ಬೆಂಗಳೂರು: ಕೋವಿಡ್ ನಿಯಂತ್ರಣಕ್ಕೆ ಜಾರಿ ಮಾಡಲಾಗಿದ್ದ ಲಾಕ್ಡೌನ್ ವೇಳೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕಾರ್ಮಿಕರಿಗೆ ನೆರವು ನೀಡಲು ಸರ್ಕಾರ ಘೋಷಿಸಿರುವ 2 ಸಾವಿರ ರೂಪಾಯಿ ಪರಿಹಾರ ಪಡೆಯಲು ಸೇವಾ ಸಿಂಧು ಪೋರ್ಟಲ್ನಲ್ಲಿ ನೋಂದಣಿ ಮಾಡಿಸಲು ಬರುವ ವ್ಯಕ್ತಿಗಳಿಂದ ಯಾವುದೇ ಹಣ ಪಡೆಯದಂತೆ ರಾಜ್ಯದ ಎಲ್ಲಾ ನಾಗರಿಕ ಸೇವಾ ಕೇಂದ್ರಗಳಿಗೆ (ಸಿಎಸ್‌ಸಿ) ಸೂಚಿಸಬೇಕು ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.
ರಾಜ್ಯದ ಎಲ್ಲ ಮನೆ ಕೆಲಸಗಾರರಿಗೂ ಕೋವಿಡ್ ಪರಿಹಾರ ಪಾವತಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ಈ ಸೂಚನೆ ನೀಡಿದೆ.
ವಿಚಾರಣೆ ವೇಳೆ ಸರ್ಕಾರಿ ವಕೀಲರು ವಾದ ಮಂಡಿಸಿ, ಗೃಹ ಕಾರ್ಮಿಕರು ಪರಿಹಾರ ಕೋರಿ ಅರ್ಜಿ ಸಲ್ಲಿಸಲು ವಿಧಿಸಿದ್ದ ಮಾನದಂಡಗಳನ್ನು ಸರಳಗೊಳಿಸಿ ಜುಲೈ 2ರಂದು ನಿರ್ಧಾರ ಕೈಗೊಳ್ಳಲಾಗಿದೆ. ಹಾಗೆಯೇ, ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಲು ಬರುವ ವ್ಯಕ್ತಿಗಳಿಂದ ಯಾವುದೇ ರೀತಿಯ ಹಣ ಪಡೆಯದಂತೆ ರಾಜ್ಯದ ಎಲ್ಲಾ ಸಿಎಸ್‌ಇಗಳಿಗೆ ಅದರ ಆಡಳಿತ ನಿರ್ವಹಿಸುತ್ತಿರುವ ಸಿಎಸ್‌ಸಿ ಇ-ಗವರ್ನೆನ್ಸ್ ಸರ್ವಿಸ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ನಿರ್ದೇಶನ ನೀಡಿದೆ ಎಂದು ವಿವರಿಸಿದರು.
ಹೇಳಿಕೆ ದಾಖಲಿಸಿಕೊಂಡ ಪೀಠ, ಜುಲೈ 2ರಂದು ಸರ್ಕಾರ ಕೈಗೊಂಡಿರುವ ನಿರ್ಧಾರ ಮತ್ತು ಸಿಎಸ್‌ಸಿ ಇ-ಗವರ್ನೆನ್ಸ್ ಸರ್ವಿಸ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ನ ನಿರ್ದೇಶನವನ್ನು ಅಗತ್ಯ ದಾಖಲೆಗಳೊಂದಿಗೆ ಸೇವಾ ಸಿಂಧು ಸೇರಿದಂತೆ ರಾಜ್ಯ ಇತರೆ ಎಲ್ಲಾ ಸಿಎಸ್‌ಸಿಗಳ ಗಮನಕ್ಕೆ ತರಬೇಕು. ಹಾಗೆಯೇ, ಜುಲೈ 2ರ ನಿರ್ಧಾರವು ಇತರೆ ವರ್ಗದ ಕೆಲಸಗಾರರಿಗೂ ಅನ್ವಯಿಸಲು ಸಾಧ್ಯವೇ ಎಂಬ ಬಗ್ಗೆ ಪರಿಗಣಿಸಿ ಮಾಹಿತಿ ನೀಡುವಂತೆ ಸರ್ಕಾರಕ್ಕೆ ನಿರ್ದೇಶಿಸಿದ ಪೀಠ ವಿಚಾರಣೆ ಮುಂದೂಡಿತು.
ಇದನ್ನೂ ಓದಿ: ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಆಡಳಿತ ನಡೆಸಲಿದ್ದು, ಆಗ ಸರ್ಕಾರವೇ ನಿಂತು ಮೀನುಗಾರರಿಗೆ ಸಾಲ ನೀಡಲಿದೆ: ಡಿಕೆಶಿ