ಬೆಂಗಳೂರು: ವಿಧಾನ ಪರಿಷತ್ನಲ್ಲಿ ಶೇ.40ರಷ್ಟು ಕಮಿಷನ್ ಆರೋಪದ ವಿಚಾರವಾಗಿ ಗದ್ದಲ ಉಂಟಾಯಿತು. ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರು ಪರಸ್ಪರ ವಾಗ್ದಾಳಿ ನಡೆಸಿಕೊಂಡರು. ಇದರಿಂದ ಕಲಾಪವನ್ನು ಸಭಾಪತಿ ನಾಳೆಗೆ ಮುಂದೂಡಿದರು.
ನಿರಾಧಾರವಾಗಿ ಸರ್ಕಾರದ ವಿರುದ್ಧ ಪ್ರತಿಪಕ್ಷ ನಾಯಕರು ಆರೋಪಿಸಿದ್ದಾರೆ. ಇದಕ್ಕೆ ಪುರಾವೆ ಒದಗಿಸಬೇಕು ಎಂದು ಸಚಿವ ಅಶ್ವತ್ಥ ನಾರಾಯಣ ಪಟ್ಟು ಹಿಡಿದರು. ಉತ್ತರಿಸಲು ಮುಂದಾದ ಪ್ರತಿಪಕ್ಷ ನಾಯಕ ಬಿಕೆ ಹರಿಪ್ರಸಾದ್, ವಿಶ್ವಗುರು ಎನಿಸಿರುವ ಪ್ರಧಾನಿ ನರೇಂದ್ರ ಮೋದಿ ಎಂದು ಹೇಳುತ್ತಿದ್ದಂತೆ ಗದ್ದಲ ಆರಂಭವಾಯಿತು.
ಬಿಜೆಪಿ ಸದಸ್ಯೆ ತೇಜಸ್ವಿನಿ ಗೌಡ ಅವರು ಪ್ರಧಾನಮಂತ್ರಿ ಅವಹೇಳನ ಮಾಡಲಾಗಿದೆ ಇದಕ್ಕೆ ಪ್ರತಿಪಕ್ಷ ನಾಯಕರು ಕ್ಷಮೆ ಕೇಳಬೇಕೆಂದು ಒತ್ತಾಯಿಸಿದರು. ನಂತರ ಆಡಳಿತ ಹಾಗೂ ಪ್ರತಿಪಕ್ಷ ನಾಯಕರು ಎದ್ದು ನಿಂತರು. ಸಭಾಪತಿಗಳು ಸಮಾಧಾನಪಡಿಸುವ ಪ್ರಯತ್ನ ಮಾಡಿದರು. ಆದರೆ, ಪ್ರತಿಪಕ್ಷ ಸದಸ್ಯರು ಬಾವಿಗಿಳಿಯಲು ಮುಂದಾದರು. ಆಗ ಆಸನಕ್ಕೆ ಮರಳುವಂತೆ ಸಭಾಪತಿ ಸೂಚಿಸಿದರೂ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಧರಣಿ ಆರಂಭಿಸಿದರು. ಇದರಿಂದ ಮೊದಲಿಗೆ ಕಲಾಪವನ್ನು ಹತ್ತು ನಿಮಿಷ ಮುಂದೂಡಿದರು.
ಇದಾದ ಕಲಾಪ ಆರಂಭವಾದ ನಂತರ ಸಭಾನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಮಾತನಾಡಿ, ನೀವು ಬಂದ್ ಮಾಡಿದ್ದ ಲೋಕಾಯುಕ್ತವನ್ನು ಓಪನ್ ಮಾಡಿದ್ದೇವೆ ಎಂದರು. ಈ ವೇಳೆ ಗದ್ದಲ ಮತ್ತೆ ಮುಂದುವರಿತು. ಆಗ ಸಭಾಪತಿಗಳು ಸದಸ್ಯರ ಮನವೊಲಿಕೆಗೆ ಸಾಕಷ್ಟು ಪ್ರಯತ್ನ ನಡೆಸಿದರು. ಇದು ಸಾಧ್ಯವಾಗದಿದ್ದಾಗ ಕಲಾಪವನ್ನು ನಾಳೆ ಬೆಳಗ್ಗೆ 11 ಗಂಟೆಗೆ ಮುಂದೂಡಿದರು.
