ಬೆಂಗಳೂರು: ರಾಜ್ಯಪಾಲರ ಭಾಷಣದ ನಂತರ ವಿಧಾನಸಭೆ ಕಲಾಪ ವಂದೇ ಮಾತರಂ ಮೂಲಕ ಆರಂಭವಾಯಿತು. ಬಳಿಕ ಇತ್ತೀಚೆಗೆ ನಿಧನರಾದ ಗಣ್ಯರಿಗೆ ಸದನದಲ್ಲಿ ಸಂತಾಪ ಸೂಚಿಸಲಾಯಿತು.
ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಂತಾಪ ಸೂಚಕ ನಿರ್ಣಯವನ್ನು ಸದನದಲ್ಲಿ ಮಂಡಿಸಿದರು. ಮಾಜಿ ಸಚಿವ ಡಾ. ಜೆ. ಅಲೆಕ್ಸಾಂಡರ್, ಎಂ.ಎಂ. ಸಜ್ಜನ್, ಹೆಚ್.ಬಿ ಪಾಟೀಲ್, ಖ್ಯಾತ ಗಾಯಕಿ ಲತಾ ಮಂಗೇಶ್ಕರ್, ಸಾಹಿತಿ ಚಂದ್ರಶೇಖರ್ ಪಾಟೀಲ್, ವಚನಕಾರ ಇಬ್ರಾಹಿಂ ಸುತಾರ ಹಾಗೂ ನ್ಯಾಯಮೂರ್ತಿ ಕೆ.ಎಲ್. ಮಂಜುನಾಥ್ ಅವರಿಗೆ ಸಂತಾಪ ಸೂಚಿಸಿದರು.
ಸ್ಪೀಕರ್ ಮಂಡಿಸಿದ ಸಂತಾಪ ಸೂಚಕ ನಿರ್ಣಯವನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಭಾರತ ರತ್ನ ಪಡೆದ ಲತಾ ಮಂಗೇಶ್ಕರ್ ಬಗ್ಗೆ ಎಷ್ಟು ಮಾತನಾಡಿದರೂ ಸಾಲದು. ದೇವರ ಅದ್ಭುತ ಸೃಷ್ಟಿಯಲ್ಲಿ ಅವರು ಒಬ್ಬರು. ಅವರ ಶುದ್ಧ ಕಂಠ, ಧ್ವನಿ ಅವರನ್ನ ಎತ್ತರಕ್ಕೆ ಕರೆದೊಯ್ದಿದೆ. ಒಮ್ಮೆ ಲತಾ ಮಂಗೇಶ್ಕರ್ ಹಾಡನ್ನ ಕೇಳಿದ್ರೆ ಸದಾಕಾಲ ಉಳಿಯುತ್ತಿತ್ತು. ಮತ್ತೊಮ್ಮೆ ಅವರು ಹುಟ್ಟಿ ಬರಲಿ ಎನ್ನುವ ಆಶಯ ಇದೆ. ಆದರೆ ಅದು ಸಾಧ್ಯವಿಲ್ಲ ಎಂದರು.
ಮಾಜಿ ಸಚಿವ ಡಾ. ಜೆ. ಅಲೆಗ್ಸಾಂಡರ್ ಅಪರೂಪದ ರಾಜಕಾರಣಿ. ಯಾವುದೇ ಹುದ್ದೆಯಲ್ಲಿ ಇದ್ದರೂ ಜನರಿಗೆ ಅನುಕೂಲ ಮಾಡಿಕೊಟ್ಟ ಅಧಿಕಾರಿಯಾಗಿದ್ದರು. ಅಧಿಕಾರದಲ್ಲಿದ್ದಾಗ ನ್ಯಾಯ ಸಮ್ಮತವಾದ ಆಡಳಿತ ನೀಡಿದ್ದರು. ನಿವೃತ್ತಿಯಾದ ಬಳಿಕ ರಾಜಕಾರಣದಲ್ಲೂ ಯಶಸ್ವಿಯಾದರು. ನಿವೃತ್ತಿ ನಂತರ ಎಲ್ಲರಿಗೂ ಬೇಕಾದ ವ್ಯಕ್ತಿಯಾಗಿದ್ದರು. ಉದ್ಯಮದ ಮೇಲೆ ಹೆಚ್ಚು ಆಸಕ್ತಿ ಇತ್ತು. ನಿವೃತ್ತಿ ಬಳಿಕ ರಾಜಕಾರಣಕ್ಕೆ ಬಂದು ಯಶಸ್ವಿಯಾಗಿದರು. ಅಧಿಕಾರಿಗಳು ರಾಜಕಾರಣದಲ್ಲಿ ಯಶಸ್ವಿ ಆಗೋದು ಕಡಿಮೆ. ಎಸ್.ಎಂ.ಕೃಷ್ಣಾ ಅವರ ಅವಧಿಯಲ್ಲಿ ಪ್ರವಾಸೋದ್ಯಮ ಸಚಿವರಾಗಿದ್ದರು ಎಂದು ಹೇಳಿದರು.
