ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯ 40ರಷ್ಟು ಕಮಿಷನ್ ಪ್ರಕರಣ ತನಿಖೆಗೆ ಸಮಿತಿ ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ನಿವೃತ್ತ ನ್ಯಾ. ನಾಗಮೋಹನ್ ದಾಸ್ ನೇತೃತ್ವದಲ್ಲಿ ತನಿಖಾ ಸಮಿತಿ ರಚಿಸಲಾಗಿದೆ. ಆ ಮೂಲಕ ಸರ್ಕಾರ ಬಿಜೆಪಿ ಆಡಳಿತಾವಧಿಯಲ್ಲಾದ 40ರಷ್ಟು ಕಮಿಷನ್ ಆರೋಪ ಸಂಬಂಧ ತನಿಖಾ ಸಮಿತಿ ರಚಿಸಿದೆ.
ಬಿಜೆಪಿ ಆಡಳಿತಾವಧಿಯ ವಿವಿಧ ಅಕ್ರಮ ಆರೋಪಗಳ ಸಂಬಂಧ ಕಾಂಗ್ರೆಸ್ ಸರ್ಕಾರ ಈಗಾಗಲೇ ತನಿಖೆಗೆ ಆದೇಶಿದೆ. ಲೋಕೋಪಯೋಗಿ ಇಲಾಖೆ ಅಪರ ಕಾರ್ಯದರ್ಶಿ, ಶೇ 40ರಷ್ಟು ಕಮಿಷನ್ ಆರೋಪ ಸಂಬಂಧ ಇದೀಗ ಕಾಂಗ್ರೆಸ್ ಸರ್ಕಾರ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ತನಿಖಾ ಸಮಿತಿ ರಚಿಸಿ ಆದೇಶ ಹೊರಡಿಸಿದ್ದಾರೆ.
ಆದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಮಗಾರಿಗಳನ್ನು ನಡೆಸುವ ಇಲಾಖೆಗಳಲ್ಲಿ ಟೆಂಡರ್ ಪ್ರಕ್ರಿಯೆ, ಪ್ಯಾಕೇಜ್ ಪದ್ಧತಿ, ಪುನರ್ ಅಂದಾಜು (Revised Estimate), ಬಾಕಿ ಮೊತ್ತ ಬಿಡುಗಡೆ ಇತ್ಯಾದಿ ವಿಷಯಗಳಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಕುರಿತು ದೂರುದಾರ ಕರ್ನಾಟಕ ಸ್ಟೇಟ್ ಕಂಟ್ರ್ಯಾಕ್ಟರ್ ಅಸೋಪಿಯೇಶನ್ ಅಧ್ಯಕ್ಷ ಸಿ. ಕೆಂಪಣ್ಣ ಮಾಡಿದ ಆರೋಪದ ಸತ್ಯಾಸತ್ಯತೆ ಪರಾಮರ್ಶಿಸಲು ತನಿಖಾ ಸಮಿತಿ ರಚಿಸಲಾಗಿದೆ. ಸಮಿತಿಯು ಸ್ಥಳ ಹಾಗೂ ದಾಖಲಾತಿಗಳ ಪರಿಶೀಲನೆಯೊಂದಿಗೆ ವಿವರವಾದ ತನಿಖೆಯನ್ನು ನಡೆಸಿ, ಲೋಪ - ದೋಷಗಳ ಮಾಹಿತಿ ಹಾಗೂ ಆರೋಪಿತರ ಸ್ಪಷ್ಟ ಗುರುತಿಸುವಿಕೆಯ ಸಹಿತ ಪರಿಪೂರ್ಣ ತನಿಖಾ ವರದಿಯನ್ನು ಸೂಕ್ತ ಅಭಿಪ್ರಾಯ / ಶಿಫಾರಸ್ಸಿನೊಂದಿಗೆ 30 ದಿನಗಳೊಳಗಾಗಿ ಸರ್ಕಾರಕ್ಕೆ ಸಲ್ಲಿಸುವಂತೆ ಆದೇಶಿಸಿದೆ.
