ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ಹಾಸ್ಯನಟರಾದ ಬ್ಯಾಂಕ್ ಜನಾರ್ಧನ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದು ನಗರದ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪುತ್ರ ಗುರುಪ್ರಸಾದ್ ಈಟಿವಿ ಭಾರತದ ಜೊತೆ ಮಾತನಾಡಿ, ''ತಂದೆಯವರಿಗೆ ಹೃದಯಾಘಾತ ಆಗಿಲ್ಲ. ಕೆಲವು ಮಾಧ್ಯಮಗಳಲ್ಲಿ ಹೃದಯಾಘಾತ ಅಂತಾ ಹೇಳಲಾಗುತ್ತಿದೆ. ಅದು ಸುಳ್ಳು. ಅವರಿಗೆ ಬಿಪಿ ಜಾಸ್ತಿಯಾಗಿ ಆಗಾಗ ಎದೆನೋವು ಕಾಣಿಸಿಕೊಳ್ಳುತ್ತದೆ. ಶುಕ್ರವಾರ ಆಸ್ಪತ್ರೆಗೆ ಸೇರಿಸಿದ್ದು ಚಿಕಿತ್ಸೆ ನಡೆಯುತ್ತಿದೆ. ಹೃದಯಕ್ಕೆ ಎರಡು ಸ್ಟಂಟ್ಗಳನ್ನು ಹಾಕಲಾಗಿದೆ. ಈಗ ಆರಾಮವಾಗಿದ್ದಾರೆ" ಎಂದು ಮಾಹಿತಿ ನೀಡಿದರು. ಬ್ಯಾಂಕ್ ಜನಾರ್ಧನ್ ಅವರಿಗೆ 74 ವರ್ಷ ವಯಸ್ಸಾಗಿದೆ.
ಕಳೆದ 40 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಸಿನಿಮಾ, ಕಿರುತೆರೆ ಮತ್ತು ರಂಗಭೂಮಿಯಲ್ಲಿ ಬ್ಯಾಂಕ್ ಜನಾರ್ಧನ್ ತಮ್ಮನ್ನು ತೊಡಗಿಸಿಕೊಂಡಿದ್ದರು. ಉಪೇಂದ್ರ ನಿರ್ದೇಶನದ ಶ್ ಸಿನಿಮಾ, ತರ್ಲೆ ನಾನ್ ಮಗ, ಬೆಳ್ಳಿಯಪ್ಪ ಬಂಗಾರಪ್ಪ, ಗಣೇಶ ಸುಬ್ರಹ್ಮಣ್ಯ, ಗೋವಿಂದ ಗೋಪಾಲ, ಸೂರಪ್ಪ, ಮಾರಿ ಕಣ್ಣ ಹೋರಿಮ್ಯಾಗೆ, ಗೌರಿ ಗಣೇಶ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿ ಕನ್ನಡಿಗರ ಮನಗೆದ್ದಿದ್ದಾರೆ. ಇಂದಿಗೂ ಸಿನಿಮಾ ಹಾಗೂ ಕಿರುತೆರೆಯಲ್ಲಿ ನಟಿಸುತ್ತಿದ್ದಾರೆ.
ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬ್ಯಾಂಕ್ ಜನಾರ್ಧನ್ ಎರಡು ದಿನಗಳಲ್ಲಿ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ತಿಳಿದುಬಂದಿದೆ.