ಬೆಂಗಳೂರು: ಕಡ್ಡಾಯ ವರ್ಗಾವಣೆ ಸಂಬಂಧ ಸತತ ಒಂದೂವರೆ ತಿಂಗಳು ಶಿಕ್ಷಕರು ಪ್ರತಿಭಟನೆ ನಡೆಸಿದ್ದರು. ಕಡ್ಡಾಯ ವರ್ಗಾವಣೆ ಅವೈಜ್ಞಾನಿಕವಾಗಿದ್ದು, ಹಿರಿಯ ಶಿಕ್ಷಕರಿಗೆ ಇದರಿಂದ ವಿನಾಯಿತಿ ಕೊಡಿ ಅಂತ ಪ್ರತಿಭಟನೆ ನಡೆಸಿ ಮನವಿ ಮಾಡಿದ್ದರು. ಈಗ ಕಡ್ಡಾಯ ವರ್ಗಾವಣೆ ವಿನಾಯಿತಿಗೆ ಶಿಕ್ಷಣ ಇಲಾಖೆ ಮುಂದಾಗಿದೆ.
ಈ ಸಂಬಂಧ ಇಂದು ಸುದ್ದಿಗೋಷ್ಠಿ ನಡೆಸಿ ಮಾತಾನಾಡಿದ ಶಿಕ್ಷಣ ಸಚಿವ ಸುರೇಶ್, 50 ವರ್ಷ ದಾಟಿದ ಎಲ್ಲ ಮಹಿಳಾ ಶಿಕ್ಷಕರಿಗೆ ಹಾಗೂ 55 ವರ್ಷ ದಾಟಿದ ಪುರುಷ ಶಿಕ್ಷಕರಿಗೆ ಕಡ್ಡಾಯ ವರ್ಗಾವಣೆಯಿಂದ ವಿನಾಯಿತಿ ನೀಡಲಾಗಿದೆ ಅಂತ ತಿಳಿಸಿದರು.
ಇವರಿಗಷ್ಟೇ ಅಲ್ಲದೇ 'ಸಿ' ವಲಯದಲ್ಲಿ 15 ವರ್ಷ ಒಟ್ಟಿಗೆ ಕೆಲಸ ಮಾಡಿದ್ದರೆ, ಅಥವಾ ಆಗಾಗ ಕೆಲಸ ಮಾಡಿದ್ದರೂ ಕೂಡ ಅಂತಹವರಿಗೆ ಸಿ ವಲಯದಿಂದ ವಿನಾಯಿತಿ ನೀಡಲಾಗಿದೆ. ಜೊತೆಗೆ ಬುದ್ದಿಮಾಂದ್ಯ ಮಕ್ಕಳು, ವಿಶೇಷ ಚೇತನ ಮಕ್ಕಳಿರೋ ಶಿಕ್ಷಕರಿಗೂ ವರ್ಗಾವಣೆಗೆ ವಿನಾಯಿತಿ ಕೊಡೋ ಚಿಂತನೆ ನಡೆಯುತ್ತಿದೆ ಅಂತ ತಿಳಿಸಿದರು.
ಕೋರಿಕೆ ವರ್ಗಾವಣೆಯಲ್ಲಿ ವಿಚ್ಚೇದನ ಪಡೆದಿರೋ ಶಿಕ್ಷಕರಿಗೆ ವಿನಾಯಿತಿ ಇತ್ತು. ಆದರೆ, ಕಡ್ಡಾಯ ವರ್ಗಾವಣೆಯಲ್ಲಿ ವಿನಾಯಿತಿ ಇರಲಿಲ್ಲ. ಆದರೆ ಈಗ ಅವರಿಗೂ ವಿನಾಯಿತಿ ಕೊಡಬೇಕೆಂಬ ಉದ್ದೇಶದಿಂದ ತಿದ್ದಪಡಿ ತರಲು ಶಿಕ್ಷಣ ಸಚಿವರು ಮುಂದಾಗಿದ್ದಾರೆ.