ಬೆಂಗಳೂರು: ಪಂಚ ಗ್ಯಾರಂಟಿ ಸ್ಕೀಮ್ಗಳ ಮೂಲಕ ಅಧಿಕಾರದ ಚುಕ್ಕಾಣಿಗೆ ಬರುವಲ್ಲಿ ಸಫಲವಾಗಿರುವ ಕಾಂಗ್ರೆಸ್ಗೆ ಈಗ ಗ್ಯಾರಂಟಿಗಳೇ ದೊಡ್ಡ ತಲೆನೋವಾಗಿದ್ದು, ಷರತ್ತುಗಳ ಮೂಲಕ ಆರ್ಥಿಕ ವೆಚ್ಚ ತಗ್ಗಿಸುವ ಪ್ರಯತ್ನಕ್ಕೆ ಮುಂದಾಗಿ ಜನರ ವಿರೋಧ ವ್ಯಕ್ತವಾಗುತ್ತಿದ್ದಂತೆ ಷರತ್ತುಗಳನ್ನು ಸಡಿಲ ಮಾಡಿ ಮರು ಸ್ಪಷ್ಟೀಕರಣ ನೀಡುತ್ತಿದೆ. ಈ ಎಲ್ಲ ವಿಷಯಗಳನ್ನು ಮುಂದಿಟ್ಟುಕೊಂಡು ಬಜೆಟ್ ಅಧಿವೇಶದಲ್ಲಿ ಹೋರಾಟ ನಡೆಸಲು ಬಿಜೆಪಿ ಸಿದ್ದತೆ ಮಾಡಿಕೊಂಡಿದೆ.
ಶೇ.10ರಷ್ಟು ಹೆಚ್ಚಿನ ಪ್ರಮಾಣದ ಯೂನಿಟ್ ವಿದ್ಯುತ್ ಉಚಿತ: ರಾಜ್ಯದ ಪ್ರತಿಯೊಂದು ಕುಟುಂಬಕ್ಕೂ 200 ಯೂನಿಟ್ವರೆಗೂ ವಿದ್ಯುತ್ ಶುಲ್ಕ ಇಲ್ಲ, ಉಚಿತ ವಿದ್ಯುತ್ ಎನ್ನುವ ಘೋಷಣೆ ಮಾಡಿದ್ದ ಕಾಂಗ್ರೆಸ್ ಇದೀಗ ಅಧಿಕಾರಕ್ಕೆ ಬಂದ ನಂತರ ಷರತ್ತು ವಿಧಿಸಿದೆ. 200 ಯೂನಿಟ್ ಪ್ರತಿ ತಿಂಗಳು ಎಲ್ಲರಿಗೂ ಕೊಡುವುದಿಲ್ಲ. ಕಳೆದ ಒಂದು ವರ್ಷ ಆ ಮನೆಯಲ್ಲಿ ಬಳಕೆಯಾದ ವಿದ್ಯುತ್ನ ಪ್ರಮಾಣವನ್ನು ಆಧರಿಸಿ ತಿಂಗಳ ಲೆಕ್ಕದಲ್ಲಿ ಎಷ್ಟು ಬರಲಿದೆಯೋ ಅದಕ್ಕೆ ಶೇ.10ರಷ್ಟು ಹೆಚ್ಚಿನ ಪ್ರಮಾಣದ ಯೂನಿಟ್ ಉಚಿತವಾಗಿ ನೀಡಲಾಗುತ್ತದೆ ಅದನ್ನು ದಾಟಿದರೆ, ಶುಲ್ಕ ಪಾವತಿ ಮಾಡಬೇಕು ಎನ್ನುವ ಷರತ್ತು ಹಾಕಲಾಯಿತು. ಒಬ್ಬರ ಹೆಸರಿನಲ್ಲಿ ಎಷ್ಟು ವಿದ್ಯುತ್ ಮೀಟರ್ (ಆರ್.ಆರ್.ಸಂಖ್ಯೆ) ಇದ್ದರೂ ಒಂದು ಮೀಟರ್ ಮಾತ್ರ ಯೋಜನೆಯಡಿ ಪರಿಗಣಿಸಲಾಗುತ್ತದೆ ಎನ್ನುವ ನಿರ್ಧಾರವನ್ನು ಪ್ರಕಟಿಸಲಾಗಿತ್ತು. ಇದರಿಂದಾಗಿ ಬಾಡಿಗೆದಾರರಿಗೆ ಯೋಜನೆ ಸವಲತ್ತು ಸಿಗುವುದಿಲ್ಲ ಎನ್ನುವ ಸುದ್ದಿಯಿಂದ ರಾಜ್ಯಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಷರತ್ತು ಮಾರ್ಪಾಡು ಮಾಡಿ ಬಾಡಿಗೆದಾರರಿಗೂ ಯೋಜನೆ ಅನ್ವಯಿಸುವಂತೆ ಮಾರ್ಪಾಡು ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದರ ನಂತರ ಪ್ರತಿ ಕುಟುಂಬದ ಯಜಮಾನತಿಗೆ ಮಾಸಿಕ 2 ಸಾವಿರ ನೀಡುವ ಗ್ಯಾರಂಟಿ ವಿಚಾರದಲ್ಲಿಯೂ ಷರತ್ತು ವಿಧಿಸಲಾಗಿದೆ. ಆದಾಯ ತೆರಿಗೆ ಪಾವತಿ ಮಾಡುತ್ತಿರುವ ಪುತ್ರನಿದ್ದರೆ ಅವರ ತಾಯಿಗೆ 2 ಸಾವಿರ ಸಿಗಲ್ಲ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ ನೀಡಿದ್ದರು. ಆದರೆ ಅದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆ ಮನೆಯ ಯಜಮಾನಿಯ ಪುತ್ರನ ಐಟಿಯನ್ನು ಯೋಜನೆಗೆ ಪರಿಗಣಿಸಲ್ಲ ಎಂದು ಸ್ಪಷ್ಟನೆ ನೀಡಿದರು.
