ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರ ಶಿವಕುಮಾರೋತ್ಸವ-23 ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಕಾಂಗ್ರೆಸ್ ನಾಯಕರಿಗೆ ಪಕ್ಷದ ಹಿರಿಯ ಕಾರ್ಯಕರ್ತ ಜಿ.ಸಿ ರಾಜು ಮನವಿ ಮಾಡಿದ್ದಾರೆ.
ಶ್ರೀ ಸಿದ್ದರಾಮಯ್ಯ-75ರ ಅಮೃತ ಮಹೋತ್ಸವ ಸಮಿತಿಗೆ ಪತ್ರ ಬರೆದಿರುವ ನಾಗಮಂಗಲದ ಹೊಣಕೆರೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯರಾಗಿರುವ ಜಿ.ಸಿ ರಾಜು ಅವರು, ಡಿ.ಕೆ ಶಿವಕುಮಾರ್ ಅವರ ಶಿವಕುಮಾರೋತ್ಸವ-23 ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವಂತೆ ಮನವಿ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ತಾವೆಲ್ಲರೂ ಸೇರಿ ಸಿದ್ದರಾಮಯ್ಯರ 75ನೇ ವರ್ಷದ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಮಾಡುತ್ತಿದ್ದೀರಿ. ಇದು ಖುಷಿಯ ಸಂಗತಿ, ತಮಗೆ ಅಭಿನಂದನೆಗಳು. ಈ ಕಾರ್ಯಕ್ರಮದ ರೀತಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಶಿವಕುಮಾರೋತ್ಸವ 23 ಕಾರ್ಯಕ್ರಮವನ್ನು ಸಹ ಮಾಡಲು ಮನವಿ ಮಾಡುತ್ತೇನೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ. ಡಿಕೆಶಿ ಚಿಕ್ಕ ವಯಸ್ಸಿನಿಂದಲೇ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದು ಪಕ್ಷ ಕೊಟ್ಟ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ಇವರಿಗೆ ಇತ್ತೀಚಿಗಷ್ಟೇ 60 ವರ್ಷ ತುಂಬಿದೆ. ಈ ಸಂದರ್ಭದಲ್ಲಿ ಶಿವಕುಮಾರೋತ್ಸವ-23 ಎಂಬ ಹೆಸರಿನಲ್ಲಿ ಕಾರ್ಯಕ್ರಮ ಮಾಡಲು ಮನವಿ ಮಾಡುತ್ತೇನೆ ಎಂದಿದ್ದಾರೆ.
ತಮ್ಮ ಸಮಿತಿಯ ಮುಖಾಂತರವೇ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕಾಗಿ ಸಮಿತಿಯ ಎಲ್ಲ ಪದಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಇಂದು ನಡೆಯುವ ಅಮೃತ ಮಹೋತ್ಸವ ಸಮಿತಿಯ ಪೂರ್ವಭಾವಿ ಸಭೆಯಲ್ಲಿ ಶಿವಕುಮಾರೋತ್ಸವ -23 ರ ಕಾರ್ಯಕ್ರಮವನ್ನು ಕೈಗೊಳ್ಳುವ ಬಗ್ಗೆ ಪ್ರಸ್ತಾಪ ಮಾಡಬೇಕು. ನನ್ನಂತಹ ಲಕ್ಷಾಂತರ ಕಾರ್ಯಕರ್ತರು ತಮ್ಮ ಸಮಿತಿಯ ಜೊತೆಗಿರುತ್ತೇವೆ. ನಮ್ಮ ಪಕ್ಷದಲ್ಲಿ ನಾಯಕರ ವಿಚಾರ ಬಂದಾಗ ನನ್ನಂತಹ ಸಾಮಾನ್ಯ ಕಾರ್ಯಕರ್ತನ ಮನದಲ್ಲಿ ಪಕ್ಷದ ಎಲ್ಲ ನಾಯಕರಿಗೂ ಸಮಾನವಾದ ಗೌರವವಿದೆ. ಈ ವಿಚಾರದಲ್ಲಿ ಖಂಡಿತವಾಗಿಯೂ ಗೊಂದಲವಿಲ್ಲ. ಯಾರೂ ಸಹ ಗೊಂದಲ ಸೃಷ್ಟಿ ಮಾಡಲು ಸಾಧ್ಯವಿಲ್ಲ. ಸಮಿತಿಯ ಪೂಜ್ಯ ಪದಾಧಿಕಾರಿಗಳು ದಯಮಾಡಿ ನನ್ನ ಮನವಿಯನ್ನು ಪುರಸ್ಕರಿಸಬೇಕೆಂದು ಜಿ ಸಿ ರಾಜು ಕೋರಿದ್ದಾರೆ.
ಇದನ್ನೂ ಓದಿ: ಸಿದ್ದರಾಮೋತ್ಸವದ ಬಳಿಕ ಬಿಜೆಪಿ ಸರ್ಕಾರ ಪತನ : ಹೆಚ್.ಎಸ್. ಸುಂದರೇಶ್
ಕೆಪಿಸಿಸಿ ಕಚೇರಿ ನಮ್ಮ ದೇವಸ್ಥಾನ. ಕಚೇರಿಯಲ್ಲಿರುವ ಹಿರಿಯ ನಾಯಕರು ನಮ್ಮ ದೇವರು. ಈ ಕಾರ್ಯಕ್ರಮದ ವಿಚಾರವಾಗಿ ರಾಷ್ಟ್ರೀಯ ಅಧ್ಯಕ್ಷರಾದ ಸೋನಿಯಾ ಗಾಂಧಿ ಅವರಿಗೆ, ನಮ್ಮ ಯುವ ನಾಯಕರಾದ ರಾಹುಲ್ ಗಾಂಧಿ ಅವರಿಗೆ, ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯ ಸಾಹೇಬರಿಗೆ, ರಾಜ್ಯ ಕಾಂಗ್ರೆಸ್ ಉಸ್ತುವಾರಿಗಳಾದ ರಣದೀಪ್ ಸಿಂಗ್ ಸುರ್ಜೆವಾಲ ಅವರಿಗೂ ಪತ್ರದ ಮೂಲಕ ಮನವಿ ಮಾಡುತ್ತೇನೆಂದು ಜಿ.ಸಿ ರಾಜು ಉಲ್ಲೇಖಿಸಿದ್ದಾರೆ.