ಬೆಂಗಳೂರು: ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಗೆ ಇನ್ನು ಸಾಕಷ್ಟು ತಿಂಗಳು ಇರುವಾಗಲೇ ಬಸವಕಲ್ಯಾಣ ವಿಧಾನಸಭೆ ಕ್ಷೇತ್ರದಲ್ಲಿ ಟಿಕೆಟ್ ಗಿಟ್ಟಿಸಲು ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಬಣದ ಅಭ್ಯರ್ಥಿಗಳ ಬಡುವೆ ತೀವ್ರ ಪೈಪೋಟಿ ಆರಂಭವಾಗಿದೆ..
ಬೀದರ್ ಜಿಲ್ಲೆಯ ಬಸವಕಲ್ಯಾಣ ವಿಧಾನಸಭೆ ಕ್ಷೇತ್ರಕ್ಕೆ 2018ರ ವಿಧಾನಸಭೆ ಚುನಾವಣೆಯಲ್ಲಿ ಶಾಸಕರಾಗಿ ಕಾಂಗ್ರೆಸ್ನಿಂದ ಆಯ್ಕೆಯಾಗಿದ್ದ ನಾರಾಯಣರಾವ್ ಕೋವಿಡ್ನಿಂದ ನಿಧನರಾಗಿದ್ದರು. ಇದರಿಂದ ತೆರವಾಗಿದ್ದ ಕ್ಷೇತ್ರಕ್ಕೆ 2021ರಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯ ಶರಣು ಸಲಗಾರ ಗೆಲುವು ಸಾಧಿಸಿದ್ದರು. ಸಾಕಷ್ಟು ಸ್ಥಳೀಯ ಅಭ್ಯರ್ಥಿಗಳು ಹಾಗೂ ಹೊರಗಿನವರ ಪೈಪೋಟಿಯ ನಡುವೆ ಸಿದ್ದರಾಮಯ್ಯ ತಮ್ಮ ಪ್ರಾಬಲ್ಯ ಮೆರೆದು ನಾರಾಯಣರಾವ್ ಪತ್ನಿ ಮಾಲಾ ಅವರಿಗೆ ಟಿಕೆಟ್ ಕೊಡಿಸುವಲ್ಲಿ ಸಫಲವಾಗಿದ್ದರು.
ಆದರೆ, ಅನುಕಂಪದ ಅಲೆ ಕೆಲಸ ಮಾಡಲಿಲ್ಲ. 20,629 ಮತಗಳ ಭರ್ಜರಿ ಅಂತರದಿಂದ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದರು. ಅಂದು ಮಾಜಿ ಎಮ್ಎಲ್ಸಿ ವಿಜಯ್ ಸಿಂಗ್ ಟಿಕೆಟ್ಗಾಗಿ ಸಾಕಷ್ಟು ಪ್ರಯತ್ನಿಸಿದ್ದರು. ಮಾಜಿ ಸಿಎಂ ಎನ್ ಧರ್ಮಸಿಂಗ್ ಅವರ ಎರಡನೇ ಪುತ್ರರಾಗಿರುವ ವಿಜಯ್ ಸಿಂಗ್ ಟಿಕೆಟ್ಗೆ ಪೈಪೋಟಿ ನಡೆಸಿದ್ದರು. ಇವರ ಬೆನ್ನಿಗೆ ಕಾಂಗ್ರೆಸ್ ಪ್ರಭಾವಿ ನಾಯಕ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಿಂತಿದ್ದರು. ಆದರೆ ಟಿಕೆಟ್ ಕೊಡಿಸಲು ಸಾಧ್ಯವಾಗಿರಲಿಲ್ಲ.
