ಬೆಂಗಳೂರು: ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ್ ನಾಪತ್ತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ಮಾಡುವಂತೆ ಒತ್ತಾಯಿಸಿ ನಗರದ ಮೌರ್ಯ ಸರ್ಕಲ್ ಬಳಿ ಸಮಾನ ಮನಸ್ಕ ವಕೀಲರಿಂದ ಪ್ರತಿಭಟನೆ ನಡೆಸಲಾಯಿತು.
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಂದ ರಾಜ್ಯದ ಉದ್ಯಮಿಗಳ ಮೇಲೆ ನಡೆಯುತ್ತಿರುವ ಕಿರುಕುಳಕ್ಕೆ ಬ್ರೇಕ್ ಹಾಕಬೇಕಿದೆ. ಸಿದ್ಧಾರ್ಥ್ ಸಾವಿಗೂ ಮುನ್ನ ಪತ್ರದಲ್ಲಿ ಹೆಸರಿಸಿದ ಐಟಿ ಅಧಿಕಾರಿಗಳ ವಿರುದ್ಧ ತಕ್ಷಣ ಎಫ್ಐಆರ್ ದಾಖಲಿಸಿ ಅಂತ ಒತ್ತಾಯಿಸಿದರು. ಇನ್ನು ಆದಾಯ ತೆರಿಗೆ, ಇಡಿ, ಸಿಬಿಐ ಅಧಿಕಾರಿಗಳಿಂದ ಕರ್ನಾಟಕದ ಉದ್ಯಮಿಗಳನ್ನು ರಕ್ಷಿಸಿ ಅಂತ ಇದೇ ವೇಳೆ ಘೋಷಣೆ ಕೂಗಿದರು.
ಇದೇ ಸಂದರ್ಭದಲ್ಲಿ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ ರಂಗನಾಥ್ ಮಾತನಾಡಿ, ಸಿದ್ಧಾರ್ಥ ಅವರ ನಿಗೂಢ ಸಾವಿನ ಕುರಿತು ತನಿಖೆ ಆಗಬೇಕು. ಐಟಿ ಅಧಿಕಾರಿಗಳ ವಿರುದ್ಧ ಮೊಕದ್ದಮೆ ಹಾಕಬೇಕು ಎಂದರು.
ಇನ್ನು ಗುಜರಾತ್ನ ಉದ್ಯಮಿಗಳು ಸರ್ಕಾರಕ್ಕೆ ನಷ್ಟವನ್ನುಂಟು ಮಾಡಿ ಯಾವುದೇ ಭಯವಿಲ್ಲದೇ ಈ ದೇಶದಲ್ಲಿ ಓಡಾಡುತ್ತಿದ್ದಾರೆ. ಅವರಿಗೆ ಐಟಿಯವರು ಯಾವುದೇ ರೀತಿ ತೊಂದರೆ ಕೊಡುತ್ತಿಲ್ಲ ಅಂತ ರಂಗನಾಥ್ ಆರೋಪಿಸಿದರು.