ಗ್ಯಾರಂಟಿ ಯೋಜನೆಗಳಿಗೆ ಬಿಜೆಪಿ ತಗಾದೆ: ಪಡಿತರದಾರರಿಗೆ 10 ಕೆಜಿ ಅಕ್ಕಿ ಎಂದು ಘೋಷಣೆ ಮಾಡಿ ಈಗ ಕೇಂದ್ರದ ಐದು ಕೆಜಿ ಜೊತೆ ತಮ್ಮದು ಐದು ಕೆಜಿ ಮಾತ್ರ ನೀಡಲು ಹೊರಟಿದ್ದಾರೆ, ಅಕ್ಕಿ ಬದಲು ಧಾನ್ಯ ಎಂದು ಮಾರ್ಪಾಡು ಮಾಡಿದ್ದಾರೆ. ಹಾಗಾಗಿ ಗ್ಯಾರಂಟಿ ಸ್ಕೀಂ ಅರ್ಧ ಮಾತ್ರ ಅನುಷ್ಠಾನವಾದಂತಾಗಿದೆ ಎನ್ನುವುದು ಬಿಜೆಪಿಯ ತಗಾದೆಯಾಗಿದೆ. ಇನ್ನು ನಿರುದ್ಯೋಗಿ ಪದವೀಧರರಿಗೆ 1500 ಹಾಗೂ 3000 ರೂ. ನೀಡುವ ಘೋಷಣೆ ಮಾಡಿ ಈಗ ಈ ವರ್ಷ ಪಾಸ್ ಔಟ್ ಆಗಿದ್ದವರಿಗೆ ಮಾತ್ರ ಎಂದು ಷರತ್ತು ಹಾಕಲಾಗಿದೆ. ಸದ್ಯ ಮಹಿಳೆಯರ ಉಚಿತ ಬಸ್ ಪ್ರಯಾಣ ವಿಚಾರದಲ್ಲಿ ಮಾತ್ರ ಯಾವುದೇ ಗೊಂದಲ ಇಲ್ಲ. ಉಳಿದ ನಾಲ್ಕು ಯೋಜನೆಗಳಲ್ಲಿ ಗೊಂದಲಗಳಿದ್ದು, ಜನರಿಗೆ ಗ್ಯಾರಂಟಿಗಳು ತಲುಪುತ್ತಿಲ್ಲ ಎನ್ನುವ ವಿಚಾರವನ್ನೇ ಮುಂದಿಟ್ಟುಕೊಂಡು ಸದನದಲ್ಲಿ ಹೋರಾಟ ನಡೆಸಲು ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ.
ಗ್ಯಾರಂಟಿಗಳ ಅಸಲಿಯತ್ತು ಬಯಲು ಮಾಡಲು ಬಿಜೆಪಿ ತಂತ್ರ: ಸೋಲಿನ ಕುರಿತು ಆತ್ಮಾವಲೋಕನ ಸಭೆ ನಡೆಸಿರುವ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜ್ಯ ಬಿಜೆಪಿ ನಾಯಕರು ಮುಂಬರಲಿರುವ ವಿಧಾನಸಭಾ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಗ್ಯಾರಂಟಿ ಅಸ್ತ್ರಗಳನ್ನೇ ಪ್ರಯೋಗಿಸಲು ಮುಂದಾಗಿದ್ದಾರೆ. ಸರ್ಕಾರವನ್ನು ಕಟ್ಟಿಹಾಕಿ ಗ್ಯಾರಂಟಿ ಸ್ಕೀಂನ ಅಸಲಿಯತ್ತನ್ನು ಬಯಲು ಮಾಡಲು ನಿರ್ಧರಿಸಿದ್ದಾರೆ. ಜುಲೈನಲ್ಲಿ ಬಜೆಟ್ ಅಧಿವೇಶನ ನಡೆಯಲಿದ್ದು, ಕಲಾಪದಲ್ಲಿ ಗ್ಯಾರಂಟಿ ಸ್ಕೀಂ ವಿಚಾರಗಳನ್ನೇ ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತೇವೆ. ಒಪಿಎಸ್, ಎನ್ಪಿಎಸ್ ವಿಚಾರವೂ ಪ್ರಸ್ತಾಪ ಮಾಡಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತೇವೆ. ಶಿಕ್ಷಕರಿಗೆ ಏಳನೇ ವೇತನ ಆಯೋಗ ಜಾರಿ ವಿಚಾರದಲ್ಲಿಯೂ ಬಿಗಿಪಟ್ಟು ಹಾಕುತ್ತೇವೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಅಭ್ಯರ್ಥಿಗಳ ಆಯ್ಕೆಯಲ್ಲಿ ಎಡವಟ್ಟು, ಕಾಂಗ್ರೆಸ್ ಸಿದ್ದತೆಯ ಕಡೆಗಣನೆ: ಸೋಲಿಗೆ ಕಾರಣ ಕಂಡುಕೊಂಡ ಬಿಜೆಪಿ