ಬೆಂಗಳೂರು: ತಾನು ಸರ್ಕಾರಿ ಅಧಿಕಾರಿಯೆಂದು ಬೆದರಿಕೆಯೊಡ್ಡಿ ವ್ಯಕ್ತಿಯೋರ್ವನಿಂದ ಹಣ ವಸೂಲಿ ಮಾಡುತ್ತಿದ್ದ ಖದೀಮರನ್ನು ನಗರದ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಬಂಧಿಸಿದ್ದಾರೆ.
ಲೋಕೇಶ್, ಕೃಷ್ಣ ಕುಮಾರ್ ಹಾಗೂ ಬಿಬಿಎಂಪಿ ವಾಟರ್ ಮ್ಯಾನ್ ಗೋವಿಂದರಾಜು ಎಂಬುವರನ್ನು ವಶಕ್ಕೆ ಪಡೆಯಲಾಗಿದೆ.
ಪ್ರಕರಣದ ಹಿನ್ನೆಲೆ:
ಬೆಂಗಳೂರು ನಗರದ ನಿವಾಸಿಯೊಬ್ಬರು ಸಿಂಗಸಂದ್ರದಲ್ಲಿ ಹೊಸದಾಗಿ ನಾಲ್ಕು ಅಂತಸ್ತಿನ ಮನೆಯನ್ನು ಕಟ್ಟಿಸಿಕೊಂಡಿದ್ದರು. ಆದರೆ ತಾನು ತಾನು ಜೂನಿಯರ್ ಇಂಜಿನಿಯರ್ ಎಂದು ಹೇಳಿಕೊಂಡ ಲೋಕೇಶ್, ನೀವು ಈ ಮನೆಯನ್ನು ನಿರ್ಮಿಸಲು ಕಾನೂನು ಬದ್ಧವಾಗಿ ಅನುಮತಿ ಪಡೆದಿಲ್ಲ. ಮನೆಯನ್ನು ನೆಲಸಮ ಮಾಡಬೇಕು. ಇಲ್ಲದಿದ್ದರೆ ತಮಗೆ 3 ಲಕ್ಷ ರೂ. ಲಂಚ ನೀಡಬೇಕು ಎಂದು ಬೆದರಿಕೆಯೊಡ್ಡಿದ್ದಾನೆ ಎನ್ನಲಾಗಿದೆ.
ಬಳಿಕ ಮಧ್ಯವರ್ತಿ ಪುಟ್ಟಣ್ಣ ಹಾಗೂ ಬಿಬಿಎಂಪಿ ವಾಟರ್ ಮ್ಯಾನ್ ಗೋವಿಂದರಾಜು ಎಂಬುವರ ಮೂಲಕ ಮಾತುಕತೆ ನಡೆಸಿ ರೂ. 1.5 ಲಕ್ಷ ಲಂಚ ನೀಡುವಂತೆ ಒಪ್ಪಿಸಿದ್ದರು ಎನ್ನಲಾಗುತ್ತಿದೆ. ಆದರೆ ನಿನ್ನೆ ಆರೋಪಿಗಳಾದ ಕೃಷ್ಣ ಕುಮಾರ್ ಮತ್ತು ಲೋಕೇಶ್ ಅವರು ಸಿಂಗಸಂದ್ರ ಬಿಬಿಎಂಪಿ ವಾರ್ಡ್ ಕಚೇರಿಯಲ್ಲಿ 50 ಸಾವಿರ ರೂ. ನಗದು ಹಾಗೂ 1 ಲಕ್ಷ ರೂ.ಗಳ ಚೆಕ್ ಪಡೆಯುತ್ತಿದ್ದರು. ಸಿಂಗಸಂದ್ರ ನಿವಾಸಿಯ ದೂರಿನ ಮೇಲೆ ದಾಳಿ ನಡೆಸಿದ ಬೆಂಗಳೂರು ನಗರ ಠಾಣೆಯ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಆರೋಪಿಗಳನ್ನು ಚೆಕ್ ಹಾಗೂ ನಗದು ಸಮೇತ ವಶಕ್ಕೆ ಪಡೆದಿದ್ದಾರೆ.
ತಾನು ಸರ್ಕಾರಿ ಅಧಿಕಾರಿಯೆಂದು ಸಾರ್ವಜನಿಕರಿಗೆ ವಂಚಿಸಿ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದ ಲೋಕೇಶ್, ಜೊತೆಗೆ ವಾಟರ್ ಮ್ಯಾನ್ ಗೋವಿಂದರಾಜು ಹಾಗೂ ಕೃಷ್ಣ ಕುಮಾರ್ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.