ಬೆಂಗಳೂರು: ಗೋವಿಂದರಾಜನಗರ ವ್ಯಾಪ್ತಿಯಲ್ಲಿ ನಡೆದ ಕಾಂಗ್ರೆಸ್ - ಬಿಜೆಪಿ ಕಾರ್ಯಕರ್ತರ ಮಾರಾಮಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯನಗರ ಬಿಜೆಪಿ ನಿಯೋಗ, ನಗರ ಪೊಲೀಸ್ ಆಯುಕ್ತರ ಕಚೇರಿಗೆ ಭೇಟಿ ನೀಡಿ ದೂರು ಸಲ್ಲಿಸಿದೆ. ಮಾಜಿ ಕಾರ್ಪೋರೇಟರ್ ಉಮೇಶ್ ಶೆಟ್ಟಿ ನೇತೃತ್ವದ ನಿಯೋಗ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಅವರನ್ನ ಭೇಟಿಯಾಗಿ ದೂರು ಸಲ್ಲಿಸಲಾಗಿದೆ.
ದೂರು ಸಲ್ಲಿಸಿದ ಬಳಿಕ ಮಾತನಾಡಿದ ಉಮೇಶ್ ಶೆಟ್ಟಿ, ಕಾರ್ಯಕ್ರಮ ಇದ್ದದ್ದು ಭಾನುವಾರ, ಇಂದು ಫ್ಲೆಕ್ಸ್ ಅಳವಡಿಸಲು ಅನುಮತಿಯಿತ್ತು. ಆದರೆ ನಿನ್ನೆ ಫ್ಲೆಕ್ಸ್, ಬ್ಯಾನರ್ ಅಳವಡಿಸಲು ಬಂದಿದ್ದಾರೆ. ನಿನ್ನೆ ಆ ಮೈದಾನದಲ್ಲಿ ಬಿಜಿಎಸ್ ಕಪ್ ಹೆಸರಿನ ಕ್ರಿಕೆಟ್ ಟೂರ್ನಮೆಂಟ್ ನಡೆಯುತ್ತಿತ್ತು. ಅಲ್ಲಿರುವವರು ಪ್ರಶ್ನಿಸಿದಾಗ ಗಲಾಟೆಯಾಗಿದೆ. ಕಾರ್ಯಕ್ರಮದಲ್ಲಿ ಬೈಕ್, ಮೊಬೈಲ್ ವಿತರಣೆಯೆಂದು ಆಮಿಷವೊಡ್ಡುವ ಸಿದ್ಧತೆ ನಡೆಸಲಾಗಿತ್ತು. ಅದನ್ನ ಸಹ ಚುನಾವಣಾ ಆಯೋಗದ ಗಮನಕ್ಕೆ ತರಲಾಗಿದೆ ಎಂದರು.
ಘಟನೆಯಲ್ಲಿ ಸುಮಾರು 10-15 ಜನ ನಮ್ಮ ಕಾರ್ಯಕರ್ತರಿಗೆ ಗಂಭೀರ ಗಾಯಗಳಾಗಿವೆ. ಇದುವರೆಗೂ ಆರೋಪಿಗಳ ಬಂಧನವಾಗಿಲ್ಲ ಎಂಬುದನ್ನ ಕಮಿಷನರ್ ಗಮನಕ್ಕೆ ತಂದಿದ್ದೇವೆ. ಕಾರ್ಯಕ್ರಮವನ್ನು ಕೂಡಾ ರದ್ದು ಮಾಡಲಾಗಿದೆ ಅಂತ ಕಮಿಷನರ್ ಹೇಳಿದ್ದಾರೆ. ಘಟನೆಯಲ್ಲಿ ಪರಿಸ್ಥಿತಿ ನಿಯಂತ್ರಣಕ್ಕಾಗಿ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಈ ಸಂದರ್ಭದಲ್ಲಿ ನಮ್ಮ ಕಾರ್ಯಕರ್ತರಿಗೆ ಹೆಚ್ಚು ಗಾಯಗಳಾಗಿವೆ. ಪೊಲೀಸರು ನಮ್ಮ ಕಾರ್ಯಕರ್ತರನ್ನ ಟಾರ್ಗೆಟ್ ಮಾಡುವ ರೀತಿಯಲ್ಲಿ ಕಂಡು ಬಂದಿದೆ. ಅಧಿಕಾರಿಗಳ ನ್ಯೂನ್ಯತೆ ಕಂಡು ಬಂದರೆ ಕ್ರಮ ಕೈಗೊಳ್ಳುವುದಾಗಿ ಕಮಿಷನರ್ ಹೇಳಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ:ವಿಷ್ಣುರೂಪದ ಅದೃಷ್ಟಕಲ್ಲು ಎಂದು ಹೇಳಿ 2 ಕೋಟಿಗೆ ಮಾರಾಟ ಮಾಡಲು ಯತ್ನ: ಇಬ್ಬರು ವಂಚಕರ ಬಂಧನ
ಕಾಂಗ್ರೆಸ್ - ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ಪ್ರಕರಣ 3 ಪ್ರತ್ಯೇಕ ಎಫ್ಐಆರ್ ದಾಖಲು: ಫ್ಲೆಕ್ಸ್ ಹಾಕುವ ವಿಚಾರವಾಗಿ ನಡೆದ ಮಾರಾಮಾರಿ ಸಂಬಂಧ ಗೋವಿಂದರಾಜ ನಗರ ಠಾಣೆಯಲ್ಲಿ ಒಟ್ಟು ಮೂರು ಪ್ರತ್ಯೇಕ ಎಫ್ಐಆರ್ಗಳು ದಾಖಲಾಗಿವೆ. ಘಟನೆಯ ಕುರಿತು ಪೊಲೀಸರೇ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೇ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ನೀಡಿರುವ ದೂರು- ಪ್ರತಿದೂರು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವ ಆರೋಪದ ಮೇಲೆ 36 ಜನರ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದಲ್ಲದೇ ಕಾಂಗ್ರೆಸ್ ಕಾರ್ಯಕರ್ತೆ ನೀಡಿರುವ ದೂರಿನ ಅನ್ವಯ 10 ಜನರ ವಿರುದ್ಧ ಹಲ್ಲೆ ಹಾಗೂ ಕೊಲೆ ಬೆದರಿಕೆ ಪ್ರಕರಣ ದಾಖಲಾಗಿದೆ. ಪ್ರತಿಯಾಗಿ ಬಿಜೆಪಿ ಕಾರ್ಯಕರ್ತೆ ಸಹ ದೂರು ನೀಡಿದ್ದು, ಅದರನ್ವಯ 8 ಜನರ ವಿರುದ್ಧ ಹಲ್ಲೆ, ಕೊಲೆ ಬೆದರಿಕೆ ಪ್ರಕರಣ ದಾಖಲಾಗಿದೆ.
ಕಾರ್ಯಕ್ರಮ ಆಯೋಜಿಸುವ ಸಲುವಾಗಿ ಗಲಾಟೆ: ವಿಜಯನಗರದ ಎಂಸಿ ಲೇಔಟ್‌ನ ಬಿಜಿಎಸ್ ಆಟದ ಮೈದಾನದಲ್ಲಿ ಕಾರ್ಯಕ್ರಮ ಆಯೋಜನೆ ಮಾಡುವ ವಿಚಾರವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಶುಕ್ರವಾರ ಮಾರಾಮಾರಿ ನಡೆದಿತ್ತು.