ಬೆಂಗಳೂರು: ರಾಷ್ಟೀಯ ವಿಪತ್ತು ನಿರ್ವಹಣಾ ಕಾಯ್ದೆ ಉಲ್ಲಂಘನೆ ಹಾಗೂ ಸಾರ್ವಜನಿಕವಾಗಿ ಜನರಿಗೆ ಸುಳ್ಳು ಹೇಳಿ ದಾರಿ ತಪ್ಪಿಸುವ ಮಾಹಿತಿ ನೀಡಿದ ಆರೋಪದಡಿ ಬಿಜೆಪಿ ರಾಜ್ಯಾಧಕ್ಷ ನಳೀನ್ ಕುಮಾರ್ ಕಟೀಲ್ ವಿರುದ್ಧ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ನಳಿನ್ ಕುಮಾರ್ ಮಾಡಿದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ತೆಗೆದುಕೊಂಡ ಕ್ರಮಗಳಿಂದಲೇ ಕೊರೊನಾ ವೈರಸ್ನಿಂದ ನಾವೆಲ್ಲರೂ ಜೀವಂತವಾಗಿದ್ದೇವೆ ಎಂದು ಹೇಳಿಕೆ ನೀಡಿದ್ದರು.
ಹಾಗಾದರೆ ಸೋಂಕಿನಿಂದ ದೇಶದಲ್ಲಿ ಸಾವಿರಾರು ಜನರು ಬಲಿಯಾಗಿದ್ದಾರೆ. ಇವರ ಬಗ್ಗೆ ಪ್ರಧಾನಿ ಅವರು ಮುಂಜಾಗೃತಾ ಕ್ರಮಗಳನ್ನು ಏಕೆ ಕೈಗೊಂಡಿಲ್ಲ ಎಂಬುದನ್ನು ದೂರಿನಲ್ಲಿ ಪ್ರಶ್ನಿಸಿದ್ದಾರೆ.
ಸುಳ್ಳು ಹೇಳಿಕೆ ನೀಡುವ ಮೂಲಕ ರಾಷ್ಟ್ರದೆಲ್ಲೆಡೆ ಜಾರಿಯಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಹೀಗಾಗಿ ನಳೀನ್ ಕುಮಾರ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಡಿಸೋಜಾ ಅವರು ವಿಧಾನಸೌಧ ಠಾಣೆಯಲ್ಲಿ ದೂರು ನೀಡಿದ್ದಾರೆ.