ಈ ಸಾರಿ ಪೈಪೋಟಿ : ಅನುಕಂಪಕ್ಕೆ ಜನ ಉಪಚುನಾವಣೆಯಲ್ಲೇ ಬೆಲೆ ಕೊಡದ ಮೇಲೆ ಮುಖ್ಯ ಚುನಾವಣೆಯಲ್ಲಿ ನೀಡಲು ಸಾಧ್ಯವೇ ಇಲ್ಲ. ಆದ್ದರಿಂದ ಮುಂಬರುವ 2023ರ ವಿಧಾನಸಭೆ ಚುನಾವಣೆಯಲ್ಲಿ ನಾರಾಯಣರಾವ್ ಕುಟುಂಬಕ್ಕೆ ಟಿಕೆಟ್ ಸಿಗಲ್ಲ. ಈ ಮಧ್ಯೆ ಡಿಕೆಶಿ ಬೆಂಬಲಿಗರಾಗಿ ವಿಜಯ್ ಸಿಂಗ್ ಪೈಪೋಟಿ ಮುಂದುವರಿಸಲಿದ್ದಾರೆ. ಇವರ ಜತೆ ಸ್ಥಳೀಯವಾಗಿ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿರುವ 8ಕ್ಕೂ ಹೆಚ್ಚು ಮಂದಿ ನಾಯಕರು ಟಿಕೆಟ್ಗಾಗಿ ಪಕ್ಷದ ನಾಯಕರ ಮೇಲೆ ಒತ್ತಡ ಹೇರುತ್ತಿದ್ದಾರೆ. ಇವರ ಮಧ್ಯೆ ಇದೀಗ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಗುಂಪಿನಲ್ಲಿ ಗುರುತಿಸಿಕೊಂಡಿರುವ ಹಿರಿಯ ರಾಜಕಾರಣಿ ಹಾಗೂ ಮಾಜಿ ಸಚಿವ ಪಿಜಿಆರ್ ಸಿಂಧ್ಯಾ ಹೆಸರು ಸಹ ಬಸವಕಲ್ಯಾಣ ಅಭ್ಯರ್ಥಿ ಆಕಾಂಕ್ಷಿಗಳ ಪಟ್ಟಿಯಲ್ಲಿ ಕೇಳಿ ಬರುತ್ತಿದೆ.
ಕಾಂಗ್ರೆಸ್ ಪಕ್ಷದ ಭದ್ರಕೋಟೆಗಳಲ್ಲಿ ಒಂದಾಗಿದ್ದ ಬಸವಕಲ್ಯಾಣ ಇದೀಗ ಬಿಜೆಪಿ ಪಾಲಾಗಿದೆ. ಮರಾಠಾ ಸಮುದಾಯದ ಮತದಾರರು ಹೆಚ್ಚಾಗಿರುವ ಹಾಗೂ ಒಂದು ಹಂತದಲ್ಲಿ ನಿರ್ಣಾಯಕರೂ ಆಗಿರುವ ಸಂದರ್ಭದಲ್ಲಿ ಸಿಂಧ್ಯಾ ಸೂಕ್ತ ಅಭ್ಯರ್ಥಿ ಎನ್ನಲಾಗುತ್ತಿದೆ. ಆದರೆ, ಸ್ಥಳೀಯವಾಗಿ ಉತ್ತಮ ಹೆಸರು ಹೊಂದಿದ್ದು, ಪಕ್ಕದ ಜಿಲ್ಲೆಯವರಾದ ವಿಜಯ್ ಸಿಂಗ್ ಗೆಲುವಿಗೆ ಅಗತ್ಯವಿರುವ ಎಲ್ಲ ಸಾಮರ್ಥ್ಯ ಹೊಂದಿದ್ದಾರೆ ಎನ್ನಲಾಗುತ್ತಿದೆ. ಇವರಿಬ್ಬರೂ ಹೊರಗಿನವರು, ಇದರಿಂದ ಜಿಲ್ಲೆಯವರಿಗೆ ಅವಕಾಶ ನೀಡಿ ಎಂದು ಕೆಲವರು ಒತ್ತಡ ಹೇರುತ್ತಿದ್ದಾರೆ.
ಮನವೊಲಿಸುವ ಪ್ರಯತ್ನದಲ್ಲಿ ಆಕಾಂಕ್ಷಿಗಳು : ಆದರೆ ಮುಂದಿನ ವಿಧಾನಸಭೆ ಚುನಾವಣೆ ವೇಳೆಗೆ ಅಳೆದು ತೂಗಿ ನೋಡಿದರೂ, ವಿಜಯ್ ಸಿಂಗ್ ಹಾಗೂ ಪಿಜಿಆರ್ ಸಿಂಧ್ಯಾ ನಡುವೆ ಟಿಕೆಟ್ಗಾಗಿ ಪೈಪೋಟಿ ನಡೆಯುವುದು ಶತಸಿದ್ಧ. ಈ ಇಬ್ಬರೂ ರಾಜ್ಯ ನಾಯಕರ ಮನವೊಲಿಸಲು ಈಗಾಗಲೇ ಬೆಂಗಳೂರಿನಲ್ಲಿ ತಮ್ಮ ಪ್ರಯತ್ನ ಆರಂಭಿಸಿದ್ದಾರೆ.