ತಂತ್ರಜ್ಞಾನದ ಸಹಕಾರ ಬಳಸಬಹುದಿತ್ತು: ಇದಕ್ಕೂ ಮುನ್ನ ರಾಜ್ಯದ ಮಳೆ ಹಾನಿ ಸಂಬಂಧ ನಿಯಮ 68ರಡಿ ಚರ್ಚೆಯಲ್ಲಿ ಪ್ರತಿಪಕ್ಷ ನಾಯಕ ಬಿಕೆ ಹರಿಪ್ರಸಾದ್ ಪಾಲ್ಗೊಂಡು ಮಾತನಾಡಿ, ನೆರೆ ಸಮಸ್ಯೆಯ ಬಗ್ಗೆ ಸರ್ಕಾರವನ್ನೇ ದೂಷಿಸುವುದು ಸರಿಯಲ್ಲ. ಆದರೆ, ಈ ಸಾರಿ ಕೊಂಚ ಮುನ್ನೆಚ್ಚರಿಕೆ ವಹಿಸಬಹುದಿತ್ತು. ತಂತ್ರಜ್ಞಾನದ ಸಹಕಾರ ಇದ್ದರೂ ಬಳಸಿಕೊಳ್ಳದೇ ಈ ಅನಾಹುತ ಆಗಿದೆ ಎಂದರು.
ಮಳೆಯಿಂದ 99 ಜನರ ಸಾವು ಆಗಿದೆ. ಇವರಲ್ಲಿ ಮೂವರು ಕಣ್ಮರೆ ಆಗಿದ್ದಾರೆ. 9,500 ಕೋಟಿ ರೂ. ಹಾನಿ ಆಗಿದೆ. 27 ಸಾವಿರ ಹೆಕ್ಟೇರ್ ಭೂಮಿಯ ಬೆಳೆ ಹಾನಿ ಆಗಿದೆ. ತೋಟಗಾರಿಕೆ ಬೆಳೆ, ತೋಟದ ಬೆಳೆ ಹಾನಿಯಾಗಿದೆ. 573 ಮನೆ ನಾಶವಾಗಿದೆ. 570 ಕೋಟಿ ರೂ. ಪರಿಹಾರ ಮೊತ್ತ ಅಂದಾಜಿಸಲಾಗಿದೆ. ಸರ್ಕಾರ ಜನರ ಸಂಕಷ್ಟಕ್ಕೆ ಸ್ಪಂದಿಸಬೇಕು. ಜನರ ಕಷ್ಟಕ್ಕೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಇದನ್ನೂ ಓದಿ: ಮಳೆ ಹಾನಿ ಪರಿಶೀಲನೆ.. ಕೇಂದ್ರ ತಂಡದ್ದು 'ಬಂದ ಪುಟ್ಟ ಹೋದ ಪುಟ್ಟ' ಎಂಬಂತಹ ಸ್ಥಿತಿ: ಹೆಚ್ಡಿಕೆ ಅಸಮಾಧಾನ
ಅಲ್ಲದೇ, ಮನೆ ಕಳೆದುಕೊಂಡವರಿಗೆ 10 ಸಾವಿರ ರೂ. ನೀಡುವ ಕಾರ್ಯ ಆಗುತ್ತಿದೆ. ಆದರೆ ಕೆಲವರಿಗೆ 5 ಸಾವಿರ ರೂ. ಮಾತ್ರ ಲಭಿಸಿದೆ ಎಂಬ ಮಾತಿದೆ ಎಂದು ಹರಿಪ್ರಸಾದ್ ಹೇಳಿದರು. ಆಗ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮಧ್ಯಪ್ರವೇಶ ಮಾಡಿ, ಮನೆ ಕಳೆದುಕೊಂಡವರಿಗೆ ನೀಡುವ ಮೂರು ಹಂತದ ಪರಿಹಾರದ ಮಾದರಿಯ ವಿವರ ನೀಡಿದರು.
ಪ್ರವಾಹದಿಂದ ನಾಶವಾಗಿರುವ ಆಸ್ತಿ ಪಾಸ್ತಿಯ ವಿವರ ನೀಡಿದ ಹರಿಪ್ರಸಾದ್, ಇಂತಹ ಪ್ರಕೃತಿ ವಿಕೋಪ ವೀಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಬರಲಿಲ್ಲ. ಮೊನ್ನೆ ಮಂಗಳೂರಿಗೆ ಪ್ರಧಾನಿ ಬಂದಾಗ ಹಾಕಿದ ಡಾಂಬರು ರಸ್ತೆ ಸಂಪೂರ್ಣ ಹಾಳಾಗಿದೆ. ಭ್ರಷ್ಟಾಚಾರ ನಿಯಂತ್ರಣ ಆಗಬೇಕೆಂದು ಕುಟುಕಿದರು.