ಇದನ್ನೂ ಓದಿ: ರಾಜ್ಯಪಾಲರ ಭಾಷಣದ ಮೂಲಕ ಸರ್ಕಾರ ರಾಜ್ಯದ ಜನರ ದಿಕ್ಕು ತಪ್ಪಿಸುವ ಕಾರ್ಯ ಮಾಡಿದೆ : ಸಿದ್ದರಾಮಯ್ಯ
ಇನ್ನೂ ಮಾಜಿ ಸಂಸದ ಹೆಚ್.ಬಿ ಪಾಟೀಲ್ ಬಗ್ಗೆ ಮಾತನಾಡಿದ ಸಿಎಂ, ಅವರು ಸಜ್ಜನ ರಾಜಕಾರಣಿ ಆಗಿದ್ರು. ಸಹಕಾರಿ ರಂಗದಲ್ಲಿ ದೊಡ್ಡ ಕೆಲಸ ಮಾಡಿದ್ರು. ಬಾಗಲಕೋಟೆ ಟೆಕ್ಸ್‌ಟೈಲ್ ತೆಗೆದು ಉದ್ಯೋಗ ನೀಡುವ ಕೆಲಸ ಮಾಡಿದ್ರು ಎಂದು ಹೇಳಿದರು.
ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ್ ಅವರು ಬಹುಕಾಲ ಧಾರವಾಡದಲ್ಲಿ ಕಳೆದವರು. ಕನ್ನಡದ ಪ್ರಭಾವ ಎಷ್ಟಿತ್ತು ಎಂದ್ರೆ. ಬೇರೆ ಬೇರೆ ದೇಶಕ್ಕೆ ಹೋಗಿ ಬಂದು ಇಂಗ್ಲಿಷ್ ಕಲಿತು, ಇಲ್ಲಿ ಪ್ರಬಂಧ ಮಂಡಿಸಿ ಪ್ರಶಸ್ತಿ ಪಡೆದಿದ್ರು. ಆದರೆ, ಕನ್ನಡದ ಬಗ್ಗೆಯೂ ಅಪಾರವಾದ ಕಾಳಜಿ ಇದ್ದು, ಕನ್ನಡ ಸಾಹಿತ್ಯ ರಚನೆ ವಿಭಿನ್ನವಾಗಿತ್ತು. ಅವರ ಜೊತೆ ಅನೇಕ ಬಾರಿ ಮಾತನಾಡಿದ್ದೆ. ನಮ್ಮ ತಂದೆಯವರ ಜೊತೆ ಅವರ ಬಹಳಷ್ಟು ಒಡನಾಟವಿತ್ತು. ವಿಚಾರಧಾರೆ ವಿಚಾರದಲ್ಲಿ ಸಾಹಿತಿಗಳ ಜೊತೆಯಲ್ಲೇ ತಮ್ಮದೇ ನಿಲುವಿನಲ್ಲಿ ನಿಂತವರು ಎಂದರು.
1980 - 85ರಲ್ಲಿ ರಾಜಕಾರಣಕ್ಕೆ ಬರಲು ಸಿದ್ದರಾಗಿದ್ರು. ಎಮರ್ಜೆನ್ಸಿ ಸಂದರ್ಭದಲ್ಲಿ ಜೈಲಿಗೆ ಹೋದ ಸಾಹಿತಿ ಅವರಾಗಿದ್ದಾರೆ. ಕನ್ನಡದ ಮೇಲಿನ ಅಪಾರ ಕಾಳಜಿಯಿಂದ ರಾಜಕಾರಣಕ್ಕೆ ಬರಲಿಲ್ಲ. ಅವರ ನೆನಪಿನಾರ್ಥಕ್ಕೆ ಅವರ ಹೆಸರಿಗೆ ತಕ್ಕಂತೆ ಕಾರ್ಯಕ್ರಮ ಮಾಡಲು ನಮ್ಮ ಸರ್ಕಾರ ನಿರ್ಧಾರ ಮಾಡಲಿದೆ ಎಂದು ಹೇಳಿದರು.
