ಬೆಂಗಳೂರು : ರಾಜ್ಯದಲ್ಲಿ ಕೊರೊನಾ 3ನೇ ಅಲೆಯಲ್ಲಿ ಸೋಂಕಿತರ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಆದರೆ, ಕೋವಿಡ್ 3ನೇ ಅಲೆ ಬಗ್ಗೆ ಆತಂಕ ಬೇಡ. 2ನೇ ಅಲೆಯ ಡೆಲ್ಟಾದಷ್ಟು ಅಪಾಯಕಾರಿ ಅಲ್ಲವೇ ಅಲ್ಲ ಅಂತಿದೆ ಅಂಕಿ-ಅಂಶಗಳು.
![comparison of the first, second, and third covid wave in Karnataka](https://etvbharatimages.akamaized.net/etvbharat/prod-images/14259421_188_14259421_1642919441194.png)
2 ಅಲೆಗಳಿಗಿಂತ ಪಾಸಿಟಿವಿಟಿ ದರ 3ನೇ ಅಲೆಯಲ್ಲಿ ಏರಿಕೆಯಾದರೂ, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ, ಮರಣ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ. ಆದರೆ, ಇದನ್ನೇ ಬಂಡವಾಳ ಮಾಡಿಕೊಳ್ಳದೇ, ನಿರ್ಲಕ್ಷ್ಯವಹಿಸದೇ ಜನರು ಮುಂಜಗ್ರಾತಾ ಕ್ರಮಗಳನ್ನ ಪಾಲಿಸಲೇಬೇಕು. ಇದರಿಂದ ಶೀಘ್ರ 3ನೇ ಅಲೆಯಿಂದ ಹೊರ ಬರುವುದು ಜನರ ಕೈಯಲ್ಲೇ ಇದೆ ಅಂತಾರೆ ತಜ್ಞರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಕೊರೊನಾ ಮೊದಲ ಅಲೆ, ಎರಡನೇ ಅಲೆ ಹಾಗೂ ಮೂರನೇ ಅಲೆಯ ಸಂಪೂರ್ಣ ಚಿತ್ರಣವನ್ನ ಆರೋಗ್ಯ ಇಲಾಖೆಯ ವಾರ್ ರೂಂ ತಂಡ ನೀಡಿದೆ. ಯಾವ್ಯಾವ ಅಲೆ ಯಾವಾಗ ಶುರುವಾಯ್ತು?. ಕೇಸ್‌ಗಳು ಪೀಕ್ ಹಂತ ತಲುಪಿದ್ದು ಯಾವಾಗ?. ಯಾವ ಅಲೆಯಲ್ಲಿ ಎಷ್ಟು ಮಂದಿ ಆಸ್ಪತ್ರೆಗೆ ದಾಖಲಾದರು?. ಎಷ್ಟು ಮಂದಿ ಹೋಂ ಐಸೋಲೇಷನ್‌ನಲ್ಲಿದ್ದರು ಎಂಬ ಅಂಶಗಳನ್ನೆಲ್ಲ ಸೇರಿಸಿ ಹೋಲಿಕೆ ಮಾಡಲಾಗಿದೆ.
ಕರ್ನಾಟಕದಲ್ಲಿ ಮೊದಲ, ಎರಡನೇ, ಮೂರನೇ ಕೊರೊನಾ ಅಲೆಯ ಹೋಲಿಕೆಯ ಚಿತ್ರಣ ಇಲ್ಲಿದೆ..
- ಕೊರೊನಾ ಮೊದಲ ಅಲೆ ಆರಂಭವಾಗಿದ್ದು 2020ರ ಮಾರ್ಚ್ 20ರಂದು. ಒಂದು ದಿನದಲ್ಲಿ ಪೀಕ್(ಗರಿಷ್ಠ) ಹಂತ ತಲುಪಿದ್ದು ಅಕ್ಟೋಬರ್ 7 ರಂದು. 9047 ಕೇಸ್. ಪೀಕ್ ಹಂತ ತಲುಪಿದಾಗ ದಾಖಲಾದ ಒಟ್ಟು ಸಕ್ರಿಯ ಪ್ರಕರಣ ಅಕ್ಟೋಬರ್ 10 ರಂದು 1,20,929. ಮೊದಲ ಅಲೆಯಲ್ಲಿ ಒಟ್ಟು ದಾಖಲಾದ ಸೋಂಕಿತರ ಸಂಖ್ಯೆ 9,51,251.
- ಕೊರೊನಾ ಎರಡನೇ ಅಲೆ ಆರಂಭವಾಗಿದ್ದು ಮಾರ್ಚ್ 21-2021 ರಂದು. ಒಂದು ದಿನದಲ್ಲಿ ಪೀಕ್( ಗರಿಷ್ಠ) ಹಂತ ತಲುಪಿದ್ದು ಮೇ 5 ರಂದು 50,112 ಕೇಸ್. ಪೀಕ್ ಹಂತ ತಲುಪಿದಾಗ ದಾಖಲಾದ ಒಟ್ಟು ಆ್ಯಕ್ಟಿವ್ ಕೇಸ್ ಮೇ 15 ರಂದು 6,05,494. ಎರಡನೇ ಅಲೆಯಲ್ಲಿ ಒಟ್ಟು ದಾಖಲಾದ ಸೋಂಕಿತರ ಸಂಖ್ಯೆ 20,53,661.
- ಕೊರೊನಾ ಮೂರನೇ ಅಲೆ ಆರಂಭವಾಗಿದ್ದು ಜನವರಿ 21-2022 ರಂದು. ಒಂದು ದಿನದಲ್ಲಿ ಪೀಕ್( ಗರಿಷ್ಠ) ಹಂತ ತಲುಪಿದ್ದು 47,754 ಕೇಸ್. ಪೀಕ್ ಹಂತ ತಲುಪಿದಾಗ ದಾಖಲಾದ ಒಟ್ಟು ಆ್ಯಕ್ಟಿವ್ ಕೇಸ್ 2,93,231. ಮೂರನೇ ಅಲೆಯಲ್ಲಿ ಒಟ್ಟು ದಾಖಲಾದ ಸೋಂಕಿತರ ಸಂಖ್ಯೆ ಸದ್ಯ 3,15,374 ರಷ್ಟಿದೆ.
ಅಲೆಗಳಲ್ಲಿ ಪೀಕ್ ಹಂತದಲ್ಲಿ ಆಸ್ಪತ್ರೆಗೆ ದಾಖಲು ಪ್ರಮಾಣ, ಹೋಂ ಐಸೋಲೇಷನ್, ದಾಖಲಾದ ಮರಣ, ಒಟ್ಟಾರೆ ಪಾಸಿಟಿವಿಟಿ ದರದ ಮಾಹಿತಿ ಕೂಡ ನೀಡಲಾಗಿದೆ.
ಅಲೆ | ಆಸ್ಪತ್ರೆ ದಾಖಲು | ಹೋಂ ಐಸೋಲೇಷನ್ | ಮರಣ | ಪಾಸಿಟಿವ್ ದರ |
ಮೊದಲ ಅಲೆ | 16% | 84% | 12,331 | 5.22% |
ಎರಡನೇ ಅಲೆ | 21% | 79% | 25,992 | 5.68% |
ಮೂರನೇ ಅಲೆ | 5% | 94% | 204 | 8.78% |