ಬೆಂಗಳೂರು: ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನಕ್ಕೆ ಆಪರೇಷನ್ ಕಮಲ ನಡೆಸಿದ ವೇಳೆ ಬಿಜೆಪಿ ನಾಯಕರ ಬೆಂಗಾವಲಾಗಿ ನಿಂತಿದ್ದವರು ಸಿ.ಪಿ.ಯೋಗೇಶ್ವರ್. ಈಗ ಅವರನ್ನೇ ಕಾಂಗ್ರೆಸ್ಗೆ ಸೆಳೆಯುವ ಪ್ರಯತ್ನ ನಡೆಯುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ರಚನೆಯಾದ ಬಳಿಕ, ಯೋಗೇಶ್ವರ್ ಅವರನ್ನು ಸಂಪೂರ್ಣವಾಗಿ ಮೂಲೆ ಗುಂಪು ಮಾಡಲಾಗಿದೆ. ಆಪರೇಷನ್ ಕಮಲಕ್ಕೆ ಸಹಕರಿಸಿದ್ದ ಲಕ್ಷ್ಮಣ ಸವದಿ ಅವರನ್ನು ಡಿಸಿಎಂ ಮಾಡಲಾಗಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದವರಿಗೂ ಬಿಜೆಪಿ ಹೈಕಮಾಂಡ್ ಮಣೆ ಹಾಕಿದೆ.
![Congress attempts to woo CP Yogeshwara](https://etvbharatimages.akamaized.net/etvbharat/prod-images/4697946_thumbbgl.jpg)
ಆದರೆ, ಇದೇ ರೀತಿ ಪಕ್ಷದ ಏಳಿಗೆಗಾಗಿ ಶ್ರಮಿಸಿದ್ದ ಯೋಗೇಶ್ವರ್ ಅವರಿಗೆ ಬಿಜೆಪಿ ಯಾವುದೇ ಸ್ಥಾನಮಾನ ನೀಡಿಲ್ಲ ಅನ್ನೋದು ಅವರಿಗೆ ಬೇಸರವುಂಟು ಮಾಡಿದೆ. ಹಾಗಾಗಿ ಅವರು ಕಾಂಗ್ರೆಸ್ನತ್ತ ಮುಖ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ
ಚಲುವರಾಯಸ್ವಾಮಿ ಮೂಲಕ ‘ಆಪರೇಷನ್’
ಸಿ.ಪಿ.ಯೋಗೇಶ್ವರ್ ಅವರನ್ನು ಚಲುವರಾಯ ಸ್ವಾಮಿ ಮೂಲಕ ಕಾಂಗ್ರೆಸ್ಗೆ ಸೆಳೆಯೋ ಪ್ರಯತ್ನ ಮಾಡಲಾಗುತ್ತಿದೆಯಂತೆ. ಈ ನಿಟ್ಟಿನಲ್ಲಿ ಯೋಗೇಶ್ವರ್ ಅವರೊಂದಿಗೆ ಚಲುವರಾಯಸ್ವಾಮಿ ನಿರಂತರ ಭೇಟಿಯಲ್ಲಿದ್ದು, ಪಕ್ಷಕ್ಕೆ ಕರೆತರಲು ಯತ್ನಿಸುತ್ತಿದ್ದಾರೆ..
ಆಪರೇಷನ್ ಹಿಂದಿದ್ದಾರೆ ಮಾಜಿ ಸಿಎಂ ಸಿದ್ದರಾಮಯ್ಯ
ಯೋಗೇಶ್ವರ್ ಅವರನ್ನು ಕಾಂಗ್ರೆಸ್ಗೆ ಸೆಳೆಯುವ ಈ ತಂತ್ರದ ಹಿಂದೆ ಸಿದ್ದರಾಮಯ್ಯ ಕೈವಾಡವಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಹಳೇ ಮೈಸೂರು ಭಾಗದಲ್ಲಿ ಅದರಲ್ಲೂ ಮಂಡ್ಯ, ರಾಮನಗರ ಭಾಗದಲ್ಲಿ ಜೆಡಿಎಸ್ ಅತ್ಯಂತ ಪ್ರಬಲವಾಗಿದೆ. ಜೆಡಿಎಸ್ ಭದ್ರಕೋಟೆಯಲ್ಲಿ ಕಾಂಗ್ರೆಸ್ ನೆಲೆ ಕಂಡುಕೊಳ್ಳಲು ಯೋಗೇಶ್ವರ್ಗೆ ಗಾಳ ಹಾಕುತ್ತಿದೆ. ಇದಕ್ಕಾಗಿ ತಮ್ಮ ಆಪ್ತರಾದ ಚಲುವರಾಯಸ್ವಾಮಿಯವರ ಸಹಾಯ ಪಡೆಯುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಸಿಪಿವೈ ಕಾಂಗ್ರೆಸ್ಗೆ ಬಂದರೆ ಚನ್ನಪಟ್ಟಣ ಕೈ ವಶ ಮಾಡಿಕೊಳ್ಳಬಹುದು ಎಂಬುದು ಸಿದ್ದರಾಮಯ್ಯ ಮಾಸ್ಟರ್ ಪ್ಲಾನ್ ಆಗಿದೆ ಎನ್ನಲಾಗುತ್ತಿದೆ. ಜೊತೆಗೆ ರಾಮನಗರ, ಮಂಡ್ಯದಲ್ಲೂ ಹೆಚ್ಚಿನ ಸ್ಥಾನ ಪಡೆಯುವ ತಂತ್ರ ಇವರದ್ದಾಗಿದೆ. ಆಪರೇಷನ್ ಹಸ್ತಕ್ಕೆ ಕೈ ಹಾಕಿರುವ ಸಿದ್ದರಾಮಯ್ಯನವರ ಈ ಕಾರ್ಯ ಎಷ್ಟರ ಮಟ್ಟಿಗೆ ಸಕ್ಸಸ್ ಆಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.