ಬೆಂಗಳೂರು: ಹೆಬ್ಬಾಳದ ಕೆಂಪಾಪುರದಲ್ಲಿ ವಾಲಿಕೆಯಾಗಿದ್ದ ಹರ್ಷಿತ್ ಪಿ.ಜಿ ಕಟ್ಟಡವನ್ನು ತೆರವುಗೊಳಿಸುವ ಕಾರ್ಯಕ್ಕೆ ಬಿಬಿಎಂಪಿ ಮುಂದಾಗಿದ್ದು, ಇಂದಿನಿಂದ ಎನ್ಡೊಆರ್ಎಫ್ ಸಿಬ್ಬಂದಿ ತೆರವು ಕಾರ್ಯಾಚರಣೆ ಆರಂಭಿಸಿದ್ದಾರೆ.
ಒಂದು ಹಿಟಾಚಿ, ಗ್ಯಾಸ್ ಕಟಿಂಗ್ ಮಿಷನ್ ಸೇರಿದಂತೆ 20 ಜನ ಸಿಬ್ಬಂದಿ, ಅಗ್ನಿಶಾಮಕ ದಳ, ಬಿಬಿಎಂಪಿ ಅಧಿಕಾರಿಗಳು, ಪಾಲಿಕೆ ಸದಸ್ಯ, ತಜ್ಞರ ತಂಡ ಸ್ಥಳದಲ್ಲೇ ಬೀಡುಬಿಟ್ಟಿದ್ದು ಹಂತ-ಹಂತವಾಗಿ ಕಾರ್ಯಾಚರಣೆ ಕೈಗೊಂಡಿದ್ದಾರೆ. ಆಂಬ್ಯುಲೆನ್ಸ್ ವೈದ್ಯರ ತಂಡ ಸ್ಥಳದಲ್ಲಿದೆ.
ಕಟ್ಟಡ ವಾಲಿದ ಬಳಿಕ ಕಟ್ಟಡದ ತಳಭಾಗಕ್ಕೆ ಸಿಮೆಂಟ್ ಮಿಶ್ರಣ ಹಾಕಿ ಕಟ್ಟಡ ಸಂಪೂರ್ಣವಾಗಿ ಕುಸಿಯದಂತೆ ಮುನ್ನೆಚ್ಚರಿಕೆ ವಹಿಸಲಾಗಿತ್ತು. ಇದೀಗ, ಮಿಶ್ರಣ ಗಟ್ಟಿಗೊಂಡು ಕಟ್ಟಡ ತೆರವುಗೊಳಿಸಬಹುದೆಂದು ತಜ್ಞರು ವರದಿ ನೀಡಿರುವ ಹಿನ್ನೆಲೆಯಲ್ಲಿ, ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಕಟ್ಟಡ ತೆರವುಗೊಳಿಸಲಾಗುತ್ತಿದೆ. ಕಟ್ಟಡದ ಮೇಲೆ 5 ಜನ ಕಾರ್ಮಿಕರು ಸೇರಿ ಸುಮಾರು 20 ಜನರ ತಂಡ ತೆರವು ಕಾರ್ಯ ನಡೆಸುತ್ತಿದ್ದಾರೆ.
ಬುಧವಾರ ಬೆಳಗ್ಗೆ 8 ಗಂಟೆಗೆ ಕಟ್ಟಡದಲ್ಲಿ ಬಿರುಕು ಕಾಣಿಸಿಕೊಂಡು ಕುಸಿದಿತ್ತು. ಸುತ್ತಮುತ್ತಲಿನ ಕಟ್ಟಡಗಳಿಗೂ ಹಾನಿಯಾಗಿತ್ತು. ಇದರಿಂದ ಕೆಲಕಾಲ ಸುತ್ತಮುತ್ತಲಿನ ನಿವಾಸಿಗಳು ಆತಂಕಕ್ಕೊಳಗಾಗಿದ್ದರು. ತಕ್ಷಣ ಸ್ಥಳಕ್ಕೆ ಧಾವಿಸಿದ. ಅಗ್ನಿಶಾಮಕ ಸಿಬ್ಬಂದಿ, ಬಿಬಿಎಂಪಿ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳೀಯರನ್ನು ಸ್ಥಳಾಂತರಗೊಳಿಸಿದ್ದರು. ಇದೀಗ ಅಕ್ಕ-ಪಕ್ಕದ ನಿವಾಸಿಗಳಿಗೆ ಬೇರೆಡೆ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿ 35 ಮನೆಗಳನ್ನು ಸ್ಥಳಾಂತರಗೊಳಿಸಿದ್ದಾರೆ. ಇಂದಿನಿಂದ ಆರಂಭಗೊಂಡಿರುವ ಕಟ್ಟಡ ತೆರವು ಕಾರ್ಯಾಚರಣೆ 7 ದಿನಗೊಳೊಳಗಾಗಿ ಪೂರ್ಣಗೊಳ್ಳಲಿದೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.