ಅಭ್ಯರ್ಥಿಗಳಿಗಾಗಿ ನಾಯಕರ ನಡುವೆ ಪೈಪೋಟಿ : ವಿಜಯ್ ಸಿಂಗ್ ಪರ ಡಿಕೆಶಿ ಹಾಗೂ ಸಿಂಧ್ಯಾ ಪರ ಸಿದ್ದರಾಮಯ್ಯ ಪ್ರಭಾವ ಬೀರುವುದು ಅನಿವಾರ್ಯವಾಗಲಿದೆ. ಈಗಾಗಲೇ ತಮ್ಮ ನೆಚ್ಚಿನ ನಾಯಕರ ಮನೆಗೆ ಒಂದೆರಡು ಸಾರಿ ಭೇಟಿ ನೀಡಿ ತಮ್ಮ ಅಭಿಲಾಷೆಯನ್ನೂ ಇವರು ವ್ಯಕ್ತಪಡಿಸಿದ್ದಾರೆ. ಹಿಂದೆ ಸಿದ್ದರಾಮಯ್ಯ ಒತ್ತಡಕ್ಕೆ ಮಣಿದು ನಾರಾಯಣರಾವ್ ಪತ್ನಿಗೆ ಟಿಕೆಟ್ ನೀಡಿ ಕ್ಷೇತ್ರ ಕೈತಪ್ಪಿದೆ.
ಇದೀಗ ಮರುವಶಪಡಿಸಿಕೊಳ್ಳಲು ಸೂಕ್ತ ಅಭ್ಯರ್ಥಿ ಆಯ್ಕೆ ಆಗಬೇಕು ಎಂದು ಡಿಕೆಶಿ ಪಟ್ಟು ಹಿಡಿಯುವ ಸಾಧ್ಯತೆ ಇದ್ದು, ಹೈಕಮಾಂಡ್ ಬಳಿ ತಮ್ಮ ಪ್ರಭಾವ ಬಳಸುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ. ಒಟ್ಟಾರೆ ಬಸವಕಲ್ಯಾಣ ಕ್ಷೇತ್ರ ಅಭ್ಯರ್ಥಿ ಆಯ್ಕೆ ಈ ಮೂಲಕ ಕಗ್ಗಂಟಾಗುವ ಸಾಧ್ಯತೆ ಇದೆ. ಇದಕ್ಕೆ ಯಾವ ವಿಧದಲ್ಲಿ ಹೈಕಮಾಂಡ್ ನಾಯಕರು ಹಾಗೂ ರಾಜ್ಯ ನಾಯಕರು ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.
ಒಮ್ಮತಕ್ಕೆ ಮಣೆ : ಬೀದರ್ ಭಾಗದ ನಾಯಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಈ ವಿಚಾರವಾಗಿ ಮಾತನಾಡಿದ್ದು, ಬಸವಕಲ್ಯಾಣ ಕ್ಷೇತ್ರದಲ್ಲಿ ಟಿಕೆಟ್ಗೆ ಪೈಪೋಟಿ ಇರುವುದು ನಿಜ. ವಿಜಯ್ ಸಿಂಗ್ ಮೊದಲಿನಿಂದಲೂ ಟಿಕೆಟ್ ಆಕಾಂಕ್ಷಿ ಆಗಿದ್ದಾರೆ. ಕಳೆದ ಸಾರಿಯೂ ಟಿಕೆಟ್ ಕೇಳಿದ್ದರು. ಇದೀಗ ಪಿ.ಜಿ.ಆರ್. ಸಿಂಧ್ಯಾ ಹೆಸರು ಕೇಳಿ ಬರುತ್ತಿರುವುದೂ ನಿಜ.
ಮರಾಠರ ಸಂಖ್ಯೆ ಹೆಚ್ಚಿರುವುದರಿಂದ ಇದನ್ನೂ ಅಲ್ಲಗಳೆಯಲಾಗದು. ಇವರಲ್ಲದೇ ಇನ್ನೂ ಆರೆಂಟು ಮಂದಿ ಸ್ಥಳೀಯ ಯುವ ಮುಖಂಡರು ಟಿಕೆಟ್ ಕೇಳುತ್ತಿದ್ದಾರೆ. ಆದರೆ ಸೂಕ್ತ ಸಮಯಕ್ಕೆ, ಸೂಕ್ತ ವ್ಯಕ್ತಿಯನ್ನು ಪಕ್ಷ ಆಯ್ಕೆ ಮಾಡಲಿದೆ ಹಾಗೂ ಉಳಿದವರ ಮನವೊಲಿಸಲಿದೆ. ಪಕ್ಷಕ್ಕೆ ಮತ್ತೆ ಬಸವಕಲ್ಯಾಣದಲ್ಲಿ ಗೆಲುವು ಬೇಕಾಗಿದೆ. ಇದರಿಂದ ಅಳೆದು-ತೂಗಿ ಸೂಕ್ತ ಅಭ್ಯರ್ಥಿ ಆಯ್ಕೆ ಮಾಡುತ್ತೇವೆ. ಜಿಲ್ಲೆಯ ಕಾಂಗ್ರೆಸ್ ನಾಯಕನಾಗಿ ನಾನೂ ಒಳಗೊಂಡಂತೆ ಸೂಕ್ತ ಅಭ್ಯರ್ಥಿ ಆಯ್ಕೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ : ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ರಾಹುಲ್ ಗಾಂಧಿ