ಬೆಂಗಳೂರು: ಕೆಜಿ ಹಳ್ಳಿ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಶಿವು ಅವರ ಉತ್ತಮ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ ಕಮಿಷನರ್ ಕಮಲ್ ಪಂತ್ ಪೇಟ ತೊಡಿಸಿ ಸನ್ಮಾನ ಮಾಡಿದ್ದಾರೆ.
ಬಕ್ರೀದ್ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ಸಿಟಿ ರೌಂಡ್ಸ್ ನಡೆಸಿದ್ದ ಕಮಿಷನರ್ ಕಮಲ್ ಪಂತ್ ಸೂಕ್ಷ್ಮ ಪ್ರದೇಶಗಳಾದ ನಗರದ ಶಿವಾಜಿನಗರ, ಕೆಜಿ ಹಳ್ಳಿ, ಡಿಜೆ ಹಳ್ಳಿ, ಗೋವಿಂದಪುರ, ಜೆಜೆ ನಗರ ಪಾದರಾಯನಪುರ, ಚಾಮರಾಜಪೇಟೆ, ಹೆಣ್ಣೂರು, ಬಾಣಸವಾಡಿ ಕೋರಮಂಗಲ ಸೇರಿ ಹಲವು ಠಾಣೆಗೆ ಭೇಟಿ ನೀಡಿದ್ದರು. ಈ ವೇಳೆ, ಕಮಲ್ ಪಂತ್ರನ್ನು ಭೇಟಿ ಮಾಡಿ ಸನ್ಮಾನಿಸಲು ಮುಂದಾದ ಕೆಜಿ ಹಳ್ಳಿ ಮುಸಲ್ಮಾನ್ ಬಾಂಧವರು, ಸನ್ಮಾನ ಮಾಡಬೇಕಿರುವುದು ನನಗಲ್ಲ. ಸದಾಕಾಲ ಫೀಲ್ಡ್ನಲ್ಲಿ ಸಾರ್ವಜನಿಕರ ಜೊತೆ ಸೇವೆ ಮಾಡುವ ಕಾನ್ಸ್ಟೇಬಲ್ಗಳಿಗೆ ಎಂದರು.
ಈ ವೇಳೆ ಕೆಜಿ ಹಳ್ಳಿಯಲ್ಲಿ ಪೊಲೀಸ್ ಗಸ್ತು ಹಾಗೂ ಬೀಟ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಕಮಲ್ ಪಂತ್ ತಮಗಾಗಿ ಸಾರ್ವಜನಿಕರು ತಂದಿದ್ದ ಶಾಲು, ಪೇಟ, ಹಾರವನ್ನ ಕಾನ್ಸ್ಟೇಬಲ್ಗೆ ತೋಡಿಸಿ ಸನ್ಮಾನಿಸಿದರು. ಕೆಜಿ ಹಳ್ಳಿ ಠಾಣೆಯಲ್ಲಿ ಯಾರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಸಂಬಂಧಪಟ್ಟ ಡಿಸಿಪಿಗೆ ಹಾಗೂ ಎಸಿಪಿಗೆ ಪೊಲೀಸ್ ಆಯುಕ್ತ ಕಮಲ್ ಪಂತ್ ಕೇಳಿದ್ದರು.
ಈ ವೇಳೆ, ವಿಭಾಗದ ಡಿಸಿಪಿ ಶರಣಪ್ಪ ಹಾಗೂ ಎಸಿಪಿ ನಿಂಗಣ್ಣ ಸಕ್ರಿ, ಪೇದೆ ಶಿವು ಅವರ ಹೆಸರನ್ನು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ನೈಟ್ ಬೀಟ್ನಲ್ಲಿದ್ದ ಕಾನ್ಸ್ಟೇಬಲ್ ಶಿವು ಅವರನ್ನು ಕೆಜಿ ಹಳ್ಳಿ ಠಾಣೆಗೆ ಕರೆಸಿದ ಕಮಿಷನರ್ ಕಮಲ್ ಪಂತ್ ಸಾರ್ವಜನಿಕರ ಮುಂದೆ ಶಾಲು ಹೊದಿಸಿ ಹಾರ ಹಾಕಿ ಸನ್ಮಾನಿಸಿದ್ದಾರೆ.