ಬೆಂಗಳೂರು: ನೀರಾ... ಪಾನ ಪ್ರಿಯರ ಮೆಚ್ಚಿನ ಪಾನೀಯ. ಆದರೆ, ಕಿಕ್ ಏರುವ ನೀರಾ ಬೇರೆ... ಜಸ್ಟ್ ಪಾನೀಯ ರೂಪದಲ್ಲಿ ಸಿಗುವ ಆರೋಗ್ಯಕರ ನೀರಾ ಬೇರೆ ಅಂತಿದ್ದಾರೆ ಮಾರಾಟಗಾರರು. ಈ ಆರೋಗ್ಯಕರ ನೀರಾವನ್ನು ಮಾರಾಟ ಮಾಡಲು ತೋಟಗಾರಿಕೆ ಇಲಾಖೆ ಮುಂದಾಗಿದ್ದು ರಾಜಧಾನಿ ಬೆಂಗಳೂರಿನಲ್ಲೂ ನೀರಾ ಸಿಗುತ್ತಿದೆ.
ಬೆಂಗಳೂರಿನ ಜನ ನೀರಾ ಹುಡುಕಿಕೊಂಡು ಎಲ್ಲೋ ಹೋಗಬೇಕಾಗಿಲ್ಲ, ಲಾಲ್ ಬಾಗ್ ಒಳಗಿರುವ ಹಾಪ್ ಕಾಮ್ಸ್ ಬಳಿ ಬಂದರೆ ಸಾಕು. ನೀರಾ ಕುರಿತು ಇರುವ ತಪ್ಪು ಕಲ್ಪನೆಗಳನ್ನು ದೂರ ಮಾಡಲು ಅದನ್ನು ರಾಜಧಾನಿಯಲ್ಲಿ ಪರಿಚಯಿಸಲಾಗುತ್ತಿದೆ. ಈಗಾಗಲೇ ಭದ್ರಾವತಿಯ ಎಸ್ಪಿಒ ಜೊತೆ ಸಹಯೋಗ ಮಾಡಿಕೊಳ್ಳಲಾಗಿದ್ದು, ಪ್ರಾಯೋಗಿಕವಾಗಿ ಹಾಪ್ ಕಾಮ್ಸ್ನ 4 ಮಳಿಗೆಗಳಲ್ಲಿ ನೀರಾ ಪರಿಚಯಿಸಲು ತೋಟಗಾರಿಕೆ ಇಲಾಖೆ ಮುಂದಾಗಿದೆ. ಕರ್ನಾಟಕದಲ್ಲಿ ಪ್ರಥಮ ಬಾರಿಗೆ ನೈಸರ್ಗಿಕ ಆರೋಗ್ಯವರ್ಧಕ ಪೇಯ ಸಿಗುತ್ತಿದೆ.
ತೆಂಗಿನಿಂದ ನೀರಾ ತಯಾರಿಸಲಾಗುತ್ತದೆ. ನೀರಾ ಆರೋಗ್ಯಕರ ಹಾಗೂ ನೈಸರ್ಗಿಕ ಪೇಯ. ಅದರಲ್ಲಿ ಅನೇಕ ಬಗೆಯ ಪೌಷ್ಠಿಕಾಂಶಗಳು ಇರಲಿವೆ. ವಿಟಮಿನ್ ಎ, ಬಿ ಕಾಂಪ್ಲೆಕ್ಸ್ ಹಾಗೂ ಸಿ ಹಾಗೂ ಡಯಾಬಿಟಿಕ್ಗೆ ಇದು ರಾಮಬಾಣವಾಗಿ ಇರಲಿದೆಯಂತೆ.. ಈ ಬಗ್ಗೆ ಅಧ್ಯಯನಗಳು ಕೂಡ ನಡೆದಿವೆ. ನೀರಾವನ್ನು ಕಾರ್ಬೋನೇಟೆಡ್ ಡ್ರಿಂಕ್ ಆಗಿಯೂ ಬಳಕೆ ಮಾಡಬಹುದು. ನೀರಾವನ್ನು 4 ಸೆಲ್ಸಿಯಸ್ ಡಿಗ್ರಿಗಿಂತ ಕಡಿಮೆ ಇಟ್ಟರೆ ಅಲ್ಕೋಹಾಲ್ ಆಗೋದಿಲ್ಲ. ಇಂತಹ ಪ್ಯೂರ್ ನೀರಾವನ್ನು ಸಿಟಿ ಜನರು ಈಗಾಗಲೇ ಸೇವಿಸುತ್ತಿದ್ದಾರೆ.
240 ಎಂಎಲ್ಗೆ 50 ರೂಪಾಯಿಯಂತೆ ಮಾರಾಟ ಮಾಡಲಾಗುತ್ತಿದೆ. ಸದ್ಯ ಲಾಲ್ ಬಾಗ್ ಮತ್ತು ಕಾವೇರಿ ಭವನದ ಬಳಿ ಸಿಗುತ್ತಿದೆ. ಭದ್ರಾವತಿಯ ಒಂದು ಸಂಸ್ಥೆ ಮೊದಲ ಲೈಸೆನ್ಸ್ ಪಡೆದಿದ್ದು, ಅಲ್ಲಿಂದಲ್ಲೇ ನೀರಾ ಸರಬರಾಜು ಮಾಡಲಾಗುತ್ತಿದೆ ಅಂತಾರೆ ಮಾರಾಟಗಾರ ಶ್ರೀಕಾಂತ್.