ಸಮಿತಿ ಮೇಲಿನ ಕಾರ್ಯ ವ್ಯಾಪ್ತಿಯ ಜೊತೆಗೆ ದೂರು ಅರ್ಜಿಗಳಲ್ಲಿನ ಎಲ್ಲ ಅಂಶಗಳನ್ನೂ ಸಹ ಸವಿವರವಾಗಿ ತನಿಖಾ ವ್ಯಾಪ್ತಿಯಲ್ಲಿ ಪರಿಶೀಲಸಲು ಸೂಚಿಸಿದೆ. ಅಲ್ಲದೇ, ತನಿಖೆಯ ವ್ಯಾಪ್ತಿಯಲ್ಲಿ ಪ್ರಮುಖವಾಗಿ ಕೆಳಕಂಡ ಅಂಶಗಳನ್ನೂ ಸಹ ಪರಾಮರ್ಶಿಸಲು ಸೂಚಿಸಿದೆ.
- ಯೋಜನೆ/ಕಾಮಗಾರಿಗಳಿಗೆ ನಿಯಮಾನುಸಾರ ಆಡಳಿತಾತ್ಮಕ ಅನುಮೋದನೆ ನೀಡಿರುವ ಬಗ್ಗೆ.
- ಅನುಷ್ಠಾನಗೊಳಿಸಲಾದ ಕಾಮಗಾರಿ/ ಯೋಜನೆಗಳ ಗುಣಮಟ್ಟ.
- ಕಾಮಗಾರಿಗಳ ಅಂದಾಜುಗಳನ್ನು ನಿಯಮಗಳ ಪ್ರಚಲಿತ ಅನುಸೂಚಿ ದರಗಳ ಅನುಸಾರವಾಗಿ ತಯಾರಿಸಿರುವ ಬಗ್ಗೆ.
- ಕಾಮಗಾರಿಗಳ ಅಂದಾಜಿನಲ್ಲಿನ ಪರಿಮಾಣ (Quantity) ವಾಸ್ತವಿಕವಾಗಿದೆಯೇ ಅಥವಾ ಕೃತಕವಾಗಿ ಹೆಚ್ಚಿಸಲಾಗಿದೆಯೇ ಹೆಚ್ಚಿಸಿದ್ದಲ್ಲಿ ಅವುಗಳ ಪ್ರಮಾಣ ಮತ್ತು ಹಣಕಾಸಿನ ಬದ್ಧತೆಯ ಜೊತೆಗೆ ಯಾವ ಹಂತದಲ್ಲಿ ಹೆಚ್ಚಿಸಲಾಗಿದೆ ಎಂಬುದನ್ನು ಪರೀಕ್ಷಿಸಬೇಕು.
- ಕಾಮಗಾರಿಗಳ ಅನುಷ್ಠಾನದ ಸಂದರ್ಭದಲ್ಲಿ ಉಂಟಾಗಿರುವ ಹೆಚ್ಚುವರಿ ವ್ಯತ್ಯಾಸದ (Variation) ಅನಿವಾರ್ಯತೆ ಮತ್ತು ಅಗತ್ಯತೆ: ಅನಿವಾರ್ಯವಾಗಿದ್ದಲ್ಲಿ, ಮೂಲ ಅಂದಾಜಿನಲ್ಲಿ ಕೈಬಿಡಲು ಕಾರಣಗಳು ಹಾಗೂ ಇವುಗಳಿಗೆ ಸಕ್ಷಮ ಪ್ರಾಧಿಕಾರ ಅನುಮೋದನೆ ನೀಡಿರುವ ಬಗ್ಗೆ.
- ಯಾವುದಾದರೂ ಕಾಮಗಾರಿಗಳನ್ನು ನಿರ್ವಹಿಸದೆಯೇ ಬಿಲ್ಲು ಪಾವತಿ ಮಾಡಲಾಗಿದೆಯೇ ಅಥವಾ ಅನಷ್ಠಾನವಾದ ಕಾಮಗಾರಿಗಳ ಪ್ರಮಾಣಕ್ಕಿಂತ ಹೆಚ್ಚುವರಿಯಾಗಿ ಬಿಲ್ಲು ಪಾವತಿಸಲಾಗಿದೆಯೇ?
