ಬೆಂಗಳೂರು : ಕೇಂದ್ರದ ಮಾಜಿ ಸಚಿವ ಎಂ ವಿ ರಾಜಶೇಖರನ್ ನಿಧನಕ್ಕೆ ವಿಧಾನಸಭೆ ಪ್ರತಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಬಸವನಗುಡಿಯ ರಾಜಶೇಖರ ನಿವಾಸದಲ್ಲಿ ಅಂತಿಮ ದರ್ಶನ ಪಡೆದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೇಂದ್ರದ ಮಾಜಿ ಸಚಿವ ರಾಜಶೇಖರನ್ ನಿಧನ ನನಗೆ ತುಂಬಾ ನೋವು ತಂದಿದೆ. ಹಲವು ವರ್ಷಗಳಿಂದಲೂ ಅವರ ಪರಿಚಯವಿತ್ತು. ಎಸ್.ನಿಜಲಿಂಗಪ್ಪನವರ ಅಳಿಯ ಅಂತ ಅಲ್ಲ. ಅವರೇ ಸ್ವತಃ ಇಮೇಜ್ ಬೆಳೆಸಿಕೊಂಡಿದ್ದರು. ಉತ್ತರಹಳ್ಳಿ ಕ್ಷೇತ್ರದಿಂದಲೂ ಸ್ಪರ್ಧಿಸಿದ್ದರು. ಅವರು ಜನಾನುರಾಗಿ ನಾಯಕರಾಗಿದ್ದರು. ನಾನು ಜನತಾ ದಳದಲ್ಲಿದ್ದಾಗಲೂ ಸಾಕಷ್ಟು ಸಲಹೆಗಳನ್ನ ನೀಡ್ತಿದ್ರು. ತುಂಬ ವಿಶ್ವಾಸದಿಂದ ನೋಡಿಕೊಳ್ತಿದ್ರು ಎಂದರು.
ಎಂಬಿ ಪಾಟೀಲ್ ಸಂತಾಪ : ಮಾಜಿ ಸಚಿವ ಎಂ ಬಿ ಪಾಟೀಲ್ ಮಾತನಾಡಿ, ಹಿರಿಯ ಹಾಗೂ ಸಜ್ಜನ, ಮೇಧಾವಿ ರಾಜಕಾರಣಿ ಅವರಾಗಿದ್ದರು. ರಾಜ್ಯವನ್ನು ನಾಲ್ಕೂ ವಿಭಾಗದಿಂದ ಪ್ರತಿನಿಧಿಸಿ ಕೇಂದ್ರ ಸಚಿವರಾಗಿ ಮೌಲ್ಯಾಧಾರಿತ ರಾಜಕಾರಣ ಮಾಡಿದ್ದರು. ಅವರ ಅಗಲಿಕೆಯಿಂದ ಮತ್ತೊಬ್ಬ ಹಿರಿಯರನ್ನು ಕಳೆದುಕೊಂಡಿದ್ದೇವೆ. ಅವರ ಜೀವನ ಆದರ್ಶಮಯವಾಗಿತ್ತು. ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ನೀಡಲಿ ಎಂದರು.
ಶಂಕರ್ ಬಿದರಿ ಸಂತಾಪ : ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಶಂಕರ್ ಬಿದರಿ ಮಾತನಾಡಿ, ಸಜ್ಜನ, ಸರಳ ಪ್ರಾಮಾಣಿಕರಾಗಿದ್ದ ರಾಜಶೇಖರನ್ ಅವರ ನಿಧನದಿಂದ ಪ್ರಾಮಾಣಿಕ ರಾಜಕಾರಣದ ಮಹತ್ವದ ಕೊಂಡಿ ಕಳಚಿದೆ. ರಾಜ್ಯ, ದೇಶಕ್ಕೆ ಅವರು ನೀಡಿದ ಕೊಡುಗೆ ಅನನ್ಯ. ನಮ್ಮ ಭಾಗದ ಜನರಿಗೆ ವಿಶೇಷ ಉಪಕಾರ ಮಾಡಿದ್ದರು. 2005ರಲ್ಲಿ ನಾನು ಅಡಿಶನಲ್ ಡಿಜಿ ಆಗಿದ್ದಾಗ ಅವರನ್ನು ಭೇಟಿಯಾಗಿದ್ದೆ. ಹಿಪ್ಪರಗಿ ಬ್ಯಾರೇಜ್ ಕಾಮಗಾರಿಯನ್ನು ದೇವರಾಜ್ ಅರಸು ಆರಂಭಿಸಿದ್ದರು. 30 ವರ್ಷ ಪ್ರಗತಿ ಕಂಡಿರಲಿಲ್ಲ. ಅಂದು ಕೇಂದ್ರ ಸಚಿವರಾಗಿದ್ದ ರಾಜಶೇಖರನ್ಗೆ ಮನವಿ ಮಾಡಿದ್ದೆವು. 710 ಕೋಟಿ ರೂ. ಹಣ ನೀಡಿ ಯೋಜನೆ ಮಾಡಿಕೊಟ್ಟರು. ಅಥಣಿ, ಜಮಖಂಡಿಗೆ ಕುಡಿಯುವ ನೀರಿನ ಅವಶ್ಯಕತೆ ಪೂರೈಸಿದ್ದರು ಎಂದರು.