ಬೆಂಗಳೂರಲ್ಲಿ 280 ಕೆರೆಗಳ ಪೈಕಿ 60 ಕೆರೆ ಮಾತ್ರ ಉಳಿದಿದೆ: ಬೆಂಗಳೂರು ಸಿಲ್ಕ್ ಸಿಟಿಯಿಂದ ಸಿಲಿಕಾನ್ ಸಿಟಿ ಆಗಿದೆ. ಆದರೆ, ಈಗ ಆಗಿರುವ ಬದಲಾವಣೆ ಆತಂಕಕಾರಿ. ಇಲ್ಲಿ ಮಳೆ ಬಂದು ಅನಾಹುತವಾಗಿದೆ. ಸಾಕಷ್ಟು ಸದನ ಸಮಿತಿ ರಚನೆ ಆದರೂ, ವರದಿ ನೀಡಿದ್ದರೂ ಬಂದ ಸರ್ಕಾರಗಳು ವರದಿ ಅನುಷ್ಠಾನಕ್ಕೆ ಮುಂದಾಗಿಲ್ಲ. ಭೂ ಮಾಫಿಯಾ ಬಂದು ಎಲ್ಲವನ್ನೂ ನಾಶವಾಗಿಸಿದೆ ಎಂದು ಹರಿಪ್ರಸಾದ್ ಹೇಳಿದರು.
90 ವರ್ಷದಲ್ಲಿಯೇ ಈ ಸಾರಿ ಆದ ಅನಾಹುತ ಹಿಂದೆ ಎಂದೂ ಆಗಿರಲಿಲ್ಲ. 280 ಕೆರೆ ಹೊಂದಿದ್ದ ಬೆಂಗಳೂರಿನಲ್ಲಿ 60 ಕೆರೆ ಉಳಿದಿದೆ. ಮೇ 22ರ ಈಚೆಗೆ 62 ದಿನ ಮಳೆ ಆಗಿದೆ. 169 ಸ್ಥಳ ಅಪಾಯಕಾರಿ ಎಂದು ಬಿಬಿಎಂಪಿ ಅಧಿಕಾರಿಗಳು ಗುರುತಿಸಿದ್ದಾರೆ. ಇದನ್ನು ಸರಿಪಡಿಸಲು ಕ್ರಮ ಯಾಕೆ ಕೈಗೊಳ್ಳುತ್ತಿಲ್ಲ?. ಬೆಂಗಳೂರು ಅನಾಥವಾಗಿದೆ. ದಾತರೇ ಇಲ್ಲದಂತಾಗಿದೆ ಎಂದು ಕಿಡಿಕಾರಿದರು.
ಬೆಂಗಳೂರು ನಗರದಲ್ಲಿ 840 ಕಿ.ಮೀ ರಾಜಕಾಲುವೆ ಇತ್ತು. ಈಗ ಎಲ್ಲೆಡೆ ಒತ್ತುವರಿ ಆಗಿದೆ. ನಮ್ಮ ಶಾಸಕರೊಬ್ಬರಿಗೆ ಸೇರಿದ ಮನೆ ಒತ್ತುವರಿ ಹೆಸರಿನಲ್ಲಿ ತೆರವಾಗಿದೆ. ನಾವು ಆಕ್ಷೇಪ ಮಾಡುವುದಿಲ್ಲ. ನಿಮಾನ್ಸ್ ಆಸ್ಪತ್ರೆಗೆ ಸೇರಿದ ಜಾಗದಲ್ಲಿ ಮೂರು ಎಕರೆ ಜಾಗ ಒತ್ತುವರಿ ಆಗಿದೆ. ಆದರೆ ಅದನ್ನು ಮರುವಶಪಡಿಸಿಕೊಳ್ಳಲು ಆಗುತ್ತಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ವಿಧಾನಸಭೆಯಲ್ಲಿ ಎಸ್ಟಿ ಮೀಸಲಾತಿ ವಿಚಾರ ಚರ್ಚೆ ಸಂಬಂಧ ಗದ್ದಲ: ಸಿಟ್ಟಾದ ಸ್ಪೀಕರ್ ಕಾಗೇರಿ