- ಈ ಕಾಮಗಾರಿಗಳ ಟೆಂಡರ್‌ಗಳನ್ನು ಕರೆಯುವಾಗ ಕೆಲವೇ ಗುತ್ತಿಗೆದಾರರಿಗೆ ಅನುಕೂಲವಾಗುವಂತೆ ಹಾಗೂ ಉಳಿದ ಗುತ್ತಿಗೆದಾರರು ಟೆಂಡರ್ ಪ್ರಕ್ರಿಯೆಗಳಲ್ಲಿ ಭಾಗವಹಿಸದಂತೆ ಷರತ್ತುಗಳನ್ನು ರೂಪಿಸಲಾಗಿತ್ತೇ ಎಂಬ ಅಂಶಗಳ ಬಗ್ಗೆ.
- ಕಾಮಗಾರಿಯನ್ನು ಪ್ರಾರಂಭಿಸುವ ಮೊದಲು ಸಾಮಗ್ರಿಗಳು, ಉಪಕರಣಗಳು ಇತ್ಯಾದಿಗಳ ಗುಣಮಟ್ಟ ಪರೀಕ್ಷೆಯನ್ನು ನಿರ್ದಿಷ್ಟಪಡಿಸಿ, ಅಧಿಕೃತ ಏಜೆನ್ಸಿಗಳಿಂದ ಮಾಡಿಸಲಾಗಿದೆಯೇ?
- ಒಟ್ಟಾರೆ ಕಾಮಗಾರಿಗಳ ಕುರಿತಾದ ಟೆಂಡರ್ ಪ್ರಕ್ರಿಯೆ ಮತ್ತು ಅನುಷ್ಠಾನ ಪ್ರಕ್ರಿಯೆಗಳಲ್ಲಿ ಉಂಟಾಗಿರಬಹುದಾದ ಇತರೆ ಯಾವುದಾದರೂ ಲೋಪ-ದೋಷಗಳ ಬಗ್ಗೆ.
- ಪರಿಶೀಲನೆಯ ಸಂದರ್ಭದಲ್ಲಿ ಸಮಿತಿಯ ಗಮನಕ್ಕೆ ಬರುವ ಇನ್ನಾವುದೇ ಗಂಭೀರ ವಿಷಯಗಳನ್ನು ತನಿಖಾ ಸಮಿತಿಯ ಅಧ್ಯಕ್ಷರು ಪರಾಮರ್ಶಿಸುವುದು.
- ತನಿಖಾ ಸಮಿತಿಗೆ ಸಂಬಂಧಪಟ್ಟಂತೆ ಆಯಾ ಇಲಾಖೆಯ ಸಂಬಂಧಿಸಿದ ಅಧಿಕಾರಿಗಳು ಸಮಿತಿಯು ಕಾಲಾನುಕಾಲಕ್ಕೆ ತನಿಖೆಗಾಗಿ ಕೇಳುವ ಎಲ್ಲಾ ಕಡತಗಳು/ ದಾಖಲಾತಿಗಳು/ ವಹಿಗಳು ಇತ್ಯಾದಿಗಳನ್ನು ಒದಗಿಸಬೇಕು ಹಾಗೂ ಸ್ಥಳ ತನಿಖೆ ಸಂದರ್ಭದಲ್ಲಿ ಖುದ್ದು ಹಾಜರಿದ್ದು, ತನಿಖಾ ಸಮಿತಿಯೊಂದಿಗೆ ಸಂಪೂರ್ಣವಾಗಿ ಸಹಕರಿಸಬೇಕು.
- ತನಿಖಾ ಸಮಿತಿಗೆ ಅಗತ್ಯವಿದ್ದಲ್ಲಿ, ಅಧ್ಯಕ್ಷರ ಕೋರಿಕೆಯ ಮೇರೆಗೆ ಗುಣಮಟ್ಟ ಪರೀಕ್ಷೆಗೆ ನೋಂದಾಯಿತ 3ನೇ ಸ್ವತಂತ್ರ ಸಂಸ್ಥೆಯ (3rd Party Assistance) ವ್ಯವಸ್ಥೆ ಕಲ್ಪಿಸಲು ಅಗತ್ಯ ಕ್ರಮ ವಹಿಸಬೇಕು.
ಇದನ್ನೂ ಓದಿ : ನಾವು ಕಮಿಷನ್ ಹಿಂದೆ ಬಿದ್ದವರಲ್ಲ, ಕಮಿಷನ್ ಹಿಂದಿರುವ ಭ್ರಷ್ಟರ ಬೆನ್ನು ಬಿದ್ದಿದ್ದೇವೆ: ಸಿಎಂ ಸಿದ್ದರಾಮಯ್ಯ