ಬೆಂಗಳೂರು: ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮತ್ತು ಶಾಸಕ ರವಿಸುಬ್ರಹ್ಮಣ್ಯ ವಿರುದ್ಧ ತನಿಖೆ ನಡೆಸುವಂತೆ ಕಾಂಗ್ರೆಸ್ ಮನವಿ ಸಲ್ಲಿಕೆ ಮಾಡಿದೆ. ದೂರವಾಣಿ ಸಂಭಾಷಣೆಯ ಸೂಕ್ತ ತನಿಖೆ ನಡೆಸುವಂತೆ ಉಪ ಪೊಲೀಸ್ ಆಯುಕ್ತರಿಗೆ ಮನವಿ ಪತ್ರ ನೀಡಿದೆ.
![Audio recording stirs up row](https://etvbharatimages.akamaized.net/etvbharat/prod-images/kn-bng-12-mla-ravi-subramanya-mentioned-name-audio-complaint-filed-investigation-request-about-conversation-ka10032_30052021000223_3005f_1622313143_882.jpg)
ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ವ್ಯಾಕ್ಸಿನ್‌ಗೆ ಸರ್ಕಾರ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚಿನ ದರ ನೀಡಿ ವ್ಯಾಕ್ಸಿನ್ ಪಡೆದುಕೊಳ್ಳಿ ಎಂದು ಜಾಹೀರಾತು ನೀಡಿದ್ದು, ಇದೀಗ ದೂರವಾಣಿ ಕರೆಯ ಮೂಲಕ ಹೆಚ್ಚುವರಿ ಹಣವನ್ನ ಶಾಸಕ ರವಿಸುಬ್ರಮಣ್ಯರಿಗೆ ನೀಡಬೇಕೆಂಬ ದೂರವಾಣಿ ಸಂಭಾಷಣೆ ನಡೆಸಿರುವ ಆಡಿಯೋ ಹೊರಬಿದ್ದಿದೆ. ಈ ಹಿನ್ನಲೆಯಲ್ಲಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹನುಮಂತ ನಗರ ಕಾಂಗ್ರೆಸ್ ವತಿಯಿಂದ ಸೌತ್ ಎಂಡ್ ವೃತ್ತದ ಉಪ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ.
ಇದನ್ನೂ ಓದಿ: ಕೊರೊನಾ ಸೋಂಕಿತ ವಕೀಲರಿಗೆ ರಾಜ್ಯ ಬಾರ್ ಕೌನ್ಸಿಲ್ನಿಂದ 1 ಕೋಟಿ ರೂ. ನೆರವು
ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬೆಡ್ ಹಗರಣಗಳ ಬಗ್ಗೆ ಈಗಾಗಲೇ ತನಿಖೆ ನಡೆಯುತ್ತಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚುವರಿ ಹಣ ಪಡೆದು ವ್ಯಾಕ್ಸಿನ್ ನೀಡುತ್ತಿರುವ ಕುರಿತು ಕೂಡ ಈಗಾಗಲೇ ಪೊಲೀಸ್ ಆಯುಕ್ತರಿಗೆ ತನಿಖೆ ನಡೆಸಲು ದೂರನ್ನು ಸಲ್ಲಿಸಿದ್ದೇವೆ ಎಂದು ಉಲ್ಲೇಖಿಸಲಾಗಿದೆ. ದೂರವಾಣಿ ಕರೆಯ ಮೂಲಕ ಆಸ್ಪತ್ರೆಯ ಮಹಿಳಾ ಸಿಬ್ಬಂದಿಯೊಬ್ಬರಿಗೆ ವ್ಯಾಕ್ಸಿನ್ ಹಾಕಿಸಿಕೊಳ್ಳುವ ಬಗ್ಗೆ ವ್ಯಕ್ತಿಯೊಬ್ಬರು ದೂರವಾಣಿ ಮೂಲಕ ವಿಚಾರಿಸಿದಾಗ, ಆ ಮಹಿಳೆ ವ್ಯಾಕ್ಸಿನ್ ಪಡೆಯಲು 900 ರೂಪಾಯಿ ನೀಡಬೇಕೆಂದು ತಿಳಿಸಿದ್ದಾರೆ. ದರ ಹೆಚ್ಚಾಯಿತು ಕಡಿಮೆ ಮಾಡಿ ಎಂದು ವ್ಯಾಕ್ಸಿನ್ ಹಾಕಿಸಿಕೊಳ್ಳುವವರು ಕೇಳಿದಾಗ, ಆಸ್ಪತ್ರೆ ಸಿಬ್ಬಂದಿಯು ಇಲ್ಲ 900 ಕೊಡಲೇಬೇಕು. ಈ ಮೊತ್ತವು ಶಾಸಕರಾದ ರವಿ ಸುಬ್ರಹ್ಮಣ್ಯ ಅವರ ಕಚೇರಿಗೆ ಹೋಗುತ್ತದೆ ಎಂದು ಹೇಳುತ್ತಾರೆ ಎಂದು ಕಾಂಗ್ರೆಸ್ ಮುಖಂಡ ಎಸ್. ಮನೋಹರ್ ಮಾಧ್ಯಮದವರಿಗೆ ತಿಳಿಸಿದ್ದಾರೆ.
ಸಂಭಾಷಣೆ ನಡಿಸಿರುವ ಆಡಿಯೋ ತುಣುಕನ್ನು ಪತ್ರದೊಂದಿಗೆ ಪೆನ್ ಡ್ರೈವ್‌ಗೆ ಕಾಪಿ ಮಾಡಿ ಮಾಹಿತಿಗಾಗಿ ಸಲ್ಲಿಸುತ್ತಿದ್ದೇವೆ. ವ್ಯಾಕ್ಸಿನ್ ಸರ್ಕಾರಿ ಆಸ್ಪತ್ರೆಗಳಲ್ಲಿ ದೊರಕುತ್ತಿಲ್ಲ, ಆದರೆ ಖಾಸಗಿ ಆಸ್ಪತ್ರೆಗಳಲ್ಲಿ ಹಣ ನೀಡಿದರೆ ಲಸಿಕೆ ದೊರೆಯುತ್ತದೆ ಎನ್ನುವುದರ ಬಗ್ಗೆ ಕೂಡಲೇ ತನಿಖೆ ನಡೆಸಿ ಸತ್ಯಾಂಶ ಜನತೆಗೆ ತಿಳಿಸಬೇಕೆಂದು ಮನೋಹರ್ ಒತ್ತಾಯಿಸಿದ್ದಾರೆ.