ರೆ ಅನುಪಸ್ಥಿತಿ ಎಲ್ಲೆಡೆ ಕಾಡುತ್ತಿದೆ.
ಪ್ರಚಾರಕ್ಕೆ ಮುನ್ನವೇ ಸೋಲು ಬಹುತೇಕ ಖಚಿತ ಎಂದು ನಿರೀಕ್ಷಿಸಿದ್ದ ಕಾಂಗ್ರೆಸ್ ಕಡೆಯ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು ಎನ್ನುವ ಆಶಯದೊಂದಿಗೆ ಪ್ರಚಾರದಲ್ಲಿ ತೊಡಗಿದೆ. ಗೆಲ್ಲುವ ನಿರೀಕ್ಷೆ ಇಲ್ಲವಾದರೂ, ಆಸೆ ಕಳೆದುಕೊಂಡಿಲ್ಲ.
ಬೆಳಗಾವಿ ಆಸೆ
ಬೆಳಗಾವಿ ಲೋಕಸಭೆ ಕ್ಷೇತ್ರ ಗೆಲ್ಲುವ ಉತ್ಸಾಹ ಕಡೆಯ ಕ್ಷಣದಲ್ಲಿ ಕಾಂಗ್ರೆಸ್ಗೆ ಹೆಚ್ಚಾಗುತ್ತಿದೆ. ಸತೀಶ್ ಜಾರಕಿಹೊಳಿ ಪರ ಪಕ್ಷದ ಎಲ್ಲಾ ನಾಯಕರೂ ಒಂದಾಗಿ ಪ್ರಚಾರ ಮಾಡುತ್ತಿದ್ದು, ಇವರ ಪರವಾಗಿ ಮತದಾರರ ಒಲವು ವ್ಯಕ್ತವಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಕಾಂಗ್ರೆಸ್ ಮಾಡುತ್ತಿರುವ ಆರೋಪ ಮತದಾರರನ್ನು ಪ್ರಭಾವಿಸುತ್ತಿದೆ.
ಇದು ಮತವಾಗಿ ಪರಿವರ್ತನೆಗೊಂಡರೆ ಏಕಕಾಲಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ದೊಡ್ಡ ಹೊಡೆತ ಕೊಡಬಹುದು. ಜನರ ವಿಶ್ವಾಸವನ್ನು ಸರ್ಕಾರ ಕಳೆದುಕೊಂಡಿದೆ ಎಂಬುದನ್ನು ಸಾಬೀತುಪಡಿಸಬಹುದು ಎನ್ನುವ ಲೆಕ್ಕಾಚಾರ ಹೆಣೆಯಲಾಗುತ್ತಿದೆ. ಇನ್ನೊಂದೆಡೆ ಸೋದರನ ವಿರುದ್ಧ ಪ್ರಚಾರ ಮಾಡಲು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಹಿಂದೇಟು ಹಾಕಿದ್ದಾರೆ. ರಮೇಶ್ ಜಾರಕಿಹೊಳಿ ಬಿಜೆಪಿಯವರಾಗಿದ್ದೂ, ಪ್ರಚಾರಕ್ಕೆ ತೆರಳಿಲ್ಲ. ಇದು ಕೂಡ ಅಂಗಡಿ ಕುಟುಂಬಕ್ಕೆ ಹಿನ್ನಡೆ ತರಬಹುದು ಎನ್ನುವುದು ಕಾಂಗ್ರೆಸ್ ಲೆಕ್ಕಾಚಾರ.