ಬೆಂಗಳೂರು: 2023ರ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಜೆಡಿಎಸ್ನ ಹಾಲಿ ಶಾಸಕರೆಲ್ಲರಿಗೂ ಟಿಕೆಟ್ ನೀಡಬೇಕೆ, ಬೇಡವೇ ಎಂಬ ವಿಚಾರದಲ್ಲಿ ಪಕ್ಷದಲ್ಲಿ ಜಿಜ್ಞಾಸೆ ಉಂಟಾಗಿದೆ. ಈ ನಡುವೆ ಪಕ್ಷದ ವರಿಷ್ಠ ಹೆಚ್.ಡಿ.ದೇವೇಗೌಡರು ಹಾಲಿ ಶಾಸಕರೆಲ್ಲರಿಗೂ ಟಿಕೆಟ್ ನೀಡಲು ನಿಲುವು ಹೊಂದಿದ್ದಾರೆ.
ಪಕ್ಷದ ಪ್ರಮುಖ ನಾಯಕ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮೇಲೆ ಕೆಲ ಶಾಸಕರು ಮುನಿಸಿಕೊಂಡು ಪಕ್ಷ ಬಿಡಲು ಮುಂದಾಗಿದ್ದಾರೆ. ಇನ್ನೂ ಕೆಲವರು ಶಾಸಕರು ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದಾರೆ. ಈ ಮಧ್ಯೆ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು ಸಂದೇಶ, ಪಕ್ಷದೊಳಗೆ ಬಾರಿ ಚರ್ಚೆಗೆ ಗ್ರಾಸವಾಗಿದೆ.
ದೇವೇಗೌಡರ ಸಲಹೆ: ಒಡೆದಾಳುವ ನೀತಿಯನ್ನು ಅನುಸರಿಸುತ್ತಿರುವ ರಾಷ್ಟ್ರೀಯ ಪಕ್ಷಗಳ ವಿರುದ್ಧ ಹೋರಾಡಬೇಕಾದರೆ ಒಗ್ಗಟ್ಟು ಕಾಪಾಡಿಕೊಳ್ಳುವುದು ಬಹಳ ಮುಖ್ಯ ಎನ್ನುವ ಅಂಶವನ್ನು ದೇವೇಗೌಡರು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಪಕ್ಷದಲ್ಲಿ ಅನೇಕ ವೈರುಧ್ಯಗಳಿವೆ. ಹಾಗೆಂದ ಮಾತ್ರಕ್ಕೆ ಗೆಲ್ಲುವ ನಾವೇ ಕಾಲು ಕೆರೆದು ಜಗಳ ಮಾಡಿ ಪಕ್ಷದಿಂದ ಯಾರನ್ನು ಹೊರಗೆ ಕಳುಹಿಸುವುದು ಸೂಕ್ತವಲ್ಲ. ಎಲ್ಲರೂ ಒಂದಿಷ್ಟು ಸಮಾಧಾನದಿಂದ ಹೋಗಬೇಕು. ಅವರಾಗಿಯೇ ಹೋಗುವುದಾದರೆ ಹೋಗಲಿ, ನಾವಾಗಿಯೇ ಯಾರನ್ನೂ ಕಳುಹಿಸುವುದು ಬೇಡ. ಈ ಬಗ್ಗೆ ಕುಮಾರಸ್ವಾಮಿ ಬಳಿ ಮಾತನಾಡುತ್ತೇನೆ ಎಂದೂ ಅವರು ಸಲಹೆ ನೀಡಿದ್ದಾರೆ.
ಕುಮಾರಸ್ವಾಮಿ ವಾದ: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನವಾದ ಬಳಿಕ ಪಕ್ಷದೊಳಗೆ ಇರುವ ಕೆಲ ಶಾಸಕರು ಯಾವ ಟೀಕೆ ಮಾಡಿದ್ದಾರೆ. ಹೆಜ್ಜೆ ಹೆಜ್ಜೆಗೂ ಅವಮಾನಿಸಿದ್ದಾರೆ ಎನ್ನುವುದು ನಮಗೆ ಗೊತ್ತಿದೆ. ಅಂಥವರನ್ನು ಪಕ್ಷದೊಳಗೆ ಉಳಿಸಿಕೊಳ್ಳುವುದರಿಂದ ಮುಂದೆಯೂ ಮುಳ್ಳಾಗಲಿದ್ದಾರೆ.
