ಬೆಂಗಳೂರು : ಉನ್ನತ ಶಿಕ್ಷಣ ವಿಭಾಗದ ಕಾಲೇಜುಗಳನ್ನು ಆರಂಭಿಸುವ ದಿನಾಂಕ ಘೋಷಣೆ ಬಗ್ಗೆ ಇನ್ನೆರಡು ದಿನಗಳಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಜತೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಅಶ್ವತ್ಥ್ ನಾರಾಯಣ ತಿಳಿಸಿದರು.
ಪರೀಕ್ಷೆಗಳು ಹಾಗೂ ಕಾಲೇಜುಗಳನ್ನು ತೆರೆಯುವ ಬಗ್ಗೆ ಉನ್ನತ ಅಧಿಕಾರಿಗಳು ಹಾಗೂ ಉನ್ನತ ಶಿಕ್ಷಣ ಮಂಡಳಿ ಸದಸ್ಯರ ಜತೆ ವಿಕಾಸಸೌಧದಲ್ಲಿ ಡಿಸಿಎಂ ಅಶ್ವತ್ಥ್ ನಾರಾಯಣ ಸಭೆ ನಡೆಸಿದರು. ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಇಂದಿನ ಸಭೆಯಲ್ಲಿ ಕಾಲೇಜುಗಳ ಆರಂಭದ ಕುರಿತು ಚರ್ಚೆ ನಡೆಸಲಾಯಿತು. ಮೆಡಿಕಲ್ ಹಾಗೂ ಎಂಜಿನಿಯರಿಂಗ್ ಕಾಲೇಜುಗಳ ಆರಂಭಕ್ಕೆ ಈಗಾಗಲೇ ಸರ್ಕಾರ ಷರತ್ತು ಬದ್ಧ ಅನುಮತಿ ನೀಡಿದೆ.
ಹಾಗಾಗಿ, ಕಾಲೇಜುಗಳ ಆರಂಭದ ಕುರಿತು ವಿಸ್ತೃತ ಚರ್ಚೆ ನಡೆಸಿದ್ದೇವೆ. ಸದ್ಯ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನವದೆಹಲಿ ಪ್ರವಾಸದಲ್ಲಿದ್ದು, ಅವರು ನಾಳೆ ವಾಪಸ್ ಆಗಲಿದ್ದಾರೆ. ಭಾನುವಾರ ಅಥವಾ ಸೋಮವಾರ ಸಿಎಂ ಜೊತೆ ಸಭೆ ನಡೆಸಿ ಉನ್ನತ ಶಿಕ್ಷಣ ವಿಭಾಗದ ಕಾಲೇಜುಗಳನ್ನು ಆರಂಭಿಸುವ ದಿನಾಂಕ ಘೋಷಣೆ ಮಾಡಲಾಗುತ್ತದೆ ಎಂದರು.
ಈಗಾಗಲೇ ಶೇ.65ರಷ್ಟು ಪದವಿ ವಿದ್ಯಾರ್ಥಿಗಳಿಗೆ ಲಸಿಕೆ ಕೊಡಲಾಗಿದೆ. ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಕಾಲೇಜುಗಳ ಸರಾಸರಿ ತೆಗೆದುಕೊಂಡರೆ ಶೇ.75ರಷ್ಟು ವಿದ್ಯಾರ್ಥಿಗಳು ವ್ಯಾಕ್ಸಿನ್ ಪಡೆದಿದ್ದಾರೆ. ಉಳಿದ ವಿದ್ಯಾರ್ಥಿಗಳಿಗೆ ಶೀಘ್ರವೇ ನೀಡಲಾಗುವುದು. ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿ ಲಸಿಕೀಕರಣ ಭರದಿಂದ ಸಾಗುತ್ತಿದೆ ಎಂದು ತಿಳಿಸಿದರು.
ಆಫ್‌ಲೈನ್ ಕ್ಲಾಸ್ ಕಡ್ಡಾಯ ಅಲ್ಲ : ಆಫ್‌ಲೈನ್ ಕ್ಲಾಸ್ ಕಡ್ಡಾಯ ಅಲ್ಲ. ಇಷ್ಟ ಇದ್ದವರು ಲಸಿಕೆ ಪಡೆದು ಬರಬಹುದು, ಇಲ್ಲದವರು ಆನ್‌ಲೈನ್ ಕ್ಲಾಸ್‌ನಲ್ಲಿ ಪಾಠ ಕೇಳಬಹುದು. ಆದರೆ, ಹಾಜರಿ ಮಾತ್ರ ಕಡ್ಡಾಯ. ಮೇ ತಿಂಗಳಿಂದಲೇ ಆನ್‌ಲೈನ್ ತರಗತಿಗಳು ಯಶಸ್ವಿಯಾಗಿ ನಡೆಯುತ್ತಿವೆ. ಜತೆಗೆ, ಸಂಪರ್ಕ ತರಗತಿಗಳೂ ನಡೆಯುತ್ತಿವೆ. ಆಗಸ್ಟ್ 15ರಿಂದ ಬರುವ ವಿದ್ಯಾರ್ಥಿಗಳಿಗೂ ಸಂಪರ್ಕ ತರಗತಿಗಳಿಗೆ ಹಾಜರಾಗಲು ಅವಕಾಶ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಬಾಕಿ ಉಳಿದ ಪರೀಕ್ಷೆಗಳನ್ನು ಅಕ್ಟೋಬರ್‌ನೊಳಗಾಗಿ ಮುಗಿಸಬೇಕು : ಪದವಿ ಮತ್ತು ಡಿಪ್ಲೋಮಾ ಸೆಮಿಸ್ಟರ್‌ಗಳ ಬಾಕಿ ಉಳಿದಿರುವ ಪರೀಕ್ಷೆಗಳನ್ನು ಕ್ರಮವಾಗಿ ಆಗಸ್ಟ್ ಮತ್ತು ಅಕ್ಟೋಬರ್ ತಿಂಗಳೊಳಗಾಗಿ ಮುಗಿಸಬೇಕು ಎಂದು ಎಲ್ಲ ವಿಶ್ವವಿದ್ಯಾಲಯ ಹಾಗೂ ಪಾಲಿಟೆಕ್ನಿಕ್‌ಗಳಿಗೆ ಡಿಸಿಎಂ ಸೂಚಿಸಿದರು.