ಇಬ್ರಾಹಿಂ ಸುತಾರ ಕರ್ನಾಟಕದ ಸಂತರ ಧ್ವನಿ: ಇಬ್ರಾಹಿಂ ಸುತಾರ ಅವರು, ಒಂದಲ್ಲಾ ಒಂದು ರೀತಿಯಲ್ಲಿ ಎಲ್ಲರೂ ಅವರನ್ನು ನೋಡಿರ್ತಾರೆ. ಅವರನ್ನು ನೋಡಿದರೆ ಸಂತ ಶಿಶುನಾಳ ಷರೀಫರು ನೆನಪಿಗೆ ಬರುತ್ತಾರೆ. ಅವರ ಅಪಾರ ಜ್ಞಾನವೇ ಅವರ ಶಕ್ತಿ. ಭಗವದ್ಗೀತೆ, ಕುರಾನ್ ಎಲ್ಲದರ ಬಗ್ಗೆ ತಿಳಿದುಕೊಂಡಿದ್ರು. ಕರ್ನಾಟಕದ ಸಂತರ ಧ್ವನಿಯಾಗಿದ್ರು ಎಂದು ಸಿಎಂ ಬಣ್ಣಿಸಿದರು.
ನಂತರ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆ.ಆರ್.ರಮೇಶ್ ಕುಮಾರ್, ಯು.ಟಿ.ಖಾದರ್, ಶಾಸಕ ಎ.ಎಸ್.ನಡಹಳ್ಳಿ, ಸಚಿವರಾದ ಜೆ.ಸಿ.ಮಾಧುಸ್ವಾಮಿ, ಗೋವಿಂದ ಕಾರಜೋಳ ಮತ್ತಿತರರು ಸಂತಾಪ ನಿರ್ಣಯದ ಮೇಲೆ ಮಾತನಾಡಿದರು.
ಸಂತಾಪ ಸೂಚನೆಗೆ ಸೀಮಿತವಾದ ಪರಿಷತ್ ಕಲಾಪ: ವಿಧಾನ ಪರಿಷತ್ ಕಲಾಪ ಕೇವಲ ಸಂತಾಪ ಸೂಚನೆಗೆ ಮಾತ್ರ ಸೀಮಿತವಾಯಿತು. ಜಂಟಿಸದನ ಉದ್ದೇಶಿಸಿ ರಾಜ್ಯಪಾಲರ ಭಾಷಣದ ನಂತರ ವಿಧಾನಪರಿಷತ್ ಕಲಾಪ ಆರಂಭವಾಯಿತು. ಕಪ್ಪು ಪಟ್ಟಿ ಧರಿಸಿ ಕಾಂಗ್ರೆಸ್ ಸದಸ್ಯರು ಅಧಿವೇಶನದಲ್ಲಿ ಪಾಲ್ಗೊಂಡರು.
ಕಾಂಗ್ರೆಸ್ ಸದಸ್ಯ ಸಿ.ಎಂ. ಇಬ್ರಾಹಿಂ ಸದನಕ್ಕೆ ಗೈರು ಹಾಜರಾಗಿದ್ದರು. ವಿಪಕ್ಷ ನಾಯಕ ಸ್ಥಾನ ಸಿಗದೇ ಅಸಮಾಧಾನಗೊಂಡಿರುವ ಇಬ್ರಾಹಿಂ ಬರದೇ ಬೇಸರ ವ್ಯಕ್ತಪಡಿಸಿದರು. ಸಂತಾಪ ಸೂಚನೆ ಮುಕ್ತಾಯದ ಬಳಿಕ ಸಭಾಪತಿಗಳು ಕಲಾಪವನ್ನು ನಾಳೆ ಬೆಳಗ್ಗೆ 10.30 ಕ್ಕೆ ಮುಂದೂಡಿದರು.