ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ಮಾಫಿಯಾ ನಂಟಿರುವ ಆರೋಪ ಪ್ರಕರಣ ಸಂಬಂಧ ಇದುವರೆಗೂ ಇಬ್ಬರನ್ನು ಬಂಧಿಸಲಾಗಿದೆ. ನಟಿ ರಾಗಿಣಿ ದ್ವಿವೇದಿಯನ್ನು ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಕಮೀಷನರ್ ಕಮಲ್ ಪಂತ್ ಮಾಹಿತಿ ನೀಡಿದ್ದಾರೆ.
ಈ ಕುರಿತು ಇಂದು ಮಾಧ್ಯಮಗೋಷ್ಟಿ ನಡೆಸಿದ ಅವರು, ಬಂಧಿತ ಆರೋಪಿಗಳಾದ ರವಿಶಂಕರ್ ಹಾಗೂ ರಾಹುಲ್ನನ್ನು ನ್ಯಾಯಾಲಯದಿಂದ ಅನುಮತಿ ಪಡೆದು ಪೊಲೀಸ್ ವಶಕ್ಕೆ ಪಡೆದುಕೊಂಡಿದ್ದೇವೆ. ಕಳೆದ ಒಂದು ತಿಂಗಳ ಹಿಂದಿನಿಂದಲೂ ಡ್ರಗ್ಸ್ ಬಳಸುವವರ ಮೇಲೆ ನಿಗಾ ವಹಿಸಿದ್ದೇವೆ ಎಂದು ತಿಳಿಸಿದರು.
ಸರ್ಕಾರಿ ಇಲಾಖೆಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಪಾರ್ಟಿ ಆಯೋಜಿಸಿ ಡ್ರಗ್ಸ್ ಬಳಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿತ್ತು. ಈ ಆಧಾರದ ಮೇಲೆ ರವಿಶಂಕರ್ ಎಂಬಾತನನ್ನು ಬಂಧಿಸಲಾಗಿದೆ. ಈತ ಜಯನಗರದ ಆರ್ಟಿಓ ಕಚೇರಿಯಲ್ಲಿ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ. ಈತ ನಟಿ ಸೇರಿದಂತೆ ಇನ್ನೂ ಹಲವರನ್ನು ತಾನು ಆಯೋಜನೆ ಮಾಡುತ್ತಿದ್ದ ಪಾರ್ಟಿಗಳಿಗೆ ಭಾಗಿಯಾಗಿಸಿಕೊಂಡು ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಎಂಬ ಆರೋಪದಡಿ ಈತನನ್ನು ಬಂಧಿಸಲಾಗಿದೆ ಎಂದರು.
ಈತ ನೀಡಿದ ಮಾಹಿತಿ ಮೇರೆಗೆ ನಟಿ ರಾಗಿಣಿ ಮನೆ ಮೇಲೆ ದಾಳಿ ನಡೆಸಿ ಅವರನ್ನು ವಶಕ್ಕೆ ಪಡೆದುಕೊಂಡಿದ್ದೇವೆ. ಅಲ್ಲದೇ ಪ್ರಕರಣದಲ್ಲಿ ನಟ-ನಟಿಯರು ಸೇರಿದಂತೆ ಇನ್ನೂ ಹಲವಾರು ಮಂದಿ ಭಾಗಿಯಾಗಿರುವುದು ಕಂಡುಬಂದಿದೆ. ಈ ಬಗ್ಗೆ ಹಂತ ಹಂತವಾಗಿ ಎಲ್ಲರನ್ನು ಕರೆದು ಮುಂದಿನ ದಿನಗಳಲ್ಲಿ ವಿಚಾರಣೆ ನಡೆಸುತ್ತೇವೆ ಎಂದು ಕಮಲ್ ಪಂತ್ ತಿಳಿಸಿದರು.