ಬೆಸ ಸೆಮಿಸ್ಟರ್‌ಗಳ (1, 3 & 5) ಡಿಪ್ಲೋಮಾ ಪ್ರಾಯೋಗಿಕ ಪರೀಕ್ಷೆಗಳು ಜುಲೈ 26 ರಿಂದ 28 ಮತ್ತು ಇವೇ ಸೆಮಿಸ್ಟರ್‌ಗಳ ಉಳಿದ ವಿಷಯಗಳ ಥಿಯರಿ ಪರೀಕ್ಷೆಗಳು ಮತ್ತಿತರೆ ಸೆಮಿಸ್ಟರ್‌ಗಳ ಪರೀಕ್ಷೆಗಳು ಆಗಸ್ಟ್ 2 ರಿಂದ 21ರವರೆಗೆ ನಡೆಸಲು ಸೂಚಿಸಲಾಗಿದೆ. ಇನ್ನು, ಸಮ ಸೆಮಿಸ್ಟರ್‌ಗಳಾದ 2, 4 & 6ರ ಡಿಪ್ಲೋಮಾ ಪ್ರಾಯೋಗಿಕ ಪರೀಕ್ಷೆಗಳನ್ನು ನವೆಂಬರ್ 2ರಿಂದ 12ರವರೆಗೆ ಹಾಗೂ ಇವೇ ಸೆಮಿಸ್ಟರ್‌ಗಳ ಥಿಯರಿ ಪರೀಕ್ಷೆಗಳನ್ನು ನವೆಂಬರ್ 17ರಿಂದ ಡಿಸೆಂಬರ್ 6ರವರೆಗೆ ನಡೆಸಲಾಗುವುದು ಎಂದು ಡಿಸಿಎಂ ಮಾಹಿತಿ ನೀಡಿದರು.
ಎಲ್ಲ ಪರೀಕ್ಷೆಗಳಲ್ಲೂ ಕೋವಿಡ್ ಮಾರ್ಗಸೂಚಿ ಪಾಲನೆ ಕಡ್ಡಾಯ : ಎಲ್ಲ ಪರೀಕ್ಷೆಗಳಲ್ಲೂ ಕೋವಿಡ್ ಮಾರ್ಗಸೂಚಿ ಪಾಲನೆ ಕಡ್ಡಾಯ. ದೈಹಿಕ ಅಂತರ, ಮಾಸ್ಕ್ ಧರಿಸುವುದನ್ನು ತಪ್ಪಿಸುವಂತಿಲ್ಲ. ಒಂದು ವೇಳೆ ಯಾವುದೇ ವಿದ್ಯಾರ್ಥಿಗೆ ಪಾಸಿಟಿವ್ ಬಂದಿದ್ದರೆ ಅಂಥವರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು ಎಂದು ಆದೇಶಿಸಲಾಗಿದೆ ಎಂದು ಡಿಸಿಎಂ ಮಾಹಿತಿ ನೀಡಿದರು.
ಬಹುತೇಕ ಎಲ್ಲ ವಿವಿಗಳು ಪರೀಕ್ಷೆಗಳನ್ನು ಮುಗಿಸಿದ್ದು, ಕೋವಿಡ್ ಲಾಕ್‌ಡೌನ್ ಕಾರಣಕ್ಕೆ ಕರ್ನಾಟಕ ವಿವಿ, ಕಲಬುರಗಿ ವಿವಿ, ಬೆಂಗಳೂರು ವಿವಿ ಪರೀಕ್ಷೆ ನಡೆಸಲು ಸಾಧ್ಯವಾಗಿಲ್ಲ. ಅವುಗಳನ್ನು ಅಕ್ಟೋಬರ್ ತಿಂಗಳೊಳಗೆ ನಡೆಸಲು ಸೂಚಿಸಲಾಗಿದೆ ಎಂದರು.