ಆದ್ದರಿಂದ ಅವರಿಗೆ ಟಿಕೆಟ್ ನೀಡುವುದು ಬೇಡವೇ ಬೇಡ ಎನ್ನುವ ನಿಲುವಿಗೆ ಅಂಟಿಕೊಂಡಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ದೇವೇಗೌಡರ ಮಾತುಗಳು ಅಪಥ್ಯವಾಗಿವೆ. ಹಾಲಿ ಶಾಸಕರ ಪೈಕಿ ಕೆಲ ಶಾಸಕರು ಕ್ಷೇತ್ರದಲ್ಲಿ ಕೆಟ್ಟ ಹೆಸರು ಪಡೆದಿದ್ದಾರೆ. ಅಂಥವರಿಗೆ ಟಿಕೆಟ್ ನೀಡುವ ಬದಲು ಹೊಸ ಮುಖಗಳಿಗೆ ಅಲ್ಲಿ ಅವಕಾಶ ನೀಡಿದರೆ ಪಕ್ಷಕ್ಕೆ ಗೆಲುವು ಸಾಧ್ಯವಿದೆ ಎನ್ನುವ ವಾದವನ್ನು ಕುಮಾರಸ್ವಾಮಿ ಮುಂದಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಭಿನ್ನಮತೀಯರ ಬಗ್ಗೆ ಯಾವ ನಿಲುವು: ಭಿನ್ನಮತೀಯರಾಗಿಯೇ ಗುರುತಿಸಿಕೊಂಡ ಶಾಸಕರಿಗೆ ಮತ್ತೆ ಟಿಕೆಟ್ ನೀಡಿ ಏನು ಪ್ರಯೋಜನ ಎಂದು ಕುಮಾರಸ್ವಾಮಿ ಪ್ರಶ್ನೆಯಾದರೆ, ದೇವೇಗೌಡರು ಈ ಬಗ್ಗೆ ಯಾವ ರೀತಿಯ ಪ್ರತಿಕ್ರಿಯೆ ನೀಡಿ ಸೂಚನೆಗಳನ್ನು ಕೊಡುತ್ತಾರೆ ಎನ್ನುವುದು ಕಾದು ನೋಡಬೇಕಿದೆ.
ಮಾಜಿ ಸಚಿವ, ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಹಾಗೂ ಕುಮಾರಸ್ವಾಮಿ ನಡುವೆ ಮುಸುಕಿನ ಗುದ್ದಾಟ ಎಲ್ಲರಿಗೂ ಗೊತ್ತಿರುವ ಸಂಗತಿಯೇ, ದೇವೇಗೌಡರು ಸಹ ಅಸಮಾಧಾನದ ಬಗ್ಗೆ ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಆದರೆ, ಜಿ.ಟಿ.ದೇವೇಗೌಡ ಜೆಡಿಎಸ್ ಪಕ್ಷ ಬಿಡುವುದಾಗಿ ಎಲ್ಲೂ ಹೇಳಿಕೊಂಡಿಲ್ಲ. ಆದರೂ, ಅವರು ಕಾಂಗ್ರೆಸ್ ನಾಯಕರ ಜೊತೆ ಸ್ನೇಹ ಹೊಂದಿದ್ದಾರೆ. ಅವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದು ಇನ್ನೂ ನಿಗೂಢವಾಗಿದೆ.
ಪರ್ಯಾಯ ಅಭ್ಯರ್ಥಿಗಳ ಹುಡುಕಾಟ: ಈಗಾಗಲೇ ಗುಬ್ಬಿ ಶ್ರೀನಿವಾಸ್ ಹಾಗೂ ಕೋಲಾರ ಶಾಸಕ ಶ್ರೀನಿವಾಸ್ ಗೌಡ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಅವರು ಕಾಂಗ್ರೆಸ್ಗೆ ಹೋಗುವುದು ನಿಶ್ಚಿತ. ಆ ಎರಡೂ ಕ್ಷೇತ್ರಗಳಿಗೆ ಪರ್ಯಾಯ ಅಭ್ಯರ್ಥಿಗಳನ್ನು ವರಿಷ್ಠರು ಹುಡುಕಾಟ ನಡೆಸುತ್ತಿದ್ದಾರೆ. ಹೀಗಾಗಿ ವಿಧಾನಸಭೆ ಚುನಾವಣೆ ಹತ್ತಿರವಾಗುವ ವೇಳೆಗೆ ಪಕ್ಷದಲ್ಲಿ ಮತ್ತಷ್ಟು ಬದಲಾವಣೆ ಆಗಬಹುದೆಂಬ ನಿರೀಕ್ಷೆ ವರಿಷ್ಠರಲ್ಲಿದೆ.
ಇದನ್ನೂ ಓದಿ: ಕಾಂಗ್ರೆಸ್ ನಲ್ಲಿ ಸಿದ್ದು-ಡಿಕೆಶಿ ನಡುವೆ ನಿಲ್ಲದ ಶೀತಲ ಸಮರ.. ಇಬ್ಬರಿಂದಲೂ ಪ್ಲಾನ್, ಮಾಸ್ಟರ್ ಪ್